ADVERTISEMENT

ಐ.ಎಸ್‌ ಭಯೋತ್ಪಾದನಾ ಸಂಘಟನೆಗೆ ನಿಷೇಧ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2014, 19:30 IST
Last Updated 16 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ):  ಜಾಗತಿಕ ಮಟ್ಟ­ದಲ್ಲಿ ತಲ್ಲಣ ಮೂಡಿಸಿರುವ ಐ.ಎಸ್‌.­ಐ.ಎಸ್‌ ಭಯೋ­ತ್ಪಾ­ದನಾ ಸಂಘ­ಟನೆ­ಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ.

ಐ.ಎಸ್‌ ಟ್ವಿಟರ್‌ ಖಾತೆ ನಿರ್ವ­ಹಿಸು­ತ್ತಿದ್ದ ಆರೋಪದ ಮೇಲೆ ಬೆಂಗ­ಳೂರಿ­ನಲ್ಲಿ ಮೆಹದಿ ಮಸ್ರೂರ್ ಬಿಸ್ವಾಸ್‌­ನನ್ನು ಬಂಧಿಸಿದ ಬೆನ್ನಲ್ಲೇ ಸರ್ಕಾರದ ಈ ನಿರ್ಧಾರ ಹೊರ ಬಿದ್ದಿದೆ.

ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ ಅಡಿ ಇಸ್ಲಾಮಿಕ್‌ ಸ್ಟೇಟ್‌ ಇನ್ ಇರಾಕ್ ಆ್ಯಂಡ್‌ ಸಿರಿಯಾ (ಐ.ಎಸ್‌.­ಐ.ಎಸ್‌) ಸಂಘಟನೆಯನ್ನು ಭಾರತದಲ್ಲಿ ನಿಷೇಧಿಸ­ಲಾ­ಗಿದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್‌ ಮಂಗಳವಾರ ಲೋಕಸಭೆಗೆ ತಿಳಿಸಿದರು.

ಬೆರಳೆಣಿಕೆಯಷ್ಟು ಯುವಕರು ಐ.ಎಸ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿ­ದ್ದಾರೆ. ಇದರ ಚಟುವಟಿಕೆಗಳು ದೇಶದಲ್ಲಿ ವ್ಯಾಪಿಸದಂತೆ ಕಣ್ಗಾವಲು ಇಡಲಾಗಿದ್ದು, ಎಲ್ಲ ಕಟ್ಟುನಿಟ್ಟಿನ ಕ್ರಮ­ಗಳನ್ನು ತೆಗೆದುಕೊಳ್ಳಲಾಗಿದೆ. ಇದೇ ಉದ್ದೇಶದಿಂದ ಐ.ಎಸ್‌ ಭಯೋತ್ಪಾ­ದನಾ ಸಂಘಟನೆ­ಯನ್ನು ನಿಷೇಧಿಸಲಾ­ಗಿದೆ ಎಂದು ತಿಳಿಸಿದರು. 

ಈ ಭಯೋತ್ಪಾದನಾ ಸಂಘಟನೆಗೆ ದೇಶದ ಯುವ ಜನತೆಯಿಂದ ಹೇಳಿ ಕೊಳ್ಳುವಂತಹ ಬೆಂಬಲ ದೊರೆತಿಲ್ಲ.  ಇಂಥ  ಸಂಘಟನೆಗಳಿಂದ  ಪ್ರಭಾವಕ್ಕೊ­ಳಗಾ­­ಗದಂತೆ ತಮ್ಮ ಮಕ್ಕಳನ್ನು ರಕ್ಷಿಸಿದ  ಅಲ್ಪ­ಸಂಖ್ಯಾತರಿಗೆ ಸಹಜವಾಗಿ ಈ  ಗೌರವ ಸಲ್ಲಬೇಕು ಎಂದು ಸಿಂಗ್‌ ಅಭಿನಂದನೆ ಸಲ್ಲಿಸಿದರು.

ಭಯೋತ್ಪಾದನಾ ಅಥವಾ ವಿಧ್ವಂಸಕ ಕೃತ್ಯದ ಶಂಕೆಯ ಮೇಲೆ ಅಲ್ಪಸಂಖ್ಯಾತ ಸಮುದಾಯದ ಅಮಾಯಕರನ್ನು ಬಂಧಿ­ಸಿಲ್ಲ. ಒಂದು ವೇಳೆ ಹಾಗೇನಾ­ದರೂ ಬಂಧಿಸಿದರೆ ತಮ್ಮ ಗಮನಕ್ಕೆ ತರು­ವಂತೆ ಅವರು ಮನವಿ ಮಾಡಿದರು. ಬಹುತೇಕ ದೇಶಗಳಲ್ಲಿ ಅಲ್ಪ­ಸಂಖ್ಯಾತರು ಐ.ಎಸ್‌ ಚಟುವಟಿಕೆಗಳಿಗೆ ಬೆಂಬಲ ನೀಡುತ್ತಿದ್ದಾರೆ. ಆದರೆ, ನಮ್ಮ ದೇಶದಲ್ಲಿ ಹಾಗಾಗ ದಿರುವುದು ಸಮಾಧಾನದ ಸಂಗತಿ ಎಂದರು.

ಒಟ್ಟಾರೆ ದೇಶದಲ್ಲಿ ಐ.ಎಸ್‌ ಸಂಘಟನೆಯ ಪ್ರಭಾವ ಅಷ್ಟಾಗಿ ಇಲ್ಲ. ಹೀಗಾಗಿ ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅಭಯ ನೀಡಿದರು.

ಎನ್‌ಎಸ್‌ಜಿ ಬಲವರ್ಧನೆ, ವಲಸೆ ವ್ಯವಸ್ಥೆ ಮೇಲೆ ಕಣ್ಗಾವಲು, ಸೈಬರ್‌ ಚಟುವಟಿಕೆ ಮೇಲೆ ನಿಗಾ ಸೇರಿದಂತೆ ಸರ್ಕಾರ ಅನೇಕ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಗೃಹಖಾತೆ ರಾಜ್ಯ ಸಚಿವ ಕಿರಣ್‌ ರಿಜುಜು ತಿಳಿಸಿದರು.

ಕೇರಳ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಯುವಕರು ಈ ಸಂಘಟನೆಗೆ ಸೇರಿದ ಬಗ್ಗೆ ಮಾಹಿತಿ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.