ADVERTISEMENT

ಉಬರ್‌ ಚಾಲಕನಿಗೆ ನಕಲಿ ಪತ್ರ ಕೊಡಿಸಿದವನ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2014, 19:30 IST
Last Updated 13 ಡಿಸೆಂಬರ್ 2014, 19:30 IST

ನವದೆಹಲಿ(ಪಿಟಿಐ): ಮಹಿಳಾ ಪ್ರಯಾ ಣಿಕರೊಬ್ಬರ ಮೇಲೆ ಅತ್ಯಾಚಾರ ನಡೆಸಿ ಜೈಲು ಸೇರಿರುವ ಉಬರ್‌ ಟ್ಯಾಕ್ಸಿ ಚಾಲಕ ಶಿವಕುಮಾರ್‌ ಯಾದವ್‌ಗೆ ಅಖಿಲ ಭಾರತ ಪ್ರವಾಸಿ ಟ್ಯಾಕ್ಸಿ ಪರವಾನಗಿ ಪಡೆಯಲು ನಕಲಿ ನಡತೆ ಪ್ರಮಾಣಪತ್ರ ಕೊಡಿಸಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದಾರೆ.

ಪೊಲೀಸ್‌ ಅಧಿಕಾರಿ ಹೆಸರಿನಲ್ಲಿ ಅಖಿಲ ಭಾರತ ಪ್ರವಾಸಿ ಪರವಾನಿಗೆ ನೀಡಿದ ವ್ಯಕ್ತಿಯನ್ನು ದೆಹಲಿ ಪೊಲೀಸರು ಪತ್ತೆ ಹಚ್ಚಿದ್ದು, ತನಿಖೆಗೆ ಆದೇಶ ನೀಡಿದ್ದಾರೆ.

ಕಳೆದ ವಾರ ಯುವತಿ ಮೇಲೆ ಅತ್ಯಾಚಾರ ಎಸಗಿದ್ದ 32 ವರ್ಷದ ಟ್ಯಾಕ್ಸಿ ಚಾಲಕ ಶಿವಕುಮಾರ್ ಯಾದವ್‌ ಎಂಬಾತನಿಗೆ ದೆಹಲಿ ಹೆಚ್ಚುವರಿ ಡಿಸಿಪಿ ಹೆಸರಿನಲ್ಲಿ ಹಣಕಾಸು ಸಂಸ್ಥೆಯ ಹೆಸರಿನಲ್ಲಿ ಏಜೆಂಟ್‌ನೊಬ್ಬ ನಕಲಿ ನಡತೆ ಪತ್ರ ನೀಡಿದ್ದಾನೆ. ಇದನ್ನು ಸುಮಿತ್‌ ಶರ್ಮಾ ಎಂಬಾತ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದು, ಇದನ್ನು ಮತ್ತೊಬ್ಬನಿಂದ ಸಂಗ್ರಹಿಸಲಾಗಿದೆ ಎಂದಿದ್ದಾರೆ.

‘ನಕಲಿ ಪ್ರಮಾಣ ಪತ್ರ ನೀಡಿದ ವ್ಯಕ್ತಿಯನ್ನು ಆರೋಪಿ ಗುರುತಿಸಿದ್ದು, ತನಿಖೆಗೆ ಆದೇಶ ನೀಡಲಾಗಿದೆ. ಇದರ ಸಂಪೂರ್ಣ ತನಿಖೆ ನಂತರವೇ ಬಂಧನ ಮಾಡಬಹುದಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ಆಯಕ್ತ (ಉತ್ತರ) ಮಧುರ್‌ ಶರ್ಮಾ ಅವರು ತಿಳಿಸಿದ್ದಾರೆ.

ಹಳೆಯ ದಾಖಲೆಗಳನ್ನು ಸ್ಕ್ಯಾನ್‌ ಮಾಡಿ, ಅದರ ಮೇಲೆ ಕಾಗದದ ತುಣುಕುಗಳನ್ನು ಇಟ್ಟು ನಂತರ ಪೋಟೊ ಅಂಟಿಸಿ ದಾಖಲೆಗಳನ್ನು ಸೃಷ್ಟಿ ಮಾಡಲಾಗಿದೆ ಎಂದು ವಿವರಿಸಿದರು.

ಈ ದಾಖಲೆಗಳು ಲಭಿಸಿದ ನಂತರ ಆರೋಪಿ ಹೊಸ ಕಾರು ಖರೀದಿಸಿದ್ದ. ಇದಕ್ಕೆ  ಲಜಪತ್‌ ಮೂಲದ ಹಣಕಾಸು ಸಂಸ್ಥೆಯು ಕಾರು ಸಾಲ ನೀಡಿತ್ತು.
ಅಖಿಲ ಭಾರತ ಪ್ರವಾಸಿ ಪರವಾನ­ಗಿ ಇರುವ ಕಾರಣದಿಂದಲೇ ಸಂಸ್ಥೆಯು ಸಾಲ ನೀಡಿತ್ತು ಎನ್ನಲಾಗಿದೆ.

ಜೈಲಿನಲ್ಲಿ ಚಾಲಕನ ಮೇಲೆ ತೀವ್ರ ನಿಗಾ
ನವದೆಹಲಿ (ಪಿಟಿಐ): ದೆಹಲಿಯ 27 ವರ್ಷದ ಯುವತಿ ಮೇಲೆ ಕಾರಿನಲ್ಲಿ ಅತ್ಯಾಚಾರ ಎಸಗಿ ಬಂಧನಕ್ಕೊಳಗಾ­ಗಿದ್ದ ಟ್ಯಾಕ್ಸಿ ಸೇವಾ ಸಂಸ್ಥೆ ಉಬರ್‌ನ ಕಾರು ಚಾಲಕ ಶಿವಕುಮಾರ್‌ ಯಾದವ್‌ನನ್ನು ತಿಹಾರ್ ಜೈಲಿನಲ್ಲಿರಿಸ­ಲಾಗಿದ್ದು, ತೀವ್ರ ನಿಗಾ ವಹಿಸಲಾಗಿದೆ.

ಆರೋಪಿಯನ್ನು ಮೂರು ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಯಾದವ್‌ನನ್ನು ಇರಿಸಿರುವ ಕೊಠಡಿಗೆ ಬಿಗಿ ಭದ್ರತೆ ಒದಗಿಸಲಾಗಿದೆ ಎಂದು ತಿಹಾರ್‌ ಜೈಲಿನ ಮೂಲಗಳು  ತಿಳಿಸಿದೆ.

ನಗರ ಸಿವಿಲ್‌ ನ್ಯಾಯಾಲಯದ  ಆದೇಶದ ಮೇರೆಗೆ ಯಾದವ್‌ನನ್ನು ಶುಕ್ರವಾರ ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗಿತ್ತು. ಇದಕ್ಕೂ ಮೊದಲು ಆತನಿಗೆ ದೀನ್ ದಯಾಳ್‌ ಉಪಾಧ್ಯಾಯ ಆಸ್ಪತ್ರೆಯಲ್ಲಿ ವೈದ್ಯ ಕೀಯ ಪರೀಕ್ಷೆ ನಡೆಸಲಾಯಿತು. ‘ಆರೋಪಿಯ ವರ್ತನೆ ಸ್ವಾಭಾವಿಕವಾಗಿದೆ. ಯಾವುದೇ ಶಂಕೆ ವ್ಯಕ್ತವಾಗಿಲ್ಲ’ ಎಂದು ಕಾರಾಗೃಹದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT