ADVERTISEMENT

ಎಎಪಿ ಸ್ವಚ್ಛಗೊಳಿಸಲು ಕಪಿಲ್‌ ಮಿಶ್ರಾ ಮಿಸ್ಡ್ ಕಾಲ್ ಅಭಿಯಾನ

ಏಜೆನ್ಸೀಸ್
Published 21 ಮೇ 2017, 11:30 IST
Last Updated 21 ಮೇ 2017, 11:30 IST
ಕಪಿಲ್‌ಮಿಶ್ರಾ (ಸಾಂದರ್ಭಿಕ ಚಿತ್ರ)
ಕಪಿಲ್‌ಮಿಶ್ರಾ (ಸಾಂದರ್ಭಿಕ ಚಿತ್ರ)   

ನವದೆಹಲಿ: ‘ಕೆಲವು ಭ್ರಷ್ಟರಿಂದಾಗಿ ಕಳಂಕಕ್ಕೆ ಗುರಿಯಾಗಿರುವ ಆಮ್ ಆದ್ಮಿ ಪಕ್ಷವನ್ನು ಸ್ವಚ್ಛಗೊಳಿಸುವ ಸಲುವಾಗಿ ಮಿಸ್ಡ್ ಕಾಲ್ ಅಭಿಯಾನ ಆರಂಭಿಸುತ್ತಿದ್ದೇನೆ’ ಎಂದು ಪಕ್ಷದಿಂದ ಉಚ್ಚಾಟನೆಯಾಗಿರುವ ಶಾಸಕ ಕಪಿಲ್‌ ಮಿಶ್ರಾ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇದು ಪಕ್ಷವನ್ನು ಸ್ವಚ್ಛಗೊಳಿಸಿ ವರ್ಚಸ್ಸನ್ನು ಹೆಚ್ಚಿಸಲು ಸಕಾಲ’ ಎಂದು ಹೇಳಿದ್ದಾರೆ.

‘ಪಕ್ಷವನ್ನು ತ್ಯಜಿಸಿದವರ ಎಲ್ಲ ನಾಯಕರ ಮತ್ತು ಕಾರ್ಯಕರ್ತರ ಬಳಿ ನನ್ನ ಮನವಿ. ನಾವು ಪಕ್ಷವನ್ನು ಬಿಡಬಾರದು. ಪಕ್ಷವನ್ನು ಭ್ರಷ್ಟರಿಂದ ಬಿಡುಗಡೆಗೊಳಿಸಬೇಕು. ಎಲ್ಲರೂ ಒಂದಾಗಿ ಪಕ್ಷವನ್ನು ಶುಚಿಗೊಳಿಸಲು ಮುಂದಾಗಬೇಕು ಎಂಬುದು ನನ್ನ ಒತ್ತಾಯ. 7863037300 ಈ ಸಂಖ್ಯೆಗೆ ಮಿಸ್ಡ್ ಕಾಲ್ ಕೊಡುವ ಮೂಲಕ ಭ್ರಷ್ಟಾಚಾರದ ವಿರುದ್ಧ ಹೋರಾಡಬೇಕು’ ಎಂದು ಅವರು ಮನವಿ ಮಾಡಿದ್ದಾರೆ.

ADVERTISEMENT

‘ಪಕ್ಷದ ನಾಯಕರಾದ ಸಂಜಯ್ ಸಿಂಗ್ ಮತ್ತು ಆಶುತೋಷ್ ಅವರ ರಷ್ಯಾ ಪ್ರವಾಸದ ಬಗ್ಗೆ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೌನವಾಗಿದ್ದಾರೆ. ಇಬ್ಬರೂ ನಾಯಕರ ಪ್ರವಾಸಕ್ಕೆ ಶೀತಲ್ ಸಿಂಗ್ ನೆರವಾಗಿದ್ದಾರೆ. ಶೀತಲ್ ಸಿಂಗ್ ಅವರು ನೋಂದಣಿ ಉದ್ಯಮ ನಡೆಸುತ್ತಿದ್ದಾರೆ ಎಂಬುದು ಕೇಜ್ರಿವಾಲ್ ಅವರಿಗೆ ಗೊತ್ತಿದೆಯೇ? ₹400 ಕೋಟಿ ಮೊತ್ತದ ನಂಬರ್‌ ಪ್ಲೇಟ್ ಹಗರಣಕ್ಕೆ ದೆಹಲಿ ಸಾಕ್ಷಿಯಾಗಿದೆ. ಇದಕ್ಕೆ ಸಂಬಂಧಿಸಿದ ಹಲವು ಕಂಪೆನಿಗಳ ಜತೆ ಶೀತಲ್ ಸಿಂಗ್‌ಗೆ ಸಂಪರ್ಕವಿದೆ’ ಎಂದು ಮಿಶ್ರಾ ಆರೋಪಿಸಿದ್ದಾರೆ.

ಹಗರಣದಲ್ಲಿ ಭಾಗಿಯಾಗಿರುವ ಕಂಪೆನಿಗಳ ಮಾಲೀಕರ ಹಣವನ್ನು ಸ್ವಿಸ್‌ ಬ್ಯಾಂಕ್‌ನಲ್ಲಿ ಇಡಲಾಗಿದೆ. ಹಗರಣಕ್ಕೆ ಸಂಬಂಧಿಸಿ ಮತ್ತು ವಿದೇಶ ಪ್ರವಾಸಕ್ಕೆ ನೆರವು ನೀಡಿರುವ ಬಗ್ಗೆ ಶೀತಲ್‌ ಸಿಂಗ್ ವಿರುದ್ಧ ಭ್ರಷ್ಟಾಚಾರ ನಿಗ್ರಹ ದಳ ತನಿಖೆ ನಡೆಸುತ್ತಿದೆ. ಇದು ಕೇಜ್ರಿವಾಲ್ ಅವರಿಗೆ ತಿಳಿದಿಲ್ಲವೇ’ ಎಂದು ಅವರು ಪ್ರಶ್ನಿಸಿದ್ದಾರೆ. ಅಲ್ಲದೆ, ಇವೆಲ್ಲ ಪ್ರಶ್ನೆಗಳಿಗೂ ಕೇಜ್ರಿವಾಲ್ ಉತ್ತರಿಸಬೇಕು ಎಂದು ಆಗ್ರಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.