ADVERTISEMENT

ಉರಿ ದಾಳಿ: ಬಾಸಿತ್‌ಗೆ ಪುರಾವೆ ಹಸ್ತಾಂತರ

ಉಗ್ರ ಕೃತ್ಯ ನಡೆಸಿದವರು ಪಾಕಿಸ್ತಾನದವರು: ಹೈಕಮಿಷನರ್‌ ಕರೆಸಿ ಖಂಡನೆ

ಪಿಟಿಐ
Published 27 ಸೆಪ್ಟೆಂಬರ್ 2016, 19:30 IST
Last Updated 27 ಸೆಪ್ಟೆಂಬರ್ 2016, 19:30 IST
ಉರಿ ದಾಳಿ: ಬಾಸಿತ್‌ಗೆ ಪುರಾವೆ ಹಸ್ತಾಂತರ
ಉರಿ ದಾಳಿ: ಬಾಸಿತ್‌ಗೆ ಪುರಾವೆ ಹಸ್ತಾಂತರ   

ನವದೆಹಲಿ: ಪಾಕಿಸ್ತಾನದ ಹೈಕಮಿಷನರ್‌ ಅಬ್ದುಲ್‌ ಬಾಸಿತ್‌ ಅವರನ್ನು ಹತ್ತು ದಿನಗಳಲ್ಲಿ ಎರಡನೇ ಬಾರಿಗೆ ಕರೆಸಿಕೊಂಡಿರುವ ವಿದೇಶಾಂಗ ಸಚಿವಾಲಯ, ಉರಿ ಸೇನಾ ಶಿಬಿರದ ಮೇಲಿನ ದಾಳಿ ಗಡಿಯಾಚಿನಿಂದ ನಡೆದಿದೆ ಎಂಬುದನ್ನು ಸಮರ್ಥಿಸುವ ಪುರಾವೆಗಳನ್ನು ನೀಡಿದೆ. ಜತೆಗೆ ಗಡಿಯಾಚಿನಿಂದ ನಿರಂತರವಾಗಿ ದಾಳಿ ನಡೆಯುತ್ತಿರುವುದನ್ನು ಭಾರತ ಖಂಡಿಸಿದೆ.

ಉರಿ ದಾಳಿಯಲ್ಲಿ ಬಲಿಯಾದ ಒಬ್ಬ ಉಗ್ರನನ್ನು ಮುಜಫ್ಫರಬಾದ್‌ನ ದರ್ಬಾಂಗ್‌ ನಿವಾಸಿ ಫಿರೋಜ್‌ ಎಂಬ ವರ ಮಗ ಹಫೀಜ್‌ ಅಹ್ಮದ್‌ ಎಂದು ಗುರುತಿಸಲಾಗಿದೆ ಎಂಬ ಮಾಹಿತಿಯನ್ನು ವಿದೇಶಾಂಗ ಕಾರ್ಯದರ್ಶಿ ಎಸ್‌. ಜೈಶಂಕರ್‌ ಅವರು ಬಾಸಿತ್‌ಗೆ ತಿಳಿಸಿದರು. ಪಾಕಿಸ್ತಾನದಿಂದ ಉಗ್ರರಿಗೆ ನಿರ್ದೇಶನ ನೀಡುತ್ತಿದ್ದವರ ಮಾಹಿತಿ ಯನ್ನೂ ಬಾಸಿತ್‌ಗೆ ಹಸ್ತಾಂತರಿಸಲಾಗಿದೆ ಎಂದು ವಿದೇಶಾಂಗ ವಕ್ತಾರ ವಿಕಾಸ್‌ ಸ್ವರೂಪ್‌ ತಿಳಿಸಿದ್ದಾರೆ.

ಇದೇ 21ರಂದು ಉರಿ ವಲಯದ ಗ್ರಾಮವೊಂದರ ಜನರು ಪಾಕ್‌ ಆಕ್ರಮಿತ ಕಾಶ್ಮೀರದ ಇಬ್ಬರನ್ನು ಹಿಡಿದು ಭದ್ರತಾ ಪಡೆಗಳಿಗೆ ಹಸ್ತಾಂತರಿಸಿದ್ದಾರೆ. ಉರಿ ಮೇಲೆ ದಾಳಿ ನಡೆಸಿದ ಉಗ್ರರು ನಿಯಂತ್ರಣ ರೇಖೆ ನುಸುಳಿ ಒಳಬರಲು ಈ ಇಬ್ಬರು ನೆರವಾಗಿದ್ದಾರೆ ಎಂಬ ವಿಚಾರವನ್ನು ಬಾಸಿತ್‌ಗೆ ತಿಳಿಸಲಾಗಿದೆ.

ಇವರನ್ನು ಫೈಜಲ್‌ ಹುಸೇನ್‌ ಅವಾನ್‌ (20) ಮತ್ತು ಯಾಸೀನ್‌ ಖುರ್ಷಿದ್‌ (19) ಎಂದು ಗುರುತಿಸ ಲಾಗಿದೆ. ಈ ಇಬ್ಬರೂ ಮುಜಫ್ಫರಬಾದ್‌ ನವರು.  ಉರಿ ಸೇನಾ ಶಿಬಿರದಲ್ಲಿ 18 ಯೋಧರ ಸಾವಿಗೆ ಕಾರಣವಾದ ಉಗ್ರರಿಗೆ ನೆರವು ಮತ್ತು ಮಾರ್ಗದರ್ಶನ ನೀಡಿರುವುದಾಗಿ ವಿಚಾರಣೆ ವೇಳೆ ಅವಾನ್‌ ಒಪ್ಪಿಕೊಂಡಿದ್ದಾನೆ. 

ಇದೇ 23ರಂದು ಮೊಲು ವಲಯದಲ್ಲಿ ಪಾಕಿಸ್ತಾನದ ಪ್ರಜೆ ಅಬ್ದುಲ್‌ ಖಯ್ಯೂಂನನ್ನು ಬಂಧಿಸಲಾಗಿದೆ. ಲಷ್ಕರ್‌–ಎ–ತಯಬಾದಿಂದ ಮೂರು ವಾರಗಳ ಭಯೋತ್ಪಾದನೆ ಚಟುವಟಿಕೆ ತರಬೇತಿ ಪಡೆದಿರುವ ಮಾಹಿತಿಯನ್ನು ಈತ ನೀಡಿದ್ದಾನೆ ಎಂಬ ಮಾಹಿತಿ ಯನ್ನೂ ಬಾಸಿತ್‌ಗೆ ತಿಳಿಸಲಾಗಿದೆ.

ಈ ಮೂರು ಜನರಿಗೆ ಪಾಕಿಸ್ತಾನ ಕಾನ್ಸುಲ್‌ ಜತೆಗೆ ಸಂಪರ್ಕ ಒದಗಿಸಲಾ ಗುವುದು ಎಂದು ಬಾಸಿತ್‌ಗೆ ಜೈಶಂಕರ್‌ ಅವರು ತಿಳಿಸಿದ್ದಾರೆ.
ಸೆ. 18ರಂದು ಉರಿ ಸೇನಾ ಶಿಬಿರದ ಮೇಲೆ ಉಗ್ರರ ದಾಳಿ ನಡೆದ ನಂತರ ಎರಡನೇ ಬಾರಿ ಬಾಸಿತ್‌ ಅವರನ್ನು ವಿದೇಶಾಂಗ ಸಚಿವಾಲಯ ಕರೆಸಿಕೊಂಡಿದೆ.

ಪಾಕ್‌ ಪರಮಾಪ್ತ ರಾಷ್ಟ್ರ: ಪುನರ್ ಪರಿಶೀಲನೆಗೆ ನಾಳೆ ಸಭೆ: ಪಾಕಿಸ್ತಾನಕ್ಕೆ ‘ಪರಮಾಪ್ತ ರಾಷ್ಟ್ರ’ ಎಂಬ ಸ್ಥಾನ ನೀಡಿರುವುದನ್ನು ಪುನರ್‌ ಪರಿಶೀಲಿಸಲು ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಸಭೆ ಕರೆದಿದ್ದಾರೆ.

ಭಾರತವು 1996ರಲ್ಲಿ ಈ ಸ್ಥಾನವನ್ನು ಪಾಕಿಸ್ತಾನಕ್ಕೆ ಸ್ವಯಂಪ್ರೇರಣೆಯಿಂದ ನೀಡಿತ್ತು. ಆದರೆ, ಉರಿ ಸೇನಾ ಶಿಬಿರದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ನಂತರ, ಪಾಕಿಸ್ತಾನಕ್ಕೆ ಪ್ರತಿಕ್ರಿಯೆ ನೀಡುವ ಬಗೆ ಕುರಿತು ಭಾರತ ಹುಡುಕಾಟ ನಡೆಸಿದೆ. ಅದರ ಭಾಗವಾಗಿ, ಈ ಸ್ಥಾನ ನೀಡಿರುವ ಕ್ರಮದ ಪುನರ್‌ ಪರಿಶೀಲನೆಗೆ ಸಭೆ ನಡೆಯಲಿದೆ.

ವಿಶ್ವ ವ್ಯಾಪಾರ ಸಂಘಟನೆಯ (ಡಬ್ಲ್ಯೂಟಿಒ) ವ್ಯಾಪಾರ ಒಪ್ಪಂದಕ್ಕೆ (ಗ್ಯಾಟ್) ಭಾರತ ಮತ್ತು ಪಾಕಿಸ್ತಾನ ಸಹಿ ಹಾಕಿವೆ. ಈ ಒಪ್ಪಂದದ ಅನ್ವಯ ಎರಡೂ ದೇಶಗಳು, ಪರಸ್ಪರರನ್ನು ಹಾಗೂ ಡಬ್ಲ್ಯೂಟಿಒ ಸಂಘಟನೆಯ ಸದಸ್ಯ ರಾಷ್ಟ್ರಗಳನ್ನು ‘ಆಪ್ತ ವಾಣಿಜ್ಯ ಪಾಲುದಾರರು’ ಎಂದು ಪರಿಗಣಿಸಬೇಕು. ಆದರೆ ಭಾರತಕ್ಕೆ ಈ ಸ್ಥಾನವನ್ನು ಪಾಕಿಸ್ತಾನ ನೀಡಿಲ್ಲ.

ಅಸೋಚಾಂ ವರದಿಯೊಂದರ ಅನ್ವಯ, ಭಾರತದ ಒಟ್ಟು ವ್ಯಾಪಾರ ವಹಿವಾಟಿನಲ್ಲಿ ಪಾಕಿಸ್ತಾನದ ಪಾಲು ಶೇಕಡ 0.41ರಷ್ಟು ಮಾತ್ರ.

ನುಸುಳುಕೋರರನ್ನು ವಶಕ್ಕೆ ಪಡೆದ ಎನ್‌ಐಎ
ಅವಾನ್‌ ಮತ್ತು ಖುರ್ಷಿದ್‌ರನ್ನು ಸೇನೆಯಿಂದ ರಾಷ್ಟ್ರೀಯ ತನಿಖಾ ತಂಡವು (ಎನ್‌ಐಎ) ತನ್ನ ವಶಕ್ಕೆ ಪಡೆದಿದೆ. ಪಾಕ್‌ ಆಕ್ರಮಿತ ಕಾಶ್ಮೀರ ಪ್ರದೇಶದ ಇವರನ್ನು ಸೇನೆ ಬಂಧಿ ಸಿತ್ತು. ದಾಳಿಯಲ್ಲಿ ಹತನಾದ ನಾಲ್ವರು ಉಗ್ರರಲ್ಲಿ ಒಬ್ಬ ಉಗ್ರ, ಪಾಕ್‌ ಆಕ್ರ ಮಿತ ಕಾಶ್ಮೀರದವನು ಎಂಬುದನ್ನು ಎನ್‌ಐಎ ಪತ್ತೆ ಮಾಡಿದೆ.

‘ನಾವು ತಿಳಿಯದೆಯೇ ಭಾರತದ ಗಡಿಯೊಳಕ್ಕೆ ಬಂದಿದ್ದೇವೆ’ ಎಂದು ಆರಂಭ ದಲ್ಲಿ ಹೇಳಿಕೊಂಡಿದ್ದರು. ಆದರೆ ವಿಚಾರಣೆ ತೀವ್ರಗೊಂಡ ನಂತರ, ‘ಇಬ್ಬರು ಮಾರ್ಗದರ್ಶಿಗಳು ಉಗ್ರರಿಗೆ ಭಾರತದೊಳಕ್ಕೆ ನುಸುಳಲು ಸಹಾಯ ಮಾಡಿದ್ದಾರೆ’ ಎಂಬ ಮಾಹಿತಿ ನೀಡಿದರು. ದಾಳಿಯಲ್ಲಿ ಭಾಗಿಯಾಗಿದ್ದ ಉಗ್ರ ನೊಬ್ಬನ ಗುರುತು ಪತ್ತೆಗೂ ಇವರು ನೆರವಾದರು ಎಂದು ಗೊತ್ತಾಗಿದೆ. ಈಗ ಬಂಧಿಸಿರುವ ಇಬ್ಬರನ್ನು ನವದೆಹಲಿಗೆ ಕರೆತರಲಾಗುವುದು. ಅಲ್ಲಿ ವಿವಿಧ ಭದ್ರತಾ ಸಂಸ್ಥೆಗಳ ಅಧಿಕಾರಿಗಳು ಇವರನ್ನು ತನಿಖೆಗೆ ಒಳಪಡಿಸಲಿದ್ದಾರೆ ಎಂದು ಗೊತ್ತಾಗಿದೆ.

‘ಉರಿ: ಭಾರತವೇ  ಹೂಡಿದ ಸಂಚು’
ಇಸ್ಲಾಮಾಬಾದ್‌ :
ಉರಿ ಸೇನಾ ನೆಲೆಯ ಮೇಲೆ ನಡೆದ ದಾಳಿ ‘ಭಾರತವೇ ಹೂಡಿದ ಸಂಚು’ ಎಂದು ಪಾಕಿಸ್ತಾನದ ರಕ್ಷಣಾ ಸಚಿವ ಖ್ವಾಜಾ ಆಸಿಫ್‌ ಹೇಳಿದ್ದಾರೆ.

ದಾಳಿಯಲ್ಲಿ ಪಾಕಿಸ್ತಾನ ಮೂಲದ ಉಗ್ರರ  ಕೈವಾಡವಿದೆ ಎಂಬುದನ್ನು ಸಾಬೀತು ಪಡಿಸಲು  ಭಾರತ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸದಿರುವುದು     ಇದಕ್ಕೆ ಸಾಕ್ಷಿ ಎಂದು ಆಸಿಫ್‌ ಹೇಳಿರುವುದಾಗಿ ಡಾನ್‌ ಪತ್ರಿಕೆ ವರದಿ ಮಾಡಿದೆ.

ವಿಶ್ವಸಂಸ್ಥೆ : ಕಾಶ್ಮೀರ ಅಖಂಡ ಭಾರತದ ಅವಿಭಾಜ್ಯ ಅಂಗ ಎಂಬುದನ್ನು ಸ್ಪಷ್ಟ ಮತ್ತು ಗಟ್ಟಿದನಿಯ ಸಂದೇಶದೊಂದಿಗೆ ಪಾಕಿಸ್ತಾನಕ್ಕೆ ತಿಳಿಸಬೇಕು ಎಂದು ಭಾರತ  ಹೇಳಿದೆ.

ಕಾಶ್ಮೀರ ಅಖಂಡ ಭಾರತದ ಅಂಗವಲ್ಲ ಎಂದು ವಿಶ್ವಸಂಸ್ಥೆಯಲ್ಲಿ ಪಾಕಿಸ್ತಾನದ ಪ್ರತಿನಿಧಿ ಮಲಿಹಾ ಲೋಧಿ ನೀಡಿದ ಹೇಳಿಕೆಗೆ ಭಾರತ ಈ ರೀತಿ ಪ್ರತಿಕ್ರಿಯೆ ನೀಡಿದೆ.

ಒಪ್ಪಂದ ಉಲ್ಲಂಘನೆ ಯುದ್ಧಕ್ಕೆ ಪ್ರಚೋದನೆ
ಇಸ್ಲಾಮಾಬಾದ್‌ :
ಸಿಂಧೂ ನದಿ ನೀರು ಒಪ್ಪಂದವನ್ನು ಭಾರತ ಉಲ್ಲಂಘಿಸಿದರೆ ವಿಶ್ವಸಂಸ್ಥೆ ಮತ್ತು ಅಂತರರರಾಷ್ಟ್ರೀಯ ನ್ಯಾಯಾಲಯದ ಮೊರೆಹೋಗುವುದಾಗಿ  ಪಾಕಿಸ್ತಾನದ   ಪ್ರಧಾನ ಮಂತ್ರಿಯ ಸಲಹೆಗಾರ ಸರ್ತಾಜ್‌ ಅಜೀಜ್‌ ಮಂಗಳವಾರ ಹೇಳಿದ್ದಾರೆ.

ADVERTISEMENT

ಒಪ್ಪಂದವನ್ನು  ರದ್ದು ಮಾಡುವುದು ಯುದ್ಧಕ್ಕೆ ಪ್ರಚೋದನೆ ನೀಡಿದಂತೆ ಆಗುತ್ತದೆ  ಎಂದೂ ಎಚ್ಚರಿಸಿದ್ದಾರೆ.

ಅಂತರರಾಷ್ಟ್ರೀಯ ಕಾನೂನಿನ ಪ್ರಕಾರ ಈ ಒಪ್ಪಂದದಿಂದ ಏಕಪಕ್ಷೀಯ ವಾಗಿ ಭಾರತ ಹಿಂದೆ ಸರಿಯಲು ಸಾಧ್ಯವಿಲ್ಲ ಎಂದು ಹೇಳಿರುವ ಅವರು, ಒಪ್ಪಂದ ರದ್ದಾದರೆ ಅದು ಪಾಕಿಸ್ತಾನದ ಆರ್ಥಿಕತೆಯ ಮೇಲೆ ಪರಿಣಾಮ ಬೀರಬಹುದು ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಸಿಂಧೂ ನದಿ ನೀರು ಒಪ್ಪಂದ ಕುರಿತ ಭಾರತದ ನಡೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಶಾಂತಿ ಭಂಗಕ್ಕೆ ಕಾರಣವಾ ಗ ಬಹುದು. ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮೊರೆ ಹೋಗಲು ಪಾಕಿ ಸ್ತಾನಕ್ಕೆ ಈ ಕಾರಣ ಸಾಕು ಎಂದೂ ಹೇಳಿದ್ದಾರೆ. ಭಾರತದ ನಡೆಯಿಂದಾ ಗುವ ಅಪಾಯಗಳ ಕುರಿತು ಅಂತರ ರಾಷ್ಟ್ರೀಯ ಸಮುದಾಯಗಳ ಗಮನ ಸೆಳೆಯಲಾಗುವುದು ಎಂದೂ ಅವರು ಹೇಳಿದ್ದಾರೆ.

ಸಿಂಧೂ ನದಿ ನೀರು ಒಪ್ಪಂದ ಕುರಿತು ಪುನರ್‌ ಪರಿಶೀಲನೆ ಸಭೆ  ಪ್ರಧಾನಮಂತ್ರಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.