ADVERTISEMENT

ಕಣಿವೆಯಲ್ಲಿ ಕುಡಿವ ನೀರಿಗೆ ಹೆಚ್ಚಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2014, 19:30 IST
Last Updated 15 ಸೆಪ್ಟೆಂಬರ್ 2014, 19:30 IST

ಜಮ್ಮು/ನವದೆಹಲಿ (ಪಿಟಿಐ): ಕಾಶ್ಮೀರ ಕಣಿವೆಯ­ಲ್ಲೀಗ ಪ್ರವಾಹ ಭೀತಿ ಮರೆಯಾಗಿ ಸಾಂಕ್ರಾಮಿಕ ರೋಗ ಹರಡುವ ಆತಂಕ ಆವರಿಸಿದೆ. ಅದರ ಬೆನ್ನಲ್ಲೇ ಸಂತ್ರಸ್ತರಿಗೆ ಶುದ್ಧ ಕುಡಿಯುವ ನೀರು ಮತ್ತು ಔಷಧ­ಗಳನ್ನು ಪೂರೈಸುವ ದೊಡ್ಡ ಸವಾಲು ಎದುರಾಗಿದೆ.
 
ಕುಡಿಯುವ ನೀರು ಸರಬರಾಜು ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ದೊಡ್ಡ ಸಮಸ್ಯೆಯಾಗಿ ಪರಿಣ­ಮಿ­ಸಿದೆ. ಈ ನಡುವೆ ರೈಲ್ವೆ ಹಾಗೂ ಪರಿಹಾರ ಕಾರ್ಯಾಚರಣೆ ಪಡೆಗಳು ಪೂರೈಸುತ್ತಿರುವ ನೀರಿನ ಬಾಟಲ್‌ ಯಾತಕ್ಕೂ ಸಾಕಾಗುತ್ತಿಲ್ಲ.

ಇದರಿಂದಾಗಿ ದಿನಕ್ಕೆ ಒಂದು ಲಕ್ಷ ಲೀಟರ್‌ ನೀರನ್ನು ಶುದ್ಧೀಕರಿಸುವ ಸಾಮರ್ಥ್ಯದ 20 ಘಟಕ, 13 ಟನ್‌ ಕ್ಲೋರಿನ್‌ ಮಾತ್ರೆಗಳನ್ನು ಶ್ರೀನಗರಕ್ಕೆ ತರಿಸಿಕೊಳ್ಳ­ಲಾಗಿದೆ. ಕಡಿದು ಹೋಗಿರುವ ಸ್ಥಿರ ದೂರವಾಣಿ ಸಂಪರ್ಕ ಮರು ಸ್ಥಾಪನೆ ಯತ್ನ ಮುಂದುವರಿದಿದ್ದು ಪರ್ಯಾಯ ವ್ಯವಸ್ಥೆಯಾಗಿ ಬಿಎಸ್‌ಎನ್‌ಎಲ್‌ ಹೆಚ್ಚು­ವರಿ ಯಂತ್ರೋಪಕರಣಗಳನ್ನು ಅಳವಡಿಸಲು ಮುಂದಾ­ಗಿದೆ.

ಪ್ರವಾಹದಲ್ಲಿ ರೈಲು ಮಾರ್ಗ ಕೊಚ್ಚಿ ಹೋದ ಕಾರಣ 11 ದಿನಗಳಿಂದ ಸ್ಥಗಿತಗೊಂಡಿದ್ದ ರೈಲು ಸಂಚಾರ ಸೋಮವಾರದಿಂದ ಪುನರಾರಂಭವಾಗಿದೆ.

ಶ್ರೀನಗರ–ಬಾರಾಮುಲ್ಲಾ ನಡುವೆ ಮೊದಲ ರೈಲು ಸಂಚಾರ ಆರಂಭವಾಗಿದ್ದು, ಉಳಿದ ಭಾಗಗಳಲ್ಲೂ ಶೀಘ್ರ ಸಂಚಾರ ಆರಂಭವಾಗುವ ಸಾಧ್ಯತೆ ಇದೆ.

ಕೆಲವು ರಸ್ತೆಗಳ ದುರಸ್ತಿ ಕೈಗೊಳ್ಳಲಾಗಿದ್ದು ಲಘು ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಈ ನಡುವೆ ರಕ್ಷಣಾ ಕಾರ್ಯಾಚರಣೆ 14ನೇ ದಿನಕ್ಕೆ ಕಾಲಿಟ್ಟಿದ್ದು, ಇಲ್ಲಿಯವರೆಗೆ ಸೇನೆ 2.26 ಲಕ್ಷಕ್ಕೂ ಹೆಚ್ಚು ನಾಗರಿಕರನ್ನು ರಕ್ಷಿಸಿದೆ.

ಕಾರ್ಯಾಚರಣೆ: ‘ಸುಪ್ರೀಂ’ ಅಸಮಾಧಾನ

ನವದೆಹಲಿ(ಪಿಟಿಐ): ಪ್ರವಾಹ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಾಗ ಕೇವಲ ಶ್ರೀನಗರದ ಮೇಲಷ್ಟೇ ಗಮನ ಕೇಂದ್ರೀಕರಿಸಬಾರದು ಎಂದು ಕೇಂದ್ರ ಸರ್ಕಾರ ಹಾಗೂ ಜಮ್ಮು ಮತ್ತು ಕಾಶ್ಮೀರ ಸರ್ಕಾರಕ್ಕೆ ಸುಪ್ರೀಂಕೋರ್ಟ್‌ ಸೂಚಿಸಿದೆ.

ಪ್ರವಾಹ ಪೀಡಿತ ಜನರಿಗೆ ಪುನರ್‌ ವಸತಿ ಕಲ್ಪಿಸುವಲ್ಲಿ ಹಾಗೂ ಅಗತ್ಯ ವಸ್ತುಗಳು ಪ್ರತಿಯೊಬ್ಬ ಸಂತ್ರಸ್ತರಿಗೂ ದೊರೆಯುವಂತೆ ಅಧಿಕಾರಿಗಳು ಎಚ್ಚರಿಕೆ ವಹಿಸಬೇಕು. ಇತರ ಜಿಲ್ಲೆಗಳಲ್ಲೂ ಸಂಕಷ್ಟದ ಪರಿಸ್ಥಿತಿ ಇದೆ ಎಂದು ಕೋರ್ಟ್‌ ಹೇಳಿದೆ.  ಜಮ್ಮು ಕಾಶ್ಮೀರ ನ್ಯಾಷನಲ್‌ ಪ್ಯಾಂಥರ್ಸ್‌ ಪಕ್ಷದ ನಾಯಕ ಭೀಮ್‌ ಸಿಂಗ್‌ ಪ್ರವಾಹ ಪರಿಹಾರ ಕಾರ್ಯಾಚರಣೆಯಲ್ಲಿನ ನ್ಯೂನತೆ  ಸರಿಪಡಿಸುವಂತೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಸಂದರ್ಭದಲ್ಲಿ ಮುಖ್ಯ ನ್ಯಾಯಮೂರ್ತಿ ಆರ್.ಎಂ. ಲೋಧಾ ನೇತೃತ್ವದ ಪೀಠ ಅಸಮಾಧಾನ ವ್ಯಕ್ತಪಡಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT