ADVERTISEMENT

ಎಐ ಆಹಾರದಲ್ಲಿ ಹಲ್ಲಿ ಬಳಿಕ ನೊಣದ ಸರದಿ..

​ಪ್ರಜಾವಾಣಿ ವಾರ್ತೆ
Published 5 ಜುಲೈ 2015, 9:17 IST
Last Updated 5 ಜುಲೈ 2015, 9:17 IST

ನವದೆಹಲಿ (‍ಪಿಟಿಐ): ಏರ್‌ ಇಂಡಿಯಾ(ಎಐ) ವಿಮಾನದಲ್ಲಿ ಪ್ರಯಾಣದ ವೇಳೆ ನೀಡುವ ಉಪಾಹಾರದಲ್ಲಿ ಹಲ್ಲಿಯ ಬೆನ್ನಲ್ಲೆ, ಇದೀಗ ನೊಣ ಪತ್ತೆಯಾಗಿದೆ!

ನೇಪಾಳ ರಾಜಧಾನಿ ಕಠ್ಮಂಡುವಿನಿಂದ ಕೋಲ್ಕತ್ತಕ್ಕೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ನೀಡಲಾದ ಆಹಾರದಲ್ಲಿ ನೊಣವಿತ್ತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ. ನಿನ್ನೆ (ಶನಿವಾರ) ಈ ಘಟನೆ ನಡೆದಿದೆ.

ಆದರೆ, ಆಹಾರದಲ್ಲಿ ಕೀಟವಿತ್ತು ಎಂದು ಆರೋಪಿಸಿದ ಪ್ರಯಾಣಿಕ ತಮಗೆ ಮಾದರಿಯನ್ನು (ಸ್ಯಾಂಪಲ್) ನೀಡಿಲ್ಲವಾದ್ದರಿಂದ ಈ ಬಗ್ಗೆ ಅಧಿಕೃತವಾಗಿ ಏನನ್ನೂ ಹೇಳಲಾಗದು ಎಂದು ಏರ್ ಇಂಡಿಯಾ ಪ್ರತಿಕ್ರಿಯಿಸಿದೆ.

ADVERTISEMENT

‘ಆಹಾರದಲ್ಲಿ ‘ಕೀಟ’ವಿತ್ತು ಎಂಬ ಅಂಶವನ್ನು ಕಠ್ಮಂಡು–ಕೋಲ್ಕತ್ತ ನಡುವಣ ವಿಮಾನದ ಪ್ರಯಾಣಿಕರೊಬ್ಬರು ನಮ್ಮ ಗಮನಕ್ಕೆ ತಂದಿದ್ದಾರೆ. ಆದರೆ, ಅವರು ಆಹಾರದ ಮಾದರಿಯನ್ನು ನಮ್ಮೊಂದಿಗೆ ಹಂಚಿಕೊಂಡಿಲ್ಲ ಅಥವಾ ಅದನ್ನು ತನಿಖೆಗೆ ಒಳಪಡಿಸಲು ಮರಳಿಸಿಲ್ಲ. ಆದ್ದರಿಂದ ನಾವು ಆರೋಪವನ್ನು ಖಚಿತಪಡಿಸಲಾಗದು’ ಏರ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

‘ಇಂಥ ದೂರುಗಳನ್ನು ಏರ್‌ ಇಂಡಿಯಾ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸುತ್ತದೆ. ಆದರೆ, ಅವರು ತನಿಖೆಗಾಗಿ ಮಾದರಿಯನ್ನು ನೀಡುವ ಅಗತ್ಯವಿತ್ತು’ ಎಂದೂ ಅದು ಹೇಳಿದೆ.

ಕಳೆದ ತಿಂಗಳು ದೆಹಲಿ–ಲಂಡನ್‌ ನಡುವಣ ಪ್ರಯಾಣದ ವೇಳೆ ಏರ್‌ ಇಂಡಿಯಾ ವಿಮಾನದಲ್ಲಿ ನೀಡಲಾದ ಆಹಾರದಲ್ಲಿ ಹಲ್ಲಿ ಪತ್ತೆಯಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.