ADVERTISEMENT

ಉತ್ತರ ಪ್ರದೇಶದಲ್ಲಿ ರೈಲು ದುರಂತ– ಸ್ಥಳೀಯ ಅಧಿಕಾರಿಗಳ ಮೇಲೆ ಬೆಟ್ಟು ಮಾಡಿದ ಪ್ರಾಥಮಿಕ ತನಿಖೆ

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 19:30 IST
Last Updated 20 ಆಗಸ್ಟ್ 2017, 19:30 IST
ಉತ್ತರ ಪ್ರದೇಶದ ಖತೌಲಿಯಲ್ಲಿ ಶನಿವಾರ ಹಳಿತಪ್ಪಿದ ಪುರಿ–ಹರಿದ್ವಾರ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳನ್ನು ಬೃಹತ್‌ ಕ್ರೇನ್‌ಗಳ ಮೂಲಕ ಭಾನುವಾರ ತೆರವುಗೊಳಿಸಲಾಯಿತು –ಪಿಟಿಐ ಚಿತ್ರ
ಉತ್ತರ ಪ್ರದೇಶದ ಖತೌಲಿಯಲ್ಲಿ ಶನಿವಾರ ಹಳಿತಪ್ಪಿದ ಪುರಿ–ಹರಿದ್ವಾರ ಉತ್ಕಲ್‌ ಎಕ್ಸ್‌ಪ್ರೆಸ್‌ ರೈಲಿನ ಬೋಗಿಗಳನ್ನು ಬೃಹತ್‌ ಕ್ರೇನ್‌ಗಳ ಮೂಲಕ ಭಾನುವಾರ ತೆರವುಗೊಳಿಸಲಾಯಿತು –ಪಿಟಿಐ ಚಿತ್ರ   

ಲಖನೌ/ನವದೆಹಲಿ: ಉತ್ತರ ಪ್ರದೇಶದ ಮುಜಫ್ಫರ್‌ನಗರದ ಖತೌಲಿಯಲ್ಲಿ ಶನಿವಾರ ಸಂಭವಿಸಿದ ರೈಲು ದುರಂತಕ್ಕೆ ಹಳಿಗಳ ನಿರ್ವಹಣೆ ಹೊಣೆ ಹೊತ್ತಿದ್ದ ರೈಲ್ವೆಯ ಸ್ಥಳೀಯ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬುದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.

ರೈಲು ಹಳಿ ತಪ್ಪಿದ ಸ್ಥಳದಿಂದ ಕೆಲವು ಮೀಟರ್‌ಗಳಷ್ಟು ದೂರದಲ್ಲಿ ಹಳಿಗಳ ದುರಸ್ತಿ ಕಾರ್ಯ ನಡೆಯುತ್ತಿತ್ತು. ಈ ಮಾರ್ಗದಲ್ಲಿ ರೈಲುಗಳು ಕಡಿಮೆ ವೇಗದಲ್ಲಿ ಚಲಿಸಬೇಕು ಎಂಬ ಸೂಚನೆಯೂ ಇತ್ತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.

ಹಳಿ ತಪ್ಪಿದ ಸಂದರ್ಭದಲ್ಲಿ ರೈಲು ಪ್ರತಿ ಗಂಟೆಗೆ 100 ಕಿ.ಮೀಗಿಂತಲೂ ಹೆಚ್ಚಿನ ವೇಗದಲ್ಲಿ ಚಲಿಸುತ್ತಿತ್ತು.

ADVERTISEMENT

‘ಹಳಿಗಳನ್ನು ದುರಸ್ತಿಗೊಳಿಸುತ್ತಿದ್ದುದನ್ನು ನೋಡಿದ ತಕ್ಷಣ ಚಾಲಕ ತುರ್ತು ಬ್ರೇಕ್‌ ಹಾಕಿರುವ ಸಾಧ್ಯತೆ ಇದೆ. ಇದರಿಂದಾಗಿ ರೈಲು ಹಳಿತಪ್ಪಿರಬಹುದು’ ಎಂದು ಮುಜಫ್ಫರ್‌ನಗರ ರೈಲ್ವೆ ನಿಲ್ದಾಣದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ದುರಸ್ತಿ ಮಾಡುತ್ತಿರುವ ಬಗ್ಗೆ ಹಳಿ ನಿರ್ವಹಣಾ ಜವಾಬ್ದಾರಿ ಹೊತ್ತಿರುವವರು ಯಾವುದೇ ಮಾಹಿತಿ ನೀಡಿರಲಿಲ್ಲ. ಹಳಿಗಳ ರಿಪೇರಿ ಕೆಲಸ ನಡೆಯುತ್ತಿತ್ತು ಎಂದು ಸ್ಥಳೀಯರು ಕೂಡ ಹೇಳಿದ್ದಾರೆ.

ರೈಲ್ವೆ ಕ್ರಾಸಿಂಗ್‌ ಕಾವಲುಗಾರ ಮತ್ತು ರೈಲ್ವೆಯ ಮತ್ತೊಬ್ಬ ಸಿಬ್ಬಂದಿ ಹಳಿ ನಿರ್ವಹಣಾ ಕೆಲಸದ ಬಗ್ಗೆ ಮಾತನಾಡುತ್ತಿದ್ದ ಧ್ವನಿಮುದ್ರಿಕೆಯ ತುಣುಕೊಂದು ಸ್ಥಳೀಯ ಮಾಧ್ಯಮಗಳಲ್ಲಿ ಭಾನುವಾರ ಪ್ರಸಾರವಾಗಿದೆ.

ಹಳಿಗಳು ಹಾನಿಗೀಡಾಗಿವೆ. ಆದರೆ, ಅವನ್ನು ಸರಿಯಾಗಿ ದುರಸ್ತಿ ಮಾಡಲಾಗಿಲ್ಲ.  ದುರಸ್ತಿ ಕೆಲಸದ ಬಗ್ಗೆ ರೈಲು ಚಾಲಕರಿಗೆ ಮಾಹಿತಿ ನೀಡುವ ಫಲಕವನ್ನೂ ಅಳವಡಿಸಲಾಗಿಲ್ಲ ಎಂದು ಕಾವಲು ಸಿಬ್ಬಂದಿ ಹೇಳುತ್ತಿರುವ ಮಾತುಗಳು ಈ ಧ್ವನಿಮುದ್ರಿಕೆಯಲ್ಲಿವೆ.

ಅಪಘಾತ ಸಂಭವಿಸುತ್ತಲೇ, ಕರ್ತವ್ಯದಲ್ಲಿದ್ದ ಗ್ಯಾಂಗ್‌–ಮ್ಯಾನ್‌ ಮತ್ತು ಹಳಿ ನಿರ್ವಹಿಸುವ ಇತರ ಸಿಬ್ಬಂದಿ ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಮುಜಫ್ಫರ್‌ನಗರ ರೈಲ್ವೆ ನಿಲ್ದಾಣದ ಮೂಲಗಳು ತಿಳಿಸಿವೆ.

₹25 ಲಕ್ಷ ವಿತರಣೆ: ದುರ್ಘಟನೆಯಲ್ಲಿ ಮೃತಪಟ್ಟವರ ಸಂಬಂಧಿಕರಿಗೆ ಮತ್ತು ಗಾಯಾಳುಗಳಿಗೆ ಇದುವರೆಗೆ ₹ 25 ಲಕ್ಷ ಪರಿಹಾರಧನ ವಿತರಿಸಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

‘ಶೇ 40ರಷ್ಟು ಪ್ರಯಾಣಿಕರು ಇ–ಟಿಕೆಟ್‌ ಯೋಜನೆ ಅಡಿಯಲ್ಲಿ ವಿಮೆ ಹೊಂದಿದ್ದಾರೆ. ಇದಲ್ಲದೇ ರೈಲ್ವೆಯು ತನ್ನದೇ ಆದ ಪರಿಹಾರ ನೀಡುತ್ತದೆ’ ಎಂದು ರೈಲ್ವೆ ಸಂಚಾರ ವಿಭಾಗದ ಸದಸ್ಯ ಮೊಹಮ್ಮದ್‌ ಜಮ್‌ಶೆದ್‌ ಹೇಳಿದ್ದಾರೆ.

ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ತಲಾ ₹3.5 ಲಕ್ಷ, ಗಂಭೀರ ಗಾಯಗೊಂಡವರಿಗೆ ₹ 50 ಸಾವಿರ ಮತ್ತು ಸಣ್ಣಪುಟ್ಟ ಗಾಯಗಳಾದವರಿಗೆ ₹25 ಸಾವಿರ ಪರಿಹಾರ ಧನವನ್ನು ರೈಲ್ವೆ ಸಚಿವ ಸುರೇಶ್‌ ಪ್ರಭು ಘೋಷಿಸಿದ್ದರು.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಕೂಡ ಮೃತಪಟ್ಟವರ ಕುಟುಂಬಗಳಿಗೆ ತಲಾ ₹ ಲಕ್ಷ ಮತ್ತು ಗಾಯಗೊಂಡವರಿಗೆ ₹50 ಸಾವಿರ ಪರಿಹಾರ ನೀಡುವುದಾಗಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.