ADVERTISEMENT

ಒತ್ತಡದಲ್ಲಿ ಯೋಗಿ: ಹಾನಿ ತಡೆಗೆ ಬಿಜೆಪಿ ಕಸರತ್ತು!

ಪ್ರತಿಪಕ್ಷಗಳ ಟೀಕೆ ಮುಂದುವರಿಕೆ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಇಂದು ಭೇಟಿ ?

ಪಿಟಿಐ
Published 14 ಆಗಸ್ಟ್ 2017, 19:30 IST
Last Updated 14 ಆಗಸ್ಟ್ 2017, 19:30 IST
ಬಿಆರ್‌ಡಿ ಆಸ್ಪತ್ರೆಗೆ ಸೋಮವಾರ ತಾಯಿಯೊಬ್ಬರು ಮಗುವನ್ನು ಕರೆತಂದರು – ಚಿತ್ರ ಪಿಟಿಐ
ಬಿಆರ್‌ಡಿ ಆಸ್ಪತ್ರೆಗೆ ಸೋಮವಾರ ತಾಯಿಯೊಬ್ಬರು ಮಗುವನ್ನು ಕರೆತಂದರು – ಚಿತ್ರ ಪಿಟಿಐ   

ನವದೆಹಲಿ: 70 ಅಮಾಯಕ ಮಕ್ಕಳನ್ನು ಬಲಿ ಪಡೆದ ಕುಖ್ಯಾತಿಗೆ ಒಳಗಾದ ಗೋರಖಪುರ ಬಿಆರ್‌ಡಿ ಆಸ್ಪತ್ರೆ ದುರಂತದಿಂದ ಉತ್ತರ ಪ್ರದೇಶ ಸರ್ಕಾರದ ವರ್ಚಸ್ಸಿಗೆ ಮತ್ತಷ್ಟು ಧಕ್ಕೆಯಾಗದಂತೆ ತಡೆಯಲು ಬಿಜೆಪಿ ಕಸರತ್ತು ಆರಂಭಿಸಿದೆ.

ಪ್ರಕರಣ ನಿರ್ವಹಣೆಯಲ್ಲಿ ಬಿಜೆಪಿ ಸರ್ಕಾರದ ವೈಫಲ್ಯವನ್ನು ರಾಷ್ಟ್ರಮಟ್ಟದಲ್ಲಿ ಬಿಂಬಿಸುವಲ್ಲಿ ವಿರೋಧ ಪಕ್ಷಗಳು ಯಶಸ್ವಿಯಾಗಿದ್ದು, ಹಾನಿಯನ್ನು ತಡೆಯಲು ಬಿಜೆಪಿ ಪ್ರತಿತಂತ್ರ ರೂಪಿಸುತ್ತಿದೆ.

ಈ ಮಧ್ಯೆ, ಕೃಷ್ಣ ಜನ್ಮಾಷ್ಟಮಿಯನ್ನು ವಿಜೃಂಭಣೆಯಿಂದ ಆಚರಿಸುವಂತೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಆದೇಶಿಸಿರುವುದು ವ್ಯಾಪಕ ಟೀಕೆ ವ್ಯಕ್ತವಾಗಿದೆ.ಇಡೀ ದೇಶ ಮಕ್ಕಳ ಸರಣಿ ಸಾವಿನಿಂದ ಕಂಗೆಟ್ಟು ಶೋಕದಲ್ಲಿ ಮುಳಗಿರುವಾಗ ಮುಖ್ಯಮಂತ್ರಿಯ ಈ ನಡೆ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾಗಿದೆ.

ರಾಜಕೀಯ ಮಹತ್ವ: ಸಮಾಜವಾದಿ ಪಕ್ಷದ ಮುಖಂಡ ಅಖಿಲೇಶ್ ಯಾದವ್‌ ಸೋಮವಾರ ಆಸ್ಪತ್ರೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ. ಅಲ್ಲದೆ, ಸಂತ್ರಸ್ತ ಕುಟುಂಬಗಳಿಗೆ ಎಲ್ಲ ನೆರವಿನ ಭರವಸೆ ನೀಡಿದ್ದಾರೆ.

ಇಂದು ರಾಹುಲ್‌ ಭೇಟಿ: ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಕೂಡ ಮಂಗಳವಾರ ಆಸ್ಪತ್ರೆಗೆ ಭೇಟಿ ನೀಡಲಿದ್ದಾರೆ ಎನ್ನಲಾಗಿದೆ. ಬಿಎಸ್‌ಪಿ ನಾಯಕಿ ಮಾಯಾವತಿ ಅವರು ಪಕ್ಷದ ಹಿರಿಯ ಮುಖಂಡರ ನಿಯೋಗವೊಂದನ್ನು ಗೋರಖಪುರಕ್ಕೆ ಕಳುಹಿಸಿದ್ದಾರೆ.

‘ಇದು ಒಂದು ಅಥವಾ ಎರಡು ಮಕ್ಕಳ ಸಾವಲ್ಲ, 60 ಮಕ್ಕಳ ಸಾಮೂಹಿಕ ಹತ್ಯೆ. ಇದನ್ನು ಜೀರ್ಣಿಸಿಕೊಳ್ಳಲು ಸಾಧ್ಯವಿಲ್ಲ’ ಎಂದು ಪ್ರತಿಕ್ರಿಯಿಸಿದ್ದ ಬಿಜೆಪಿ ಸಂಸದ ಸಾಕ್ಷಿ ಮಹಾರಾಜ್‌ ಅವರು, ನಂತರ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಿರುಚಿವೆ ಎಂದು ಉಲ್ಟಾ ಹೊಡೆದಿದ್ದಾರೆ.

ಬಿಆರ್‌ಡಿ ಆಸ್ಪತ್ರೆ ಮಕ್ಕಳ ವಿಭಾಗದ ಸುಧಾರಣೆಗೆ ಸುಲ್ತಾನಪುರದ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ವರುಣ್‌ ಗಾಂಧಿ ಅವರು ತಮ್ಮ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಿಂದ  ₹5 ಕೋಟಿ ಅನುದಾನ ನೀಡುವುದಾಗಿ ಹೇಳಿದ್ದಾರೆ. ಆಸ್ಪತ್ರೆಗೆ ಆಮ್ಲಜನಕ ಸಿಲಿಂಡರ್‌ ಖಾಸಗಿ ಪೂರೈಸುತ್ತಿರುವ ಕಂಪೆನಿಯಿಂದ ಲಂಚ ಕೇಳಿದ ಆರೋಪ ದ ಬಗ್ಗೆ ತನಿಖೆ ನಡೆಸುವಂತೆ ಸರ್ಕಾರ ಸೂಚಿಸಿದೆ.
*
ಮಧ್ಯೆ ಪ್ರವೇಶಕ್ಕೆ ಸುಪ್ರೀಂಕೋರ್ಟ್ ನಕಾರ
ಗೋರಖಪುರ ಬಿಆರ್‌ಡಿ ಆಸ್ಪತ್ರೆಯಲ್ಲಿ ನಡೆದಿರುವ ಮಕ್ಕಳ ಸರಣಿ ಸಾವಿನ ಪ್ರಕರಣದಲ್ಲಿ ಮಧ್ಯೆ ಪ್ರವೇಶೀಸಲು ಸುಪ್ರೀಂ ಕೋರ್ಟ್ ಸೋಮವಾರ ನಿರಾಕರಿಸಿದೆ.

ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ತಂಡಕ್ಕೆ (ಎಸ್ಐಟಿ) ವಹಿಸುವಂತೆ ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಜೆ.ಎಸ್‌.ಖೇಹರ್ ನೇತೃತ್ವದ ನ್ಯಾಯಪೀಠ ವಜಾಗೊಳಿಸಿದೆ.

ಪ್ರಕರಣದ ಸಂಬಂಧ ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳಲು ನಿರಾಕರಿಸಿರುವ ಸುಪ್ರೀಂಕೋರ್ಟ್‌, ಯಾವುದೇ ತಕರಾರುಗಳಿದ್ದರೆ ಅಲಹಾಬಾದ್ ಹೈಕೋರ್ಟ್ ಸಂಪರ್ಕಿಸುವಂತೆ ಸೂಚಿಸಿದೆ.
*
₹70 ಲಕ್ಷಕ್ಕೆ 70 ಮಕ್ಕಳು ಬಲಿ!
ಉತ್ತರ ಪ್ರದೇಶ ಸರ್ಕಾರ ₹70ಲಕ್ಷಕ್ಕಾಗಿ 70 ಅಮಾಯಕ ಹಸುಳೆಗಳನ್ನು ಬಲಿ ಪಡೆದಿದೆ ಎಂದು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ತರಾಟೆಗೆ ತೆಗೆದುಕೊಂಡಿದೆ.

ADVERTISEMENT

ಆಮ್ಲಜನಕ ಸಿಲಿಂಡರ್‌ಗಳನ್ನು ಪೂರೈಸುತ್ತಿದ್ದ ಖಾಸಗಿ ಕಂಪೆನಿಗೆ ನೀಡಬೇಕಾಗಿದ್ದ ₹70 ಲಕ್ಷ ಬಾಕಿ ಹಣವನ್ನು ಸರ್ಕಾರ ನೀಡದ ಕಾರಣ ಕಂಪೆನಿ ಸಿಲಿಂಡರ್‌ ಪೂರೈಕೆ ನಿಲ್ಲಿಸಿತ್ತು.  ಅದರಿಂದಾಗಿ 70 ಮಕ್ಕಳು ಬಲಿಯಾಗಬೇಕಾಯಿತು ಎಂದು ಆಕ್ರೋಶ ವ್ಯಕ್ತಪಡಿಸಿದೆ.
*
ಮಕ್ಕಳ ಪ್ರಾಣ ಉಳಿಸಿದ ವೈದ್ಯ ವಜಾ!
ಮಕ್ಕಳ ಸರಣಿ ಸಾವಿನಿಂದ ಕುಖ್ಯಾತಿಗೊಳಗಾಗಿರುವ ಗೋರಖಪುರ ಬಿಆರ್‌ಡಿ ಸರ್ಕಾರಿ ಆಸ್ಪತ್ರೆಯಲ್ಲಿ ಮಕ್ಕಳ ಜೀವ ಉಳಿಸಲು ಹೋರಾಡಿದ ಅಪರೂಪದ ವೈದ್ಯರೊಬ್ಬರನ್ನು ಉತ್ತರ ಪ್ರದೇಶ ಸರ್ಕಾರ ವಜಾ ಮಾಡಿರುವುದು ಸಾರ್ವಜನಿಕರು ಹುಬ್ಬೇರಿಸುವಂತೆ ಮಾಡಿದೆ.

ಮಕ್ಕಳ ಪ್ರಾಣ ರಕ್ಷಣೆಗಾಗಿ ತಮ್ಮ ಸ್ವಂತ ಹಣ ಖರ್ಚು ಮಾಡಿ ಆಮ್ಲಜನಕ ಸಿಲಿಂಡರ್ ಖರೀದಿಸಿ ತಂದಿದ್ದ ಡಾ. ಕಫೀಲ್‌ ಖಾನ್‌ ಅವರನ್ನು ಬಿಆರ್‌ಡಿ ಆಸ್ಪತ್ರೆ ಮಿದುಳು ನಂಜು ವಾರ್ಡಿನ ನೋಡಲ್‌ ಅಧಿಕಾರಿ ಹುದ್ದೆಯಿಂದ ವಜಾ ಮಾಡಲಾಗಿದೆ.

ಡಾ. ಖಾನ್‌ ಅವರು ನಗರದ ವಿವಿಧ ಆಮ್ಲಜನಕ ತಯಾರಿಕಾ ಘಟಕಗಳಿಗೆ ಓಡಾಡಿ ತಮ್ಮ ಸೈಕಲ್‌ನಲ್ಲಿ ಮೂರು ಆಮ್ಲಜನಕ ಸಿಲಿಂಡರ್‌ ತಂದಿದ್ದರು. ಇದರಿಂದಾಗಿ ಅವರು ರಾತ್ರೋರಾತ್ರಿ ಮಕ್ಕಳ ಪ್ರಾಣ ಉಳಿಸಿದ ‘ಹೀರೊ ಡಾಕ್ಟರ್‌’ ಎಂದು ಖ್ಯಾತರಾಗಿದ್ದಾರೆ.

ಡಾ. ಖಾನ್‌ ತಮ್ಮ ಸ್ವಂತ ಖರ್ಚಿನಿಂದ ಸಿಲಿಂಡರ್‌ ತಂದಿದ್ದಾರೆ ಎಂಬುದನ್ನು ತಳ್ಳಿ ಹಾಕಿರುವ ಆಸ್ಪತ್ರೆಯ ಮಹಾ ನಿರ್ದೇಶಕ ಕೆ.ಕೆ.ಗುಪ್ತಾ, ಆಸ್ಪತ್ರೆಯಲ್ಲಿಯೇ 52 ಆಮ್ಲಜನಕ ಸಿಲಿಂಡರ್‌ ಇರುವಾಗ ಹೊರಗಡೆಯಿಂದ ತರುವ ಪ್ರಶ್ನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ.

‘ಬಿಆರ್‌ಡಿ ವೈದ್ಯಕೀಯ ಕಾಲೇಜು ಡಾ. ಖಾನ್‌ ಅವರನ್ನು ಹೀರೊ ಎಂದು ಘೋಷಿಸಿಲ್ಲ. ಇದೆಲ್ಲ ಮಾಧ್ಯಮಗಳ ಸೃಷ್ಟಿ’ ಎಂದು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಕ್ಕಳ ವಿಭಾಗದ ಮಿದುಳು ನಂಜು ವಾರ್ಡ್‌ ನೋಡಲ್‌ ಅಧಿಕಾರಿ ಹುದ್ದೆಯಿಂದ ಮಾತ್ರ ಅವರನ್ನು ವಜಾ ಮಾಡಲಾಗಿದ್ದು, ವೈದ್ಯರಾಗಿ ಅವರು ಮುಂದುವರಿಯುತ್ತಾರೆ ಎಂದು ಗುಪ್ತಾ ಸ್ಪಷ್ಟಪಡಿಸಿದ್ದಾರೆ.

ಮಕ್ಕಳ ಪ್ರಾಣ ರಕ್ಷಣೆಗಾಗಿ ಪ್ರಾಮಾಣಿಕ ಸೇವೆ ಸಲ್ಲಿಸಿದ್ದೇನೆ. ಆದರೆ, ಇದನ್ನು ಸಹಿಸದ ಕೆಲವು ಶಕ್ತಿಗಳು ತಮ್ಮ ತೇಜೋವಧೆಯಲ್ಲಿ ತೊಡಗಿವೆ ಎಂದು ಡಾ. ಕಫಿಲ್‌ ಖಾನ್‌ ಪ್ರತಿಕ್ರಿಯಿಸಿದ್ದಾರೆ.
*
ಅಮಾಯಕ ಮಕ್ಕಳ ಸಾವು ಕೇವಲ ದುರಂತವಲ್ಲ, ಅದೊಂದು ಸಾಮೂಹಿಕ ಹತ್ಯಾಕಾಂಡ.
–ಸಾಮ್ನಾ,
ಶಿವಸೇನಾ ಮುಖವಾಣಿ ಪತ್ರಿಕೆ

*
ಮಿದುಳು ಸೋಂಕಿಗೆ ಯಾವ ವರ್ಷ ಎಷ್ಟು ಮಕ್ಕಳು ಬಲಿ?
(ಮಾಧ್ಯಮ ವರದಿಗಳ ಉಲ್ಲೇಖ)
2015ರಲ್ಲಿ 491

2016ರಲ್ಲಿ 641

2017 (ಆಗಸ್ಟ್‌ 8ರವರೆಗೆ) 124

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.