ADVERTISEMENT

ಎಲ್‌ಪಿಜಿ, ಸೀಮೆಎಣ್ಣೆ ದರ ಏರಿಕೆಗೆ ಹಿಂದೇಟು

​ಪ್ರಜಾವಾಣಿ ವಾರ್ತೆ
Published 25 ಜೂನ್ 2014, 19:30 IST
Last Updated 25 ಜೂನ್ 2014, 19:30 IST

ನವದೆಹಲಿ: ರೈಲು ಪ್ರಯಾಣ ಮತ್ತು ಸರಕು ಸಾಗಣೆ ದರ ಏರಿಕೆಯಿಂದ ವ್ಯಾಪಕ ಟೀಕೆಗೊಳಗಾಗಿರುವ ಕೇಂದ್ರ ಸರ್ಕಾರ, ಎಲ್‌ಪಿಜಿ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರ ಏರಿಸುವ ಸಾಹಸಕ್ಕೆ ಕೈಹಾಕಲು ಬುಧವಾರ ಹಿಂದೇಟು ಹಾಕಿತು.

ನೈಸರ್ಗಿಕ ಅನಿಲ ದರ ಪರಿಷ್ಕರಣೆ ಪ್ರಸ್ತಾಪದ ಮೇಲಿನ ನಿರ್ಧಾರವನ್ನೂ ಮೂರು ತಿಂಗಳು  ಮುಂದೂಡಿದೆ.

ವಿದೇಶಿ ಮಾರುಕಟ್ಟೆಯಲ್ಲಿ ತೈಲ ಬೆಲೆ ಏರಿರುವ ಹಿನ್ನೆಲೆಯಲ್ಲಿ ದಿನದಿಂದ ದಿನಕ್ಕೆ ಸಬ್ಸಿಡಿ ಹೊರೆ ಹೆಚ್ಚುತ್ತಿರುವು­ದರಿಂದ ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರಗಳನ್ನು ಹೆಚ್ಚಿಸುವಂತೆ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಗಳು ಪೆಟ್ರೋಲಿಯಂ ಸಚಿವಾಲಯದ ಮೇಲೆ ಒತ್ತಡ ಹೇರಿದ್ದವು. ಇದನ್ನು ಗಂಭೀರವಾಗಿ ಪರಿಗಣಿಸಿದ್ದ ಸಚಿವಾಲಯ, ಗೃಹ ಬಳಕೆ ಅನಿಲ ಸಿಲಿಂಡರ್‌ ಒಂದಕ್ಕೆ ಐದು ರೂಪಾಯಿ ಹಾಗೂ ಸೀಮೆಎಣ್ಣೆ ಲೀಟರ್‌ಗೆ ಒಂದು ರೂಪಾಯಿ ಏರಿಸಲು ಉದ್ದೇಶಿಸಿತ್ತು.

ಆದರೆ, ರೈಲು ಪ್ರಯಾಣ ಹಾಗೂ ಸರಕು ಸಾಗಣೆ ದರ ಏರಿಕೆಗೆ ವ್ಯಕ್ತವಾಗಿರುವ ತೀವ್ರ ಟೀಕೆಗಳ ಹಿನ್ನೆಲೆಯಲ್ಲಿ ಬುಧವಾರ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ನಡೆದ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ (ಸಿಸಿಇಎ) ಈ ಬಗ್ಗೆ ಯಾವುದೇ ಚರ್ಚೆ ನಡೆಸಲಿಲ್ಲ. ಬಳಿಕ ಪತ್ರಕರ್ತರ ಜತೆ ಮಾತನಾಡಿದ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌, ಅಡುಗೆ ಅನಿಲ ಮತ್ತು ಸೀಮೆಎಣ್ಣೆ ದರ ಏರಿಕೆ ಕುರಿತು ಚರ್ಚೆ ನಡೆಯಲಿಲ್ಲ. ಬೆಲೆ ಏರಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದರು.

ದರ ಪರಿಷ್ಕರಣೆ ಮುಂದೂಡಿಕೆ
ಆದರೆ, ನೈಸರ್ಗಿಕ ತೈಲ ಉತ್ಪಾದನಾ ಕಂಪೆನಿಗಳ ಬಹು ದಿನಗಳ ಬೇಡಿಕೆ­ಯಾಗಿರುವ ದರ ಪರಿಷ್ಕರ­ಣೆಯನ್ನು ಸರ್ಕಾರ ಮೂರು ತಿಂಗಳ ಕಾಲ ಮುಂದೂಡಿತು. ಜನ ಸಾಮಾನ್ಯರ ಹಿತ ಗಮನದಲ್ಲಿ­ಟ್ಟುಕೊಂಡು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಂಬಂಧಪಟ್ಟ ಎಲ್ಲರ ಜತೆ ಸಮಗ್ರವಾಗಿ ಚರ್ಚೆ ನಡೆಸಿದ ಬಳಿಕ ದರ ಏರಿಕೆ ಕುರಿತು ತೀರ್ಮಾನ ಮಾಡ­ಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದರು.

ನೈಸರ್ಗಿಕ ಅನಿಲ ಉತ್ಪಾದಿಸುವ ರಿಲಯನ್ಸ್‌, ಒಎನ್‌ಜಿಸಿ, ಷೆಲ್‌ ಮೊದ­ಲಾದ ಕಂಪೆನಿಗಳ ದರ ಪರಿಷ್ಕರಣೆ ಮಾರ್ಚ್‌ 31ರಂದು ನಡೆಯಬೇಕಿತ್ತು. ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಜುಲೈ ಒಂದರಂದು ಪರಿಷ್ಕರಿಸುವುದಾಗಿ ಕೇಂದ್ರ ಸರ್ಕಾರ ಹೇಳಿತ್ತು.
ನೈಸರ್ಗಿಕ ಅನಿಲ ದರ ಪರಿಷ್ಕರಣೆ ವಿಚಾರವು ಸಿಸಿಇಎ ಸಭೆಯಲ್ಲಿ ಚರ್ಚೆಗೆ ಬಂದಿತ್ತು. ಆದರೆ, ದರ ಏರಿಕೆ ತೀರ್ಮಾನವನ್ನು ಮೂರು ತಿಂಗಳು ಮುಂದೂಡಲು ನಿರ್ಧರಿಸಲಾಯಿತು ಎಂದು ಪ್ರಧಾನ್‌ ಪತ್ರಕರ್ತರಿಗೆ ವಿವರಿಸಿದರು.

ಸದ್ಯ ರಿಲಯನ್ಸ್ ಪ್ರತಿ ಯೂನಿಟ್‌ ನೈಸರ್ಗಿಕ ಅನಿಲವನ್ನು 4.2 ಡಾಲರ್‌ಗೆ ಪೂರೈಕೆ ಮಾಡುತ್ತಿದ್ದು, ಪರಿಷ್ಕೃತ ದರದ ಪ್ರಕಾರ 8.8 ಡಾಲರ್‌ ಪಾವತಿಸಬೇಕು.

ಹಿಂದಿನ ಯುಪಿಎ ಸರ್ಕಾರ ದರ ಪರಿಷ್ಕರಣೆ ನಿರ್ಧಾರ ಮಾಡಿತ್ತು. ಆದರೆ, ಚುನಾವಣೆ ಹಿನ್ನೆಲೆಯಲ್ಲಿ ತೀರ್ಮಾನ ಜಾರಿಯನ್ನು ಮುಂದೂ­ಡಿತ್ತು. ದರ ಏರಿಕೆ ಪ್ರಸ್ತಾಪ ಕುರಿತು ಪ್ರಧಾನಿ ಒಂದು ವಾರದಿಂದ ಹಣಕಾಸು ಹಾಗೂ ಪೆಟ್ರೋಲಿಯಂ ಸಚಿವರ ಜತೆ ಸತತವಾಗಿ ಸಮಾಲೋಚಿಸಿದ್ದರು. ಅಂತಿಮವಾಗಿ ಸಿಸಿಇಎ ಮೂರು ತಿಂಗಳು ನಿರ್ಣಯವನ್ನು ಮುಂದೂಡಿತು.

ನೈಸರ್ಗಿಕ ಅನಿಲಕ್ಕೆ ಅಂತರರಾಷ್ಟ್ರೀಯ ಮಾರುಕಟ್ಟೆ ದರವನ್ನೇ ಕೊಡಬೇಕು ಎಂದು ಮಾಜಿ ಆರ್‌ಬಿಐ ಗವರ್ನರ್ ರಂಗರಾಜನ್‌ ಸಮಿತಿ ಮಾಡಿರುವ ಶಿಫಾರಸುಗಳನ್ನು ಸಿಸಿಇಎ ಪರಿಶೀಲಿಸಿತು. ರಂಗರಾಜನ್‌ ಸಮಿತಿ ಶಿಫಾರಸು ವಿದ್ಯುತ್‌, ಯೂರಿಯಾ, ಸಿಎನ್‌ಜಿ ಹಾಗೂ ಎಲ್‌ಪಿಜಿ ದರದ ಮೇಲೆ ಪರಿಣಾಮ ಬೀರಲಿದೆ ಎಂಬ ಕಾರಣಕ್ಕೆ ವ್ಯಾಪಕ ವಿರೋಧಗಳು ವ್ಯಕ್ತವಾಗಿರುವ ಬಗ್ಗೆಯೂ ಸಭೆ ಸಮಾಲೋಚಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.