ADVERTISEMENT

ಐಎಸ್‌ಐ ಪರ ಗೂಢಚರ್ಯೆ: ಬಂಧಿತರು 14 ದಿನ ಪೊಲೀಸ್ ವಶಕ್ಕೆ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2015, 11:15 IST
Last Updated 30 ನವೆಂಬರ್ 2015, 11:15 IST

ಕೋಲ್ಕತ್ತ (ಪಿಟಿಐ): ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಜತೆ ನಂಟು ಹೊಂದಿದ್ದ ಆರೋಪದ ಮೇಲೆ ಬಂಧಿಸಲಾಗಿರುವ ಆರೋಪಿಗಳನ್ನು ಕೊಲ್ಕತ್ತ ನ್ಯಾಯಾಲಯ ಸೋಮವಾರ 14 ದಿನಗಳವರೆಗೆ ಪೊಲೀಸ್ ವಶಕ್ಕೆ ನೀಡಿದೆ.

ಪ್ರಕರಣ ಸಂಬಂಧ ಇಬ್ಬರನ್ನು ದೆಹಲಿ ಪೊಲೀಸರು, ಮೂವರನ್ನು ಕೋಲ್ಕತ್ತದ ವಿಶೇಷ ಕಾರ್ಯಪಡೆ ಪೊಲೀಸರು ಭಾನುವಾರ ಬಂಧಿಸಿದ್ದರು. ಕೋಲ್ಕತ್ತದಲ್ಲಿ ಸೆರೆಸಿಕ್ಕವರನ್ನು ಪೊಲೀಸರು ಭಾನುವಾರ ಬಿಗಿ ಭದ್ರತೆಯೊಂದಿಗೆ ನ್ಯಾಯಾಲಕ್ಕೆ ಹಾಜರುಪಡಿಸಿದರು.

ಕೋಲ್ಕತ್ತದಲ್ಲಿ ಸೆರೆ: ಐಎಸ್‌ಐ ಪರವಾಗಿ ಕೆಲಸ ಮಾಡುತ್ತಿದ್ದ ಆರೋಪದಲ್ಲಿ ಗುತ್ತಿಗೆ ಕಾರ್ಮಿಕ, ಈತನ ಮಗ ಮತ್ತು ಮತ್ತೊಬ್ಬನನ್ನು ಕೋಲ್ಕತ್ತದ ಪೊಲೀಸರು ಬಂಧಿಸಿದ್ದರು. ಗಾರ್ಡನ್‌ ರೀಚ್‌ ಶಿಪ್‌ಬಿಲ್ಡರ್‌ ಮತ್ತು ಎಂಜಿನಿಯರ್ಸ್‌ನ ಗುತ್ತಿಗೆ ಕಾರ್ಮಿಕ ಇರ್ಷಾದ್ ಅನ್ಸಾರಿ (51), ಈತನ ಮಗ ಅಸ್ಫಾಕ್‌ ಅನ್ಸಾರಿ (23) ಮತ್ತು ಇವರ ಸಂಬಂಧಿ ಮೊಹಮ್ಮದ್‌ ಜಹಾಂಗೀರ್‌ ಬಂಧಿತರು.

ಐಎಸ್‌ಐ ಪರವಾಗಿ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಗಡಿ ಭದ್ರತಾ ಪಡೆಯ(ಬಿಎಸ್‌ಎಫ್‌) ಒಬ್ಬ ಯೋಧ ಮತ್ತು ಇನ್ನೊಬ್ಬ ಶಂಕಿತನನ್ನು ದೆಹಲಿ ಪೊಲೀಸರು ಜಮ್ಮು ರೈಲು ನಿಲ್ದಾಣದಲ್ಲಿ ಬಂಧಿಸಿದ್ದಾರೆ. ಇವರು ಗೂಢಚರ್ಯೆ ಜಾಲಕ್ಕೆ ಸೇರಿದವರು ಎಂದು ಹೇಳಲಾಗಿದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆಯಾಗುವ ರೀತಿಯಲ್ಲಿ ರಹಸ್ಯ ಮಾಹಿತಿಯನ್ನು ಐಎಸ್‌ಐಗೆ ಇವರು ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT