ADVERTISEMENT

ಎರಡು ಸಾವಿರಕ್ಕೂ ಹೆಚ್ಚು ಸಾವು ನೋವು

ಭೂಕಂಪಕ್ಕೆ ನೇಪಾಳ ತತ್ತರ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2015, 8:55 IST
Last Updated 26 ಏಪ್ರಿಲ್ 2015, 8:55 IST
ನೇಪಾಳದಲ್ಲಿ ಭಾರತೀಯ ವಾಯುಪಡೆಯು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿರುವುದು –ಎಪಿ ಚಿತ್ರ
ನೇಪಾಳದಲ್ಲಿ ಭಾರತೀಯ ವಾಯುಪಡೆಯು ರಕ್ಷಣಾ ಕಾರ್ಯಚರಣೆಯಲ್ಲಿ ತೊಡಗಿರುವುದು –ಎಪಿ ಚಿತ್ರ   

ಕಠ್ಮಂಡು (ಪಿಟಿಐ): ಭಾರತದ ಗಡಿಗೆ ಹೊಂದಿಕೊಂಡಿರುವ ರಾಷ್ಟ್ರ ನೇಪಾಳದಲ್ಲಿ ಶನಿವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪನಕ್ಕೆ ಈವರೆಗೆ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, ಐದು ಸಾವಿರಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ನೇಪಾಳದ ರಾಜಧಾನಿ ಕಠ್ಮಂಡುವಿನಲ್ಲಿ ಶನಿವಾರ ರಾತ್ರಿ ಪೂರ್ತಿ ರಕ್ಷಣಾ ಕಾರ್ಯಚರಣೆ ನಡೆದಿದ್ದು, ನೆಲಸಮಗೊಂಡ ಕಟ್ಟಡ, ರಸ್ತೆಗಳ ತೆರವು ಕಾರ್ಯಾಚರಣೆ ಕೈಗೊಳ್ಳಲಾಗಿದೆ ಎಂದು ರಕ್ಷಣಾ ಸಿಬ್ಬಂದಿಯೊಬ್ಬರು ತಿಳಿಸಿದ್ದಾರೆ.

ಭಾರತೀಯರ ರಕ್ಷಣೆ: ಪ್ರಬಲ ಭೂಕಂಪನ ಸಂಭವಿಸಿದ ನೇಪಾಳದಿಂದ ಸುಮಾರು 550 ಮಂದಿ ಭಾರತೀಯರನ್ನು ವಾಯುಪಡೆಯು (ಐಎಎಫ್) ಸ್ಥಳಾಂತರಿಸಿದೆ. ಕೇಂದ್ರ ಸರ್ಕಾರವು ನೇಪಾಳದಲ್ಲಿ ರಕ್ಷಣಾ ಕಾರ್ಯಚರಣೆಗೆ ವಿಶೇಷ ತಜ್ಞರ  ತಂಡ, 10ವಿಮಾನ, 12 ಹೆಲಿಕಾಪ್ಟರ್‌ಗಳನ್ನು ಭಾನುವಾರ ಕಳುಹಿಸಿದೆ.

ಶನಿವಾರ ರಾತ್ರಿಯೇ 4 ಭಾರತೀಯ ವಾಯುಪಡೆಯ ವಿಮಾನವು 546 ಮಂದಿಯನ್ನು ಭಾರತಕ್ಕೆ ಕರೆತರಲು ಸನ್ನದ್ಧವಾಗಿದೆ. 55ಮಂದಿಯನ್ನು ಹೊತ್ತ  ವಿಮಾನವು ಭಾರತಕ್ಕೆ ತಲುಪಿದೆ ಎಂದು ರಕ್ಷಣಾ ಇಲಾಖೆ ವಕ್ತಾರರೊಬ್ಬರು ತಿಳಿಸಿದರು. 

ಪರಿಹಾರ ಘೋಷಣೆ
ನವದೆಹಲಿ ವರದಿ: ಶನಿವಾರ ಭಾರತದಲ್ಲಿ ಸಂಭವಿಸಿದ ಭೂಕಂಪನದಲ್ಲಿ 53ಮಂದಿ ಸಾವನ್ನಪ್ಪಿದ್ದರು. ಆ  ಕುಟುಂಬಗಳಿಗೆ ಕೇಂದ್ರ ಸರ್ಕಾರವು ಪರಿಹಾರವನ್ನು ಘೋಷಿಸಿದೆ. 

ದೇಶದ ಹಲವು ರಾಜ್ಯಗಳಲ್ಲಿ ಭೂಕಂಪನದಿಂದ ಮೃತಪಟ್ಟವರ ಕುಟುಂಬಗಳಿಗೆ 2ಲಕ್ಷ ರೂಪಾಯಿ ಪರಿಹಾರವನ್ನು ನೀಡಲಾಗುವುದು ಎಂದು ಪಿಎಂಒ ಟ್ವೀಟ್‌ ಮಾಡಿದೆ.

ಭೂಕಂಪನದಿಂದ ಭಾರತದಲ್ಲಿ  ಮೃತಪಟ್ಟವರ ಸಂಖ್ಯೆ 53ಕ್ಕೆ ಏರಿದ್ದು, ಸುಮಾರು 240 ಮಂದಿ ಗಾಯಗೊಂಡಿದ್ದಾರೆ ಎಂದು ಗೃಹ ಇಲಾಖೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.