ADVERTISEMENT

ಎರಡು ತಿಂಗಳಲ್ಲಿ ಸಪ್ತಪದಿ ತುಳಿಯಬೇಕಿತ್ತು...

​ಪ್ರಜಾವಾಣಿ ವಾರ್ತೆ
Published 1 ಮೇ 2014, 19:30 IST
Last Updated 1 ಮೇ 2014, 19:30 IST

ಚೆನ್ನೈ: ಬೆಂಗಳೂರು– ಗುವಾಹಟಿ ರೈಲಿ­ನಲ್ಲಿ ಸಂಭವಿಸಿದ ಸ್ಫೋಟದಲ್ಲಿ ಮೃತ­ರಾದ ಸ್ವಾತಿ ಅವರ ಮದುವೆ ಇನ್ನೆರಡು ತಿಂಗಳಲ್ಲಿ ನಡೆಯುವುದರಲ್ಲಿತ್ತು.
ಹೈದರಾಬಾದ್‌ನಲ್ಲಿ ಎಂಜಿನಿಯ­ರಿಂಗ್‌ ಓದು ಮುಗಿಸಿದ್ದ ಗುಂಟೂರು ಮೂಲದ ಅವರು ಬೆಂಗಳೂರಿನ ಟಿಸಿಎಸ್‌ ಕಂಪೆನಿಯಲ್ಲಿ ನಾಲ್ಕು ತಿಂಗಳ ಹಿಂದೆ ಕೆಲಸಕ್ಕೆ ಸೇರಿದ್ದರು.

ಕಾರ್ಮಿಕ ದಿನಾಚರಣೆ ಅಂಗವಾಗಿ ಗುರುವಾರ ರಜೆ ಇತ್ತು. ಪ್ರತಿ ಶನಿವಾರ ಮತ್ತು ಭಾನುವಾರ ಎಂದಿನಂತೆ ರಜೆ ಇದ್ದೇ ಇರುತ್ತದೆ. ಹೀಗಾಗಿ ಮಧ್ಯೆ ಶುಕ್ರ­ವಾರ ಒಂದು ದಿನ ರಜೆ, ನಾಲ್ಕು ದಿನ ಊರಿಗೆ ಹೋಗಿ ಬರೋಣವೆಂದು ಸ್ನೇಹಿತ­­ರೊಬ್ಬರ ಜತೆ ಊರಿಗೆ ಹೊರ­ಟಿದ್ದರು.

ಸ್ವಾತಿ ಅವರ ನಿಧನದಿಂದ ಪೋಷ­ಕರು ಹಾಗೂ ನೆಂಟರಿಷ್ಟರಿಗೆ ತೀವ್ರ ಆಘಾತ­ವಾಗಿದೆ. ‘ಅವಳು ಇವತ್ತು ನಲಿ­ಯುತ್ತಾ ಬರಬೇಕಿತ್ತು. ಆದರೆ ಈಗ ಅವಳು ಶವ­ವಾಗಿ ಬರುತ್ತಿದ್ದಾಳೆ. ಇನ್ನೆ­ರಡು ತಿಂಗ­ಳಲ್ಲಿ ಅವಳ ಮದುವೆ ನಡೆ­ಯು­ವುದ­ರಲ್ಲಿತ್ತು’ ಎಂದು ಯುವ­ತಿಯ ಅಜ್ಜಿ ರಾಜಲಕ್ಷ್ಮಿ ಕಣ್ಣೀರಿಟ್ಟರು.

ಅಮ್ಮನಿಗೆ ಕೊನೆಯ ಕರೆ
ಹೈದರಾಬಾದ್‌:
ಸ್ಫೋಟಕ್ಕೂ ಮುನ್ನ ಸ್ವಾತಿ ಹಲವು ಬಾರಿ ತಮ್ಮ ತಾಯಿಗೆ  ಕರೆ ಮಾಡಿದ್ದರು. ‘ಮಧ್ಯಾಹ್ನ 2.30ರೊಳಗೆ ಮನೆ ತಲುಪುತ್ತೇನೆ’ ಎಂದು ಬೆಳಿಗ್ಗೆ 7ರ ವೇಳೆಗೆ ಕರೆ ಮಾಡಿದ್ದರು. ಅದಾದ ಹತ್ತು ನಿಮಿಷದೊಳಗೆ ಅಸುನೀಗಿದರು. ಸ್ವಾತಿ ತಾಯಿ ಕಮಲಾಕ್ಷಿ, ಗುಂಟೂ­ರಿನ ಪಾಲಿಟೆಕ್ನಿಕ್‌ ಕಾಲೇಜಿ­ನಲ್ಲಿ ಉಪ­ನ್ಯಾಸಕಿ. ತಂದೆ ರಾಮಕೃಷ್ಣ ಕೃಷಿಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT