ADVERTISEMENT

ಎಸ್ಕಾಂಗಳ ಏಕಸ್ವಾಮ್ಯ ಕೊನೆಗಾಣಿಸಲು ಕ್ರಮ

ವಿದ್ಯುತ್‌ ಪೂರೈಕೆ ಕಂಪೆನಿ ಬದಲಾಯಿಸಲು ಗ್ರಾಹಕರಿಗೆ ಅವಕಾಶ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2017, 14:06 IST
Last Updated 4 ಡಿಸೆಂಬರ್ 2017, 14:06 IST
ಎಸ್ಕಾಂಗಳ ಏಕಸ್ವಾಮ್ಯ ಕೊನೆಗಾಣಿಸಲು ಕ್ರಮ
ಎಸ್ಕಾಂಗಳ ಏಕಸ್ವಾಮ್ಯ ಕೊನೆಗಾಣಿಸಲು ಕ್ರಮ   

ನವದೆಹಲಿ: ದೂರಸಂಪರ್ಕ ಸೇವೆಯ ಕಂಪೆನಿಗಳನ್ನು ಬದಲಾಯಿಸುವ ರೀತಿಯಲ್ಲಿಯೇ ವಿದ್ಯುತ್‌ ಪೂರೈಕೆ ಕಂಪೆನಿಗಳನ್ನು (ಎಸ್ಕಾಂ) ಬದಲಾಯಿಸುವುದಕ್ಕೆ ಗ್ರಾಹಕರಿಗೆ ಅವಕಾಶ ನೀಡಲಾಗುವುದು ವಿದ್ಯುತ್‌ ಕಾಯ್ದೆಯ ತಿದ್ದುಪಡಿಗಳು ಅಂಗೀಕಾರವಾದರೆ ಇದು ಜಾರಿಗೆ ಬರಲಿದೆ ಎಂದು ಕೇಂದ್ರ ವಿದ್ಯುತ್‌ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಆರ್‌.ಕೆ. ಸಿಂಗ್‌ ತಿಳಿಸಿದ್ದಾರೆ.

ಬಜೆಟ್‌ ಅಧಿವೇಶನದಲ್ಲಿ ಈ ಮಸೂದೆ ಮಂಡಿಸಲು ಯತ್ನಿಸಲಾಗುವುದು. ವಿದ್ಯುತ್‌ ವಿತರಣೆ ಜಾಲದ ವ್ಯಾಪಾರ ಮತ್ತು ವಿದ್ಯುತ್‌ ಪೂರೈಕೆ ವ್ಯಾಪಾರ ಪ್ರತ್ಯೇಕಿಸುವ ಪ್ರಸ್ತಾವವೂ ಈ ತಿದ್ದುಪಡಿ ಮಸೂದೆಯಲ್ಲಿ ಇದೆ.

ಎಸ್ಕಾಂಗಳ ವಿತರಣೆ ಮತ್ತು ಪೂರೈಕೆ ವಿಭಾಗಗಳನ್ನು ಹೇಗೆ ಪ್ರತ್ಯೇಕಿಸಬಹುದು ಎಂಬ ಬಗ್ಗೆ ರಾಜ್ಯಗಳ ಜತೆ ಸಮಾಲೋಚನೆ ನಡೆಸಲಾಗುವುದು. ಒಂದು ಪ್ರದೇಶದಲ್ಲಿ ಒಂದಕ್ಕಿಂತ ಹೆಚ್ಚು ಕಂಪೆನಿಗಳಿಗೆ ವಿದ್ಯುತ್‌ ವಿತರಣೆಗೆ ಅವಕಾಶ ನೀಡಲಾಗುವುದು. ಈ ಮೂಲಕ ಎಸ್ಕಾಂಗಳ ಏಕಸ್ವಾಮ್ಯ ಕೊನೆಯಾಗಲಿದೆ ಎಂದಿದ್ದಾರೆ.

ADVERTISEMENT

ನವೀಕರಿಸಬಹುದಾದ ಇಂಧನ ಖರೀದಿಯ ನಿಯಮ ಜಾರಿ ಮಾಡಲಾಗುವುದು. ವಿದ್ಯುತ್‌ಗೆ ಪಡೆಯುವ ಕನಿಷ್ಠ ಮತ್ತು ಗರಿಷ್ಠ ದರಗಳ ನಡುವೆ ಶೇ 20 ಕ್ಕಿಂತ ಹೆಚ್ಚಿನ ಅಂತರ ಇರುವಂತಿಲ್ಲ ಎಂಬುದುಮಸೂದೆಯ ಮತ್ತೊಂದು ಅಂಶ. ಕೈಗಾರಿಕೆಗಳಿಗೆ ಮಿತದರದಲ್ಲಿ ವಿದ್ಯುತ್‌ ಒದಗಿಸುವ ಬಗ್ಗೆಯೂ ಪ್ರಸ್ತಾವ ಇದೆ.

**

ಮಸೂದೆಯಲ್ಲಿ ಏನಿದೆ

* ಪೂರ್ವ ಪಾವತಿ (ಪ್ರೀಪೇಡ್‌), ಸ್ಮಾರ್ಟ್‌ ಮೀಟರ್‌ ವ್ಯವಸ್ಥೆ ಜಾರಿ

* 2019 ಮಾರ್ಚ್‌ನೊಳಗೆ ಅನಿರ್ಬಂಧಿತ ವಿದ್ಯುತ್‌ ಪೂರೈಕೆ ಅನುಷ್ಠಾನ

* ಲೋಡ್‌ ಶೆಡ್ಡಿಂಗ್‌ ಇಲ್ಲವೇ ಇಲ್ಲ; ತಾಂತ್ರಿಕ, ನೈಸರ್ಗಿಕ ವಿಕೋಪಗಳು ಉಂಟಾದರೆ ಮಾತ್ರ ವಿದ್ಯುತ್‌ ಕಡಿತ

* ವಿದ್ಯುತ್‌ ಪೂರೈಕೆ ಸ್ಥಗಿತಗೊಂಡರೆ ದಂಡ

* ವಿದ್ಯುತ್‌ ಸೋರಿಕೆ ತಡೆಗೆ ಕ್ರಮಗಳು: ಶೇ 21ಕ್ಕಿಂತ ಹೆಚ್ಚು ಸೋರಿಕೆ ಇರುವ ರಾಜ್ಯಗಳಿಗೆ ಸೋರಿಕೆ ಕಡಿಮೆ ಮಾಡಲು ಸೂಚನೆ

* ತಾಂತ್ರಿಕ ಕಾರಣಗಳಿಂದಾಗುವ ಸೋರಿಕೆ ಶೇ 7 ಮಾತ್ರ; ಅದಕ್ಕಿಂತ ಹೆಚ್ಚಿನ ಸೋರಿಕೆಯನ್ನು ವಿದ್ಯುತ್‌ ಕಳ್ಳತನ ಎಂದು ಪರಿಗಣನೆ

* ವಿದ್ಯುತ್‌ ಸೋರಿಕೆ ಪ್ರಮಾಣವನ್ನು 2019ರೊಳಗೆ ಶೇ 15ಕ್ಕೆ ಇಳಿಸಲು ರಾಜ್ಯಗಳಿಗೆ ಸೂಚನೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.