ADVERTISEMENT

ಕಪ್ಪು ಹಣ: ಸುಪ್ರೀಂ ತರಾಟೆಗೆ ಮಣಿದ ಕೇಂದ್ರ

627ಖಾತೆದಾರರ ಹೆಸರು ಬಹಿರಂಗ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2014, 9:42 IST
Last Updated 29 ಅಕ್ಟೋಬರ್ 2014, 9:42 IST

ನವದೆಹಲಿ (ಪಿಟಿಐ): ಸುಪ್ರೀಂಕೋರ್ಟ್‌ ತರಾಟೆಗೆ ಕೇಂದ್ರ ಸರ್ಕಾರ ಕೊನೆಗೂ ಮಣಿದಿದೆ. ವಿದೇಶಿ ಬ್ಯಾಂಕ್‌ಗಳಲ್ಲಿ ಕಪ್ಪು ಹಣ ಹೊಂದಿರುವ 627 ಭಾರತೀಯರ ಹೆಸರಿನ  ಪಟ್ಟಿಯನ್ನು ಬುಧವಾರ ಕೋರ್ಟ್‌ಗೆ ಸಲ್ಲಿಸಿದೆ.

ಜಿನಿವಾದ ಎಚ್‌ಎಸ್‌ಬಿಸಿ ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ 627 ಭಾರತೀಯರ ಹೆಸರುಗಳು ಈ ಪಟ್ಟಿಯಲ್ಲಿವೆ. ಅಟಾರ್ನಿ ಜನರಲ್‌ ಮುಕುಲ್‌ ರೊಹಟಗಿ ಅವರು ಬುಧವಾರ, ಮುಖ್ಯ  ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರ ನೇತೃತ್ವದ ಪೀಠದ ಮುಂದೆ ಎರಡು ಮುಚ್ಚಿದ ಲಕೋಟೆಗಳಲ್ಲಿ ಈ ಮಾಹಿತಿ ಸಲ್ಲಿಸಿದರು.

ಆದರೆ, ಮುಖ್ಯ ನ್ಯಾಯಮೂರ್ತಿ ಎಚ್‌.ಎಲ್‌. ದತ್ತು ಅವರು ಈ ಲಕೋಟೆಗಳನ್ನು  ತೆರೆದು ನೋಡಲಿಲ್ಲ. ಸುಪ್ರೀಂಕೋರ್ಟ್‌ ನೇಮಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧ್ಯಕ್ಷ ಮತ್ತು ಉಪಾಧ್ಯಕ್ಷ  ಮಾತ್ರವೇ ಈ ಲಕೋಟೆ ತೆರೆದು ನೋಡಬಹುದು ಎಂದು ಅವರು ಹೇಳಿದರು. ಈ ಕುರಿತು ಕಾನೂನು ಪ್ರಕಾರ ತನಿಖೆ ಕೈಗೊಂಡು ನವೆಂಬರ್‌ ಅಂತ್ಯದೊಳಗೆ ಸದ್ಯದ ‘ಸ್ಥಿತಿಗತಿ’ ಪಟ್ಟಿ ನೀಡುವಂತೆಯೂ ಅವರು ‘ಎಸ್‌ಐಟಿ’ಗೆ ಸೂಚಿಸಿದರು.

‘ಭಾರತೀಯ ಖಾತೆದಾರರಿಗೆ ಸಂಬಂಧಿಸಿದ ಈ ಮಾಹಿತಿಯನ್ನು ಜಿನಿವಾದ  ಎಚ್‌ಎಸ್‌ಬಿಸಿ ಬ್ಯಾಂಕಿನಿಂದ ಕದಿಯಲಾಗಿದೆ. ನಂತರ ಈ ಮಾಹಿತಿ ಫ್ರಾನ್ಸ್‌ ತಲುಪಿತು. 2011ರಲ್ಲಿ ಭಾರತ ಸರ್ಕಾರ ಫ್ರಾನ್ಸ್‌ ಸರ್ಕಾರದಿಂದ ಈ ಮಾಹಿತಿ ಪಡೆದುಕೊಂಡಿದೆ ಎಂದು ರೊಹಟಗಿ ಅವರು ಪೀಠಕ್ಕೆ ಮಾಹಿತಿ ನೀಡಿದರು.

‘ಕೇಂದ್ರ ಸರ್ಕಾರ ಬುಧವಾರ ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮಾಹಿತಿಯಲ್ಲಿ, ಫ್ರಾನ್ಸ್‌ ಸರ್ಕಾರದ ಜತೆ ನಡೆಸಿದ ಪತ್ರವ್ಯವಹಾರ, 627 ಖಾತೆದಾರರ ಹೆಸರು ಮತ್ತು ಸದ್ಯದ ಅವರ ಸ್ಥಿತಿಗತಿ ಕುರಿತು ವಿವರಗಳಿವೆ ಎಂದು ರೊಹಟಗಿ ಅವರು  ಬಳಿಕ ಸುದ್ದಿಗಾರರಿಗೆ ತಿಳಿಸಿದರು. ಆದರೆ, ಇವರಲ್ಲಿ ಕೆಲವರು ಈಗಾಗಲೇ ತೆರಿಗೆ ಪಾವತಿಸಿದ್ದಾರೆ. ಇನ್ನು ಕೆಲವರ ವಿರುದ್ಧ ತನಿಖೆ ನಡೆಯುತ್ತಿದೆ ಎಂದು ಅವರು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

2015ರ ಮಾರ್ಚ್‌ 31 ಗಡುವು
ನಿವೃತ್ತ ನ್ಯಾಯಮೂರ್ತಿ ಎಂ.ಬಿ ಷಾ ನೇತೃತ್ವದ ‘ಎಸ್‌ಐಟಿ’ ತಂಡ ಈ ಕುರಿತು ತನಿಖೆ ನಡೆಸಲಿದೆ. ಆದಾಯ ತೆರಿಗೆ ಕಾಯ್ದೆಯಡಿ 2015ರ ಮಾರ್ಚ್‌ 31ರ ಒಳಗಾಗಿ ಈ ಖಾತೆದಾರರ ವಿರುದ್ಧ ತನಿಖೆ ಪೂರ್ಣಗೊಳಿಸಲು ಗಡುವು ನಿಗದಿಪಡಿಸಲಾಗಿದೆ ಎಂದು ರೊಹಟಗಿ ಅವರು ಹೇಳಿದರು.

ಕಪ್ಪು ಹಣ ಖಾತೆದಾರರ ಮಾಹಿತಿ ವಿನಿಮಯಕ್ಕೆ ಸಂಬಂಧಿಸಿದಂತೆ ಭಾರತ ಹಲವು ದೇಶಗಳ ಜತೆ ಒಪ್ಪಂದ ಮಾಡಿಕೊಂಡಿದೆ. ಆದರೆ, ಈಗ ಈ ಖಾತೆದಾರರ ಮಾಹಿತಿ ಬಹಿರಂಗಪ­ಡಿಸು­ವುದರಿಂದ ಭವಿಷ್ಯದ­ಲ್ಲಿ ಮಾಹಿತಿ ವಿನಿಮಯಕ್ಕೆ ಹಿನ್ನಡೆ ಆಗಬಹುದು. ಈ ಕುರಿತು ಕೇಂದ್ರ ಸರ್ಕಾರ ನವೆಂಬರ್‌ 30ರ ಒಳಗಾಗಿ ಸುಪ್ರೀಂಕೋರ್ಟ್‌ಗೆ ಮನವಿ ಸಲ್ಲಿಸಲಿದೆ. ನಂತರವಷ್ಟೇ ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ಮುಂದುವರಿಸಲಿದೆ ಎಂದು ಅವರು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.