ADVERTISEMENT

ಕಪ್ಪುಹಣವಷ್ಟೂ ವಾಪಸ್‌: ಮೋದಿ ಭರವಸೆ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2014, 9:20 IST
Last Updated 2 ನವೆಂಬರ್ 2014, 9:20 IST

ನವದೆಹಲಿ (ಪಿಟಿಐ): ವಿದೇಶಿ ಬ್ಯಾಂಕ್‌ಗಳಲ್ಲಿರುವ ಭಾರತದ ಕಪ್ಪುಹಣವಷ್ಟನ್ನೂ ಮರಳಿ ತರಲಾಗುವುದು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಭಾನುವಾರ ರಾಷ್ಟ್ರದ ಜನರಿಗೆ ಭರವಸೆ ನೀಡಿದ್ದಾರೆ.

ಆಕಾಶವಾಣಿಯ ‘ಮನ್‌ ಕಿ ಬಾತ್‌’ ಕಾರ್ಯಕ್ರಮದಲ್ಲಿ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ‘ಕಪ್ಪುಹಣದ ಪ್ರತಿ ಪೈಸೆಯನ್ನೂ ಭಾರತಕ್ಕೆ ಮರಳಿ ತರಲಾಗುವುದು. ನನ್ನ ಬಗ್ಗೆ ಹಾಗೂ ನನ್ನ ಮಾತಿನ ಬಗ್ಗೆ ರಾಷ್ಟ್ರದ ಜನರಿಗೆ ವಿಶ್ವಾಸವಿರಲಿ’ ಎಂದು ಅವರು ಹೇಳಿದ್ದಾರೆ.

ತಮ್ಮನ್ನು ತಾವು ‘ಪ್ರಧಾನ ಸೇವಕ’ ಎಂದು ಪುನರುಚ್ಚರಿಸಿದ ಮೋದಿ, ‘ನಿಮ್ಮ ಪ್ರಧಾನ ಸೇವಕನ ಮೇಲೆ ನಂಬಿಕೆ ಇರಲಿ. ಭಾರತದ ಕಪ್ಪುಹಣ ವಾಪಸ್‌ ತರಲು ಸಾಕಷ್ಟು ದಾರಿಗಳಿವೆ. ಆದರೆ, ನಾವು ಈಗ ಸರಿಯಾದ ಮಾರ್ಗದಲ್ಲೇ ಅದನ್ನು ಮರಳಿ ತರಲು ಮುಂದಾಗಿದ್ದೇವೆ’ ಎಂದಿದ್ದಾರೆ.

ADVERTISEMENT

‘ಕಪ್ಪುಹಣ ಎಷ್ಟಿದೆ ಎಂಬ ಬಗ್ಗೆ ನಿಖರವಾದ ಅಂಕಿಸಂಖ್ಯೆ ಇಲ್ಲ. ಹಿಂದಿನ ಸರ್ಕಾರ ಕೂಡ ಇದನ್ನು ಸ್ಪಷ್ಟಪಡಿಸಿಲ್ಲ. ಪ್ರತಿಯೊಬ್ಬರೂ ಬೇರೆ ಬೇರೆ ಅಂಕಿಸಂಖ್ಯೆ ನೀಡುತ್ತಿದ್ದಾರೆ’ ಎಂದು ಮೋದಿ ತಮ್ಮ ಎರಡನೆಯ ರೇಡಿಯೊ ಭಾಷಣದಲ್ಲಿ ತಿಳಿಸಿದ್ದಾರೆ.

‘ಅಂಕಿಸಂಖ್ಯೆಯ ಬಗ್ಗೆ ತಲೆಕೆಡಿಸಿಕೊಳ್ಳುವುದಕ್ಕಿಂತ ಆ ಹಣವನ್ನು ಮರಳಿ ತರುವುದು ಮುಖ್ಯ. ಅದು ಭಾರತದ ಬಡಜನರ ಬೆವರಿನ ಹಣ. ಅದನ್ನು ಮರಳಿ ತರಲು ದೇಶದ ಜನರ ಆಶೀರ್ವಾದ ಬೇಕು’ ಎಂದು ಅವರು ಹೇಳಿದ್ದಾರೆ.

ಮೋದಿ ಅವರ ಮೊದಲ ರೇಡಿಯೊ ಭಾಷಣ ‘ಮನ್‌ ಕಿ ಬಾತ್‌’ ಅಕ್ಟೋಬರ್‌ 3ರಂದು ಪ್ರಸಾರವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.