ADVERTISEMENT

‘ಉರಿ’ ದಾಳಿಗೆ ಪ್ರತೀಕಾರ

ಪಿಒಕೆಯೊಳಗೆ ನುಗ್ಗಿ ಭಾರತೀಯ ಸೇನೆಯಿಂದ ಉಗ್ರರ ಏಳು ಶಿಬಿರ ನಾಶ

ಪಿಟಿಐ
Published 29 ಸೆಪ್ಟೆಂಬರ್ 2016, 19:49 IST
Last Updated 29 ಸೆಪ್ಟೆಂಬರ್ 2016, 19:49 IST
‘ಉರಿ’ ದಾಳಿಗೆ ಪ್ರತೀಕಾರ
‘ಉರಿ’ ದಾಳಿಗೆ ಪ್ರತೀಕಾರ   

ನವದೆಹಲಿ (ಪಿಟಿಐ): ಭಾರತದೊಳಕ್ಕೆ ನುಸುಳಲು ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಹೊಂಚು ಹಾಕಿದ್ದ ಉಗ್ರರನ್ನು ಸದೆ ಬಡಿಯುವುದಕ್ಕಾಗಿ ಭಾರತೀಯ ಸೇನೆಯ ವಿಶೇಷ ಪಡೆಯು ನಿಯಂತ್ರಣ ರೇಖೆಯನ್ನು ದಾಟಿ ‘ನಿರ್ದಿಷ್ಟ ದಾಳಿ’ (ಸರ್ಜಿಕಲ್‌) ನಡೆಸಿದೆ.

ಉರಿ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿದ ನಂತರ, ದಾಳಿಗೆ ಕಾರಣರಾದವರು ‘ಶಿಕ್ಷೆಯಿಂದ ತಪ್ಪಿಸಿಕೊಳ್ಳುವುದು’ ಸಾಧ್ಯವಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಕೆಲವೇ ದಿನಗಳಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ಹೋಗಿ ಸೇನೆ ದಾಳಿ ನಡೆಸಿದೆ. ಪಿಒಕೆಯೊಳಗೆ ಹೋಗಿ ಸೇನೆಯು ಇಂತಹ ದಾಳಿ ನಡೆಸಿದ್ದು ಇದೇ ಮೊದಲು.

ಸೆ.28–29ರ ನಡುವಣ ರಾತ್ರಿ ಸೇನೆ ನಡೆಸಿದ ಕಾರ್ಯಾಚರಣೆಯಲ್ಲಿ ಉಗ್ರರ ಏಳು ಶಿಬಿರಗಳನ್ನು ನಾಶ ಮಾಡಲಾಗಿದೆ.   ಹಲವು ಉಗ್ರರು ದಾಳಿಗೆ ಬಲಿಯಾಗಿದ್ದಾರೆ ಎಂದು ಸೇನೆ ತಿಳಿಸಿದೆ. ಆದರೆ ಸತ್ತವರ ಸಂಖ್ಯೆ ಎಷ್ಟು ಎಂಬುದನ್ನು ಬಹಿರಂಗಪಡಿಸಿಲ್ಲ. ಐದೂವರೆ ತಾಸು ನಡೆದ ಕಾರ್ಯಾಚರಣೆಯಲ್ಲಿ ಹೆಲಿಕಾಪ್ಟರ್‌ಗಳನ್ನು  ಬಳಸಿಕೊಳ್ಳಲಾಗಿತ್ತು.

‘ಎಲ್‌ಒಸಿಯಿಂದ 2–3 ಕಿಲೋಮೀಟರ್‌ ವ್ಯಾಪ್ತಿಯಲ್ಲಿ ಉಗ್ರರು ಶಿಬಿರಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಒಂದು ವಾರಕ್ಕೂ ಹೆಚ್ಚಿನ ಕಾಲದಿಂದ ಈ ಶಿಬಿರಗಳ ಮೇಲೆ ಸೇನೆ ನಿಗಾ ಇರಿಸಿತ್ತು’ ಎಂದು ಕೇಂದ್ರ ಸಚಿವ ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪೂಂಚ್‌ ಮತ್ತು ಕುಪ್ವಾರಾ ಪ್ರದೇಶಗಳಲ್ಲಿನ ಐದಾರು ಸ್ಥಳಗಳ ಮೇಲೆ ದಾಳಿ ನಡೆಸಲಾಗಿದೆ. ಈ ದಾಳಿಯಲ್ಲಿ ಸೇನೆಯಲ್ಲಿ ಯಾವುದೇ ಸಾವು ನೋವು, ಹಾನಿ ಉಂಟಾಗಿಲ್ಲ ಎಂದು ಹೇಳಿದ್ದಾರೆ.

ಭಾರತದ ಮೇಲೆ ಉಗ್ರರ ಇನ್ನಷ್ಟು ದಾಳಿ ನಡೆಯುವುದನ್ನು ತಡೆಯುವುದಕ್ಕಾಗಿ ದಿಢೀರ್‌ ದಾಳಿ ನಡೆಸಲು ನಿರ್ಧರಿಸಲಾಯಿತು. ಸೇನಾ ಕಾರ್ಯಾಚರಣೆಗಳ ಮಹಾ ನಿರ್ದೇಶಕ (ಡಿಜಿಎಂಒ) ಲೆ. ಜ. ರಣಬೀರ್‌ ಸಿಂಗ್‌ ಅವರು ದಾಳಿಗೆ ಆದೇಶ ನೀಡಿದ್ದರು.

ಉತ್ತರ ಕಾಶ್ಮೀರದ ಉರಿಯಲ್ಲಿರುವ ಸೇನಾ ಶಿಬಿರದ ಮೇಲೆ ಉಗ್ರರು ದಾಳಿ ನಡೆಸಿ 18 ಯೋಧರ ಸಾವಿಗೆ ಕಾರಣರಾದ 11 ದಿನಗಳ ನಂತರ ನಿಯಂತ್ರಣ ರೇಖೆಯಾಚೆಗೆ ನುಗ್ಗಿ ಸೇನೆ ಕಾರ್ಯಾಚರಣೆ ನಡೆಸಿದೆ.

‘ನಿಯಂತ್ರಣ ರೇಖೆಯ ಆಚೆಗೆ ಕೆಲವು ಶಿಬಿರಗಳಲ್ಲಿ ಉಗ್ರರು ನೆಲೆಯೂರಿದ್ದು  ಜಮ್ಮು ಮತ್ತು ಕಾಶ್ಮೀರ ಹಾಗೂ ದೇಶದ ವಿವಿಧ ನಗರಗಳ ಮೇಲೆ ದಾಳಿ ನಡೆಸುವ ಸಂಚು ರೂಪಿಸಿದ್ದಾರೆ ಎಂಬ ನಿಖರ ಮತ್ತು ವಿಶ್ವಾಸಾರ್ಹ ಮಾಹಿತಿಯ ಆಧಾರದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ’ ಎಂದು ಜ. ಸಿಂಗ್‌ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

‘ಇಂತಹ ಯಾವುದೇ ದಾಳಿ ನಡೆದಿಲ್ಲ. ಗಡಿಯಲ್ಲಿ ನಡೆದ ಗುಂಡಿನ ಚಕಮಕಿಯನ್ನೇ ಗುರಿ ನಿರ್ದಿಷ್ಟ ದಾಳಿ ಎಂದು ಭಾರತ ಹೇಳುತ್ತಿದೆ’ ಎಂದು ಪಾಕಿಸ್ತಾನ ಸೇನೆ ಪ್ರತಿಕ್ರಿಯೆ ನೀಡಿದೆ.

ರಾಯಭಾರಿಗಳಿಗೆ ಮಾಹಿತಿ: ‘ನಿರ್ದಿಷ್ಟ ದಾಳಿ’ ನಡೆದು ಕೆಲವೇ ತಾಸುಗಳಲ್ಲಿ ಈ ಬಗ್ಗೆ ನವದೆಹಲಿಯಲ್ಲಿರುವ ವಿವಿಧ ದೇಶಗಳ ರಾಯಭಾರಿಗಳಿಗೆ ಮಾಹಿತಿ ನೀಡಲಾಗಿದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗ ಳಾದ ಅಮೆರಿಕ, ಬ್ರಿಟನ್‌, ರಷ್ಯಾ, ಫ್ರಾನ್ಸ್‌ ಮತ್ತು ಚೀನಾದ ರಾಯಭಾರಿಗಳಿಗೆ ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌  ಮಾಹಿತಿ ನೀಡಿದರು.

ನಿರ್ದಿಷ್ಟ ದಾಳಿ ಎಂದರೆ: ವೈರಿ ನೆಲೆಯ ಮೇಲೆ ದಿಢೀರ್ ದಾಳಿ; ದಾಳಿ ಮಾಡುವ ತುಕಡಿಗೆ ಯಾವುದೇ ಹಾನಿ ಆಗದಂತೆ ವೈರಿಗೆ ಭಾರಿ ಹಾನಿ ಉಂಟು ಮಾಡುವುದು

***
* 2015 ಜೂನ್‌ನಲ್ಲಿ ಮ್ಯಾನ್ಮಾರ್‌ನ ಕಾಡಿನೊಳಗೆ ನುಗ್ಗಿದ್ದ ಭಾರತೀಯ ಸೇನೆಯ 70 ಕಮಾಂಡೊಗಳು 40 ನಿಮಿಷದ ಕಾರ್ಯಾಚರಣೆಯಲ್ಲಿ 38 ನಾಗಾ ಉಗ್ರರನ್ನು ಹತ್ಯೆ ಮಾಡಿದ್ದರು

* ಈ ಬಾರಿ ಜಮ್ಮು ಮತ್ತು ಕಾಶ್ಮೀರದಲ್ಲಿ ನಿಯಂತ್ರಣ ರೇಖೆಯಾಚೆಗೆ ನುಗ್ಗಿ ಪೂಂಚ್‌ ಮತ್ತು ಕುಪ್ವಾರ ಪ್ರದೇಶದಲ್ಲಿ ನಿರ್ದಿಷ್ಟ ದಾಳಿ ನಡೆಸಲಾಗಿದೆ.

* ಕೆಲ್‌, ಲಿಪಾ, ಹಾಟ್‌ಸ್ಪ್ರಿಂಗ್‌ ಮತ್ತು ಭಿಂಬರ್‌ ಕಾರ್ಯಾಚರಣೆ ನಡೆದ ಸ್ಥಳಗಳು

* ಭಾರತದೊಳಕ್ಕೆ ನುಸುಳಲು ಸಜ್ಜಾಗಿದ್ದ ಉಗ್ರರು ಇಲ್ಲಿನ ಶಿಬಿರಗಳಲ್ಲಿ ಅಡಗಿದ್ದರು

*   ದಾಳಿ ನಡೆದ ಸ್ಥಳಗಳು ಎಲ್‌ಒಸಿಯಿಂದ 1ರಿಂದ 3 ಕಿಲೋಮೀಟರ್‌ ದೂರದಲ್ಲಿವೆ

* ಪಾಕಿಸ್ತಾನ ನಿಯಂತ್ರಣದಲ್ಲಿರುವ ಪ್ರದೇಶಕ್ಕೆ ಭಾರತೀಯ ಸೇನೆ ನುಗ್ಗಿ ನಡೆಸಿದ ಮೊದಲ ನಿರ್ದಿಷ್ಟ ಕಾರ್ಯಾಚರಣೆ ಇದು

* ಗಮನ ಬೇರೆಡೆ ಸೆಳೆಯುವುದಕ್ಕಾಗಿ ಫಿರಂಗಿ ದಾಳಿ ತಂತ್ರ

* ಹಲವು ಉಗ್ರರ ಸಾವು, ಆದರೆ ಸಾವಿನ ಬಗ್ಗೆ ಸೇನೆ ಯಾವುದೇ ಅಂಕಿ ಅಂಶ ಬಹಿರಂಗ ಮಾಡಿಲ್ಲ

* ಪಾಕಿಸ್ತಾನದ ಸೇನಾ ಕಾರ್ಯಾಚರಣೆ ಮಹಾನಿರ್ದೇಶಕರಿಗೆ ದಾಳಿಯ ಬಗ್ಗೆ ಮಾಹಿತಿ ನೀಡಲಾಗಿದೆ

* ಯಾವುದೇ ಪರಿಸ್ಥಿತಿ ಎದುರಿಸುವುದಕ್ಕೆ ಸೇನೆ ಸನ್ನದ್ಧ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.