ADVERTISEMENT

ಓಲೈಕೆ ಇಲ್ಲದ ಅಭಿವೃದ್ಧಿ: ಆದಿತ್ಯನಾಥ ಘೋಷಣೆ

ಗೋರಖಪುರಕ್ಕೆ ಮುಖ್ಯಮಂತ್ರಿ ಭೇಟಿ l ಕಾನೂನು ಕೈಗೆತ್ತಿಕೊಳ್ಳದಂತೆ ಕಾರ್ಯಕರ್ತರಿಗೆ ಸೂಚನೆ

ಪಿಟಿಐ
Published 25 ಮಾರ್ಚ್ 2017, 18:32 IST
Last Updated 25 ಮಾರ್ಚ್ 2017, 18:32 IST
ಓಲೈಕೆ ಇಲ್ಲದ ಅಭಿವೃದ್ಧಿ: ಆದಿತ್ಯನಾಥ ಘೋಷಣೆ
ಓಲೈಕೆ ಇಲ್ಲದ ಅಭಿವೃದ್ಧಿ: ಆದಿತ್ಯನಾಥ ಘೋಷಣೆ   

ಗೋರಖಪುರ: ಉತ್ತರ ಪ್ರದೇಶದಲ್ಲಿ ಯಾರನ್ನೂ ಓಲೈಸುವುದಿಲ್ಲ ಎಂದು ಸಾರಿದ ಮುಖ್ಯಮಂತ್ರಿ ಆದಿತ್ಯನಾಥ ಯೋಗಿ, ಜಾತಿ, ಧರ್ಮ, ಸ್ತ್ರೀ, ಪುರುಷ ಎಂಬ ಭೇದವಿಲ್ಲದೆ ಎಲ್ಲರ ಅಭಿವೃದ್ಧಿಗೆ ಶ್ರಮಿಸುವ ಭರವಸೆ ನೀಡಿದರು.

‘ಉತ್ತರ ಪ್ರದೇಶದಲ್ಲಿ ಬಿಜೆಪಿ ಸಾಧಿಸಿದ ಐತಿಹಾಸಿಕ ವಿಜಯದ ಸಂಭ್ರಮಾಚರಣೆ ವೇಳೆ ಅತ್ಯುತ್ಸಾಹ ತೋರಬಾರದು. ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಇದು ಅರಾಜಕ ಶಕ್ತಿಗಳಿಗೆ ಶಾಂತಿ ಕದಡಲು ಅವಕಾಶ ನೀಡುತ್ತದೆ’ ಎಂದು ಪಕ್ಷದ ಕಾರ್ಯಕರ್ತರನ್ನು ಎಚ್ಚರಿಸಿದರು.

ಯುವ ಜೋಡಿಗಳಿಗೆ ತೊಂದರೆ ಕೊಡದಂತೆ ಪೊಲೀಸರಿಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ADVERTISEMENT

ಬೀದಿ ಕಾಮಣ್ಣರನ್ನು ನಿಗ್ರಹಿಸಲು ರಚಿಸಿರುವ ದಳವು (ಆ್ಯಂಟಿ ರೋಮಿಯೊ ದಳ) ಸ್ನೇಹಿತೆಯರ ಜೊತೆ ಇರುವ ಯುವಕರಿಗೂ ತೊಂದರೆ ಕೊಡುತ್ತಿದೆ ಎಂಬ ವರದಿಗಳ ನಡುವೆಯೇ ಆದಿತ್ಯನಾಥ ಅವರಿಂದ ಈ ಹೇಳಿಕೆ ಬಂದಿದೆ.

ಕೈಲಾಸ – ಮಾನಸ ಸರೋವರ ಯಾತ್ರೆ ಕೈಗೊಳ್ಳುವವರಿಗೆ ರಾಜ್ಯ ಸರ್ಕಾರ ₹ 1 ಲಕ್ಷ ನೆರವು ನೀಡಲಿದೆ. ಯಾತ್ರಿಕರ ಅನುಕೂಲಕ್ಕಾಗಿ ಕೈಲಾಸ ಭವನ ನಿರ್ಮಿಸಲಾಗುವುದು ಎಂದು ಪ್ರಕಟಿಸಿದರು.

ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಆದಿತ್ಯನಾಥ ಅವರು ಗೋರಖಪುರಕ್ಕೆ ನೀಡುತ್ತಿರುವ ಮೊದಲ ಭೇಟಿ ಇದು.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಉತ್ತರ ಪ್ರದೇಶ ಅಭಿವೃದ್ಧಿಯಿಂದ ವಂಚಿತವಾಯಿತು ಎಂದು ಆರೋಪಿಸಿದ ಅವರು, ತಮ್ಮ ಸರ್ಕಾರವು ಅಭಿವೃದ್ಧಿಯ ಫಲ ಕಟ್ಟಕಡೆಯ ಮನುಷ್ಯನಿಗೂ ದೊರೆಯುವಂತೆ ಮಾಡಲಿದೆ ಎಂದು ಹೇಳಿದರು.

‘ಗೂಂಡಾ ರಾಜ್‌ ಇಲ್ಲ’: ‘ಭ್ರಷ್ಟಾಚಾರ ಹಾಗೂ ಗೂಂಡಾ ರಾಜ್‌ಗೆ ನನ್ನ ಅಧಿಕಾರ ಅವಧಿಯಲ್ಲಿ ಅವಕಾಶ ಇಲ್ಲ’ ಎಂದು ಆದಿತ್ಯನಾಥ ಹೇಳಿದರು.

‘ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ನನಗೆ ಕರೆ ಮಾಡಿದ ಕೆಲವು ಹೆಣ್ಣುಮಕ್ಕಳು, ಚುಡಾಯಿಸುವವರ ಕಾಟದಿಂದಾಗಿ ಶಾಲೆ, ಕಾಲೇಜುಗಳಿಗೆ ಹೋಗಲು ಆಗುತ್ತಿಲ್ಲ ಎಂದು ಸಮಸ್ಯೆ ಹೇಳಿಕೊಂಡಿದ್ದರು. ಹೆಣ್ಣುಮಕ್ಕಳು ಮತ್ತು ಮಹಿಳೆಯರ ರಕ್ಷಣೆಗಾಗಿ ಬೀದಿ ಕಾಮಣ್ಣರ ನಿಗ್ರಹ ದಳ ಸ್ಥಾಪಿಸಲಾಗಿದೆ’ ಎಂಬ ವಿವರಣೆ ನೀಡಿದರು.

ಹೆಣ್ಣುಮಕ್ಕಳ ಒಪ್ಪಿಗೆ ಪಡೆದು ಅವರ ಜೊತೆ ಇರುವ ಹುಡುಗರಿಗೆ ತೊಂದರೆ ಕೊಡದಂತೆ ಪೊಲೀಸರಿಗೆ ತಾಕೀತು ಮಾಡಲಾಗಿದೆ ಎಂದು ಹೇಳಿದರು.
ಅಕ್ರಮ ಕಸಾಯಿಖಾನೆಗಳನ್ನು ಮುಚ್ಚುವ ಸರ್ಕಾರದ ತೀರ್ಮಾನದ ಬಗ್ಗೆ ಸ್ಪಷ್ಟನೆ ನೀಡಿದ ಅವರು ‘ಬಿಜೆಪಿ ಪ್ರಣಾಳಿಕೆಯಲ್ಲಿ ಇದ್ದ ಭರವಸೆಗಳನ್ನು ಸರ್ಕಾರ ಈಡೇರಿಸಲಿದೆ’ ಎಂದು ಹೇಳಿದರು.

‘ಇದು ಹಿಂದೂ ರಾಷ್ಟ್ರದ ಆರಂಭವೇ?’
ನವದೆಹಲಿ:
ಆದಿತ್ಯನಾಥ ಯೋಗಿ ಅವರನ್ನು ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ನೇಮಿಸಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಫಾಲಿ ಎಸ್. ನಾರಿಮನ್, ‘ಇದು ಹಿಂದೂ ರಾಷ್ಟ್ರದ ಆರಂಭವೇ’ ಎಂದು ಪ್ರಶ್ನಿಸಿದರು.

ಚುನಾವಣೆಯ ನಂತರ ಉತ್ತರ ಪ್ರದೇಶದಲ್ಲಿನ ಬೆಳವಣಿಗೆಗಳನ್ನು ಉಲ್ಲೇಖಿಸಿದ ನಾರಿಮನ್, ‘ಸಂವಿಧಾನ ಆಪತ್ತಿನಲ್ಲಿದೆ. ಆದಿತ್ಯನಾಥ ಅವರ ನೇಮಕದ ಹಿಂದಿನ ಉದ್ದೇಶವನ್ನು ಕಾಣಲಾರದವರು ರಾಜಕೀಯ ಪಕ್ಷಗಳ ವಕ್ತಾರರಾಗಿರಬೇಕು ಅಥವಾ ಅವರು ತಮ್ಮ ತಲೆ ಹಾಗೂ ಕಣ್ಣುಗಳನ್ನು ಪರೀಕ್ಷೆಗೆ ಒಳಪಡಿಸಬೇಕು’ ಎಂದು ಖಾರವಾಗಿ ಹೇಳಿದರು.

‘ನಿರ್ದಿಷ್ಟ ವ್ಯಕ್ತಿಯೊಬ್ಬರನ್ನು ಮುಖ್ಯಮಂತ್ರಿಯನ್ನಾಗಿ ನೇಮಿಸಿರುವುದರ ಹಿಂದೆ ಧಾರ್ಮಿಕ ಪ್ರಭುತ್ವ ಸ್ಥಾಪಿಸುವ ಉದ್ದೇಶವಿದೆ’ ಎಂದು ನಾರಿಮನ್ ಅವರು ಎನ್‌ಡಿಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

‘ಮುಂದೆ ಬರಲಿರುವುದನ್ನು ಎದುರಿಸುವ ಸಿದ್ಧತೆ ನಡೆಸಲು ಜನ ಇದು ಹಿಂದೂ ರಾಷ್ಟ್ರದ ಆರಂಭವೇ ಎಂಬ ಪ್ರಶ್ನೆಯನ್ನು ಪ್ರಧಾನಿಯವರಲ್ಲಿ ಕೇಳಬೇಕು’ ಎಂದು ನಾರಿಮನ್‌ ಹೇಳಿದರು.

ಮಾಂಸ ಮಾರಾಟಗಾರರ  ಮುಷ್ಕರ
ಲಖನೌ:
ಅಕ್ರಮ ಮತ್ತು ಯಾಂತ್ರೀಕೃತ ಕಸಾಯಿಖಾನೆಗಳಿಗೆ ನಿರ್ಬಂಧ ವಿಧಿಸಿರುವ ಸರ್ಕಾರದ ಕ್ರಮ ಖಂಡಿಸಿ ಉತ್ತರ ಪ್ರದೇಶದ ಮಾಂಸ ಮಾರಾಟಗಾರರು ಅನಿರ್ದಿಷ್ಟಾವಧಿ  ಮುಷ್ಕರ ಆರಂಭಿಸಿದ್ದಾರೆ.

‘ಕೋಳಿ ಹಾಗೂ ಆಡಿನ ಮಾಂಸ ಮಾರಾಟಗಾರರೂ ಭಯದಿಂದ ಅಂಗಡಿಗಳನ್ನು ಮುಚ್ಚಿದ್ದಾರೆ’ ಎಂದು ಮಾಂಸ ಮಾರಾಟಗಾರರ ಸಂಘದ ಮುಬೀನ್‌ ಖುರೇಶಿ ತಿಳಿಸಿದ್ದಾರೆ.

‘ಮೀನು ಮಾರಾಟಗಾರರೂ ಮುಷ್ಕರದಲ್ಲಿ ಪಾಲ್ಗೊಳ್ಳುವರು’ ಎಂದು ಅವರು ಹೇಳಿದ್ದಾರೆ. ಮಾಂಸ ಮಾರಾಟಗಾರರು ಮುಷ್ಕರ ನಡೆಸುತ್ತಿರುವುದರಿಂದ ಹಲವು ಪ್ರಮುಖ ಮಾಂಸಹಾರಿ ಹೋಟೆಲ್‌ಗಳು ಬಾಗಿಲು ಮುಚ್ಚಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.