ADVERTISEMENT

ಕರ್ನಾಟಕ ಮಾದರಿ ಅನುಕರಣೆಗೆ ಮುಂದಾದ ಕೇಂದ್ರ ಸರ್ಕಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 20:00 IST
Last Updated 20 ಸೆಪ್ಟೆಂಬರ್ 2017, 20:00 IST
ಕರ್ನಾಟಕ ಮಾದರಿ ಅನುಕರಣೆಗೆ ಮುಂದಾದ ಕೇಂದ್ರ ಸರ್ಕಾರ
ಕರ್ನಾಟಕ ಮಾದರಿ ಅನುಕರಣೆಗೆ ಮುಂದಾದ ಕೇಂದ್ರ ಸರ್ಕಾರ   

ನವದೆಹಲಿ: ಕರ್ನಾಟಕದ ಮಾದರಿಯಲ್ಲಿಯೇ ಕೃಷಿ ಉತ್ಪನ್ನ ಮಾರುಕಟ್ಟೆ ಸುಧಾರಣೆ ಮತ್ತು ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಸಬ್ಸಿಡಿ ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.

ದೇಶದಲ್ಲಿಯೇ ಮೊದಲ ಬಾರಿಗೆ ಏಕೀಕೃತ ಆನ್‌ಲೈನ್ ಕೃಷಿ ಉತ್ಪನ್ನ ಮಾರುಕಟ್ಟೆ ವ್ಯವಸ್ಥೆ ಮತ್ತು ಕೃಷಿ ಚಟುವಟಿಕೆಗಳಿಗೆ ಮಣ್ಣು ಪರೀಕ್ಷೆ ಫಲಿತಾಂಶದ ಆಧಾರದ ಮೇಲೆ ಸಬ್ಸಿಡಿ ನೀಡುವ ಯೋಜನೆ ಜಾರಿಗೆ ತಂದ ಹೆಗ್ಗಳಿಕೆ  ಕರ್ನಾಟಕದ್ದು. 

ಮಣ್ಣು ಪರೀಕ್ಷಾ ಕಾರ್ಡ್‌ ಹೊಂದಿದ ರೈತರಿಗೆ ಮಾತ್ರ ಕೃಷಿ ಯೋಜನೆಗಳ ಲಾಭ ಮತ್ತು ಸಬ್ಸಿಡಿ ನೀಡಲಾಗುವುದು ಎಂಬ ನಿಯಮವನ್ನು ರಾಷ್ಟ್ರವ್ಯಾಪಿ ಅನುಸರಿಸಲು ಕೇಂದ್ರ ಕೃಷಿ ಸಚಿವಾಲಯ ಮುಂದಾಗಿದೆ.

ADVERTISEMENT

ತೋಟಗಾರಿಕಾ ಸಮಗ್ರ ಅಭಿವೃದ್ಧಿ ಮಿಷನ್ ಅಡಿ ಕರ್ನಾಟಕ ಸರ್ಕಾರ ಮಣ್ಣು ಪರೀಕ್ಷಾ ಕಾರ್ಡ್‌ ಯೋಜನೆ ಜಾರಿಗೆ ತಂದಿದೆ. ಸಂಗ್ರಹಿತ
ಮಣ್ಣು ಮಾದರಿಯ ಪರೀಕ್ಷೆಯ ವಿಶ್ಲೇಷಿತ ವರದಿಗಳನ್ನು ಆಧರಿಸಿ ಮಣ್ಣು ಆರೋಗ್ಯ ಕಾರ್ಡ್‌ ತಯಾರಿಸಲಾಗುತ್ತದೆ.

ಆ ಫಲಿತಾಂಶವನ್ನು ತಂತ್ರಾಂಶಕ್ಕೆ ಲಿಂಕ್‌ ಮಾಡಲಾಗುತ್ತಿದೆ. ರೈತರು ಮಣ್ಣಿನ ಫಲವತ್ತತೆಗೆ ಅನುಗುಣವಾಗಿ ಬೆಳೆ ಬೆಳೆಯುತ್ತಾರೆ. ಅದರೊಂದಿಗೆ ವೈಜ್ಞಾನಿಕವಾಗಿ ಗೊಬ್ಬರ, ಪೋಷಕಾಂಶ ನಿರ್ವಹಣೆಯೊಂದಿಗೆ ಅಧಿಕ ಇಳುವರಿ ಪಡೆಯಲು ಕಾರ್ಡ್‌ ನೆರವಾಗು ತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

9 ಕೋಟಿ ಮಣ್ಣು ಪರೀಕ್ಷಾ ಕಾರ್ಡ್‌
ಕೇಂದ್ರ ಸರ್ಕಾರ ಒಟ್ಟು ₹ 568 ಕೋಟಿ ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿ­ಕೊಂಡಿದೆ. ಮಣ್ಣು ಪರೀಕ್ಷೆ ನಡೆಸುವ ಪ್ರಯೋಗಾಲಯಗಳನ್ನು ವಿವಿಧೆಡೆ ಸ್ಥಾಪನೆ ಮಾಡಲಾ­ಗುವುದು. ಇದಕ್ಕೆ ₹ 60 ಕೋಟಿ ವೆಚ್ಚವಾಗಲಿದೆ. ಮೂರು ವರ್ಷದೊಳಗೆ ಸುಮಾರು 14 ಕೋಟಿ ರೈತರಿಗೆ ಈ ಕಾರ್ಡ್‌ ವಿತರಿಸುವ ಗುರಿ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ಧಾರೆ.

ದೇಶದಾದ್ಯಂತ 9 ಕೋಟಿಗೂ ಹೆಚ್ಚು ರೈತರಿಗೆ ಮಣ್ಣು ಆರೋಗ್ಯ ಪರೀಕ್ಷ ಕಾರ್ಡ್‌ ವಿತರಿಸಲಾಗಿದೆ. ಕರ್ನಾಟಕ, ಛತ್ತೀಸಗಡ, ಮಧ್ಯ ಪ್ರದೇಶ, ಮಹಾರಾಷ್ಟ್ರ ಸೇರಿ 16 ರಾಜ್ಯಗಳು ಶೇಕಡಾ ನೂರರಷ್ಟು ಗುರಿ ಸಾಧಿಸಿವೆ.

ಜಮ್ಮು ಮತ್ತು ಕಾಶ್ಮೀರ, ಮಣಿಪುರ, ಅಸ್ಸಾಂ, ಬಿಹಾರ, ಪಂಜಾಬ್‌, ಉತ್ತರ ಪ್ರದೇಶ ಹಾಗೂ ಇನ್ನಿತರ ರಾಜ್ಯಗಳಲ್ಲಿ ಯೋಜನೆ ಮಂದಗತಿಯಲ್ಲಿ ಸಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.