ADVERTISEMENT

ಕಣ್ಣೀರಿಟ್ಟ ಮುಖ್ಯ ನ್ಯಾಯಮೂರ್ತಿ

ನ್ಯಾಯಾಂಗದ ಮೇಲೆ ಅತೀಯಾದ ಒತ್ತಡದಿಂದ ಹತಾಶೆ: ಠಾಕೂರ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2016, 19:34 IST
Last Updated 24 ಏಪ್ರಿಲ್ 2016, 19:34 IST
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಕಣ್ಣೀರಿಟ್ಟ ಕ್ಷಣಗಳು.
ಸುಪ್ರೀಂಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಕಣ್ಣೀರಿಟ್ಟ ಕ್ಷಣಗಳು.   

ನವದೆಹಲಿ (ಪಿಟಿಐ): ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಟಿ.ಎಸ್‌. ಠಾಕೂರ್‌ ಅವರು ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದ ಕಾರ್ಯಕ್ರಮದಲ್ಲಿ ಕಣ್ಣೀರಿಟ್ಟ ಘಟನೆ ಭಾನುವಾರ ನಡೆದಿದೆ.

ನ್ಯಾಯಾಂಗದ ಮೇಲಿರುವ ಅತಿಯಾದ ಒತ್ತಡ ಮತ್ತು ನ್ಯಾಯಾಧೀಶರು ಹಾಗೂ ನ್ಯಾಯಮೂರ್ತಿಗಳ ಕೊರತೆ ವಿಷಯದ ಬಗ್ಗೆ ಮಾತನಾಡುತ್ತಿದ್ದಾಗ ಅವರು ಭಾವುಕರಾದರು.

ಹೈಕೋರ್ಟ್‌ಗಳ ಮುಖ್ಯ ನ್ಯಾಯಮೂರ್ತಿಗಳು ಮತ್ತು ಮುಖ್ಯಮಂತ್ರಿಗಳು ಪಾಲ್ಗೊಂಡಿದ್ದ ಸಮಾವೇಶದ ಉದ್ಘಾಟನಾ ಭಾಷಣದ ವೇಳೆ ಠಾಕೂರ್‌,  ‘ಪ್ರಸ್ತುತ ಇರುವ ನ್ಯಾಯಾಧೀಶರ ಸಂಖ್ಯೆಯನ್ನು 21 ಸಾವಿರದಿಂದ 40 ಸಾವಿರಕ್ಕೆ ಹೆಚ್ಚಿಸುವ ವಿಷಯದಲ್ಲಿ ಸರ್ಕಾರ ನಿರ್ಧಾರ ತೆಗೆದುಕೊಳ್ಳುತ್ತಿಲ್ಲ’ ಎಂದರು.

‘10 ಲಕ್ಷ ಜನರಿಗೆ 10 ನ್ಯಾಯಾಧೀಶರ ಬದಲಾಗಿ 50 ನ್ಯಾಯಾಧೀಶರನ್ನು ನೇಮಿಸಬೇಕು ಎಂದು ರಾಷ್ಟ್ರೀಯ ಕಾನೂನು ಆಯೋಗ 1987 ರಲ್ಲಿ ಶಿಫಾರಸು ಮಾಡಿತ್ತು. ಆದರೆ ಅದು ಇನ್ನೂ ಕಾರ್ಯಗತವಾಗಿಲ್ಲ. ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸುವ ವಿಷಯದಲ್ಲಿ ಸರ್ಕಾರ ಉದಾಸೀನ ತೋರಿದೆ’ ಎನ್ನುವಾಗ ಅವರು ಗದ್ಗದಿತರಾದರು.

‘ನ್ಯಾಯಾಲಯಗಳಲ್ಲಿ ಪ್ರಕರಣಗಳ ಶೀಘ್ರ ವಿಲೇವಾರಿ ನಡೆಯುತ್ತಿಲ್ಲ. ವಿಚಾರಣಾಧೀನ ಕೈದಿಗಳಾಗಿ ಜೈಲಿನಲ್ಲಿರುವವರು ಇದರಿಂದ ಸಂಕಟ ಅನುಭವಿಸುತ್ತಿದ್ದಾರೆ.  ದೇಶದ ಅಭಿವೃದ್ಧಿ ಮೇಲೂ ಇದು ವ್ಯತಿರಿಕ್ತ ಪರಿಣಾಮ ಬೀರಿದೆ. ಎಲ್ಲ ಹೊರೆಯನ್ನು ನ್ಯಾಯಾಂಗದ ಮೇಲೆ ಹೇರುವುದು ಸರಿಯಲ್ಲ’ ಎಂದರು.

‘ನ್ಯಾಯಾಧೀಶರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂದು ಕಾನೂನು ಆಯೋಗ ಮಾಡಿದ್ದ ಶಿಫಾರಸಿಗೆ ಸುಪ್ರೀಂ ಕೋರ್ಟ್‌ 2002 ರಲ್ಲಿ ಬೆಂಬಲ ಸೂಚಿಸಿತ್ತು. ಪ್ರಣವ್‌ ಮುಖರ್ಜಿ ನೇತೃತ್ವದ ಕಾನೂನಿಗೆ ಸಂಬಂಧಿಸಿದ ಸಂಸತ್ತಿನ ಸ್ಥಾಯಿ ಸಮಿತಿ ಕೂಡಾ 10 ಲಕ್ಷ ಜನರಿಗೆ 50 ನ್ಯಾಯಾಧೀಶರು ಇರಬೇಕು ಎಂದು ಶಿಫಾರಸು ಮಾಡಿತ್ತು’ ಎಂದರು.

‘ನ್ಯಾಯಾಂಗಕ್ಕೆ ನೆರವಾಗಲು ಬದ್ಧವಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ. ಇದಕ್ಕೆ ಮೂಲ ಸೌಕರ್ಯ ಕಲ್ಪಿಸಿಕೊಡುವುದು ರಾಜ್ಯ ಸರ್ಕಾರಗಳ ಕರ್ತವ್ಯ. ನ್ಯಾಯಾಂಗದ ವೆಚ್ಚ ಮತ್ತು ಇತರ ವಿಷಯಗಳಿಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ  ತಿಕ್ಕಾಟವಿದೆ’ ಎಂದು ಠಾಕೂರ್‌ ಹೇಳಿದರು.

ಸಮಸ್ಯೆಗೆ ಪರಿಹಾರ
‘ಅವರ (ಮುಖ್ಯ ನ್ಯಾಯಮೂರ್ತಿಗಳ) ನೋವನ್ನು ನಾನು ಬಲ್ಲೆ. ಕಾನೂನು ಆಯೋಗ ತನ್ನ ಶಿಫಾರಸು ಮಾಡಿ ಹಲವು ವರ್ಷಗಳೇ ಕಳೆದಿವೆ. ಆದರೂ ಚಿಂತೆಪಡಬೇಕಿಲ್ಲ. ಮಾಡದೇ ಇರುವುದಕ್ಕಿಂತ ತಡವಾಗಿ ಮಾಡುವುದು ಉತ್ತಮ. ನ್ಯಾಯಾಂಗದ ಮೇಲಿರುವ ಹೊರೆ ಇಳಿಸುವುದು ಹೇಗೆಂಬುದನ್ನು ಯೋಚಿಸೋಣ’ ಎಂದು ಪ್ರಧಾನಿ ಮೋದಿ ಹೇಳಿದರು. 

ನ್ಯಾಯಾಂಗ ಸುಧಾರಣೆ ಸಮಾವೇಶದ ವೇಳಾಪಟ್ಟಿಯಂತೆ ಮೋದಿ ಅವರು ಮಾತನಾಡುವ ಕಾರ್ಯಕ್ರಮ ಇರಲಿಲ್ಲ. ಆದರೂ ಮುಖ್ಯ ನ್ಯಾಯಮೂರ್ತಿ ಮಾತಿಗೆ ಪ್ರತಿಕ್ರಿಯಿಸಿದರು. 

‘ಸಂವಿಧಾನದಲ್ಲಿ ಅವಕಾಶ ಇದೆ ಎಂದಾದರೆ ಪರಸ್ಪರ ಚರ್ಚಿಸಿ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು’  ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT