ADVERTISEMENT

ಕಲ್ಲಿದ್ದಲು ಹಗರಣ: ಮಧು ಕೋಡಾ ಸೇರಿ ನಾಲ್ವರಿಗೆ 3 ವರ್ಷ ಜೈಲು

ಪಿಟಿಐ
Published 16 ಡಿಸೆಂಬರ್ 2017, 19:30 IST
Last Updated 16 ಡಿಸೆಂಬರ್ 2017, 19:30 IST
ಮಧು ಕೋಡಾ
ಮಧು ಕೋಡಾ   

ನವದೆಹಲಿ: ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಹಗರಣದಲ್ಲಿ ಜಾರ್ಖಾಂಡ್‌ನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಸೇರಿದಂತೆ ನಾಲ್ವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಶನಿವಾರ ಮೂರು ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಕಲ್ಲಿದ್ದಲು ಇಲಾಖೆಯ ಮಾಜಿ ಕಾರ್ಯದರ್ಶಿ ಹರೀಶ್ ಚಂದ್ರ ಗುಪ್ತಾ, ಜಾರ್ಖಂಡ್‌ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಎ.ಕೆ.ಬಸು ಮತ್ತು ಕೋಡಾ ಅವರ ಆಪ್ತ ವಿಜಯ್ ಜೋಶಿಗೂ 3 ವರ್ಷ ಜೈಲು ಶಿಕ್ಷೆ ನೀಡಿದೆ.

ಮಧು ಕೋಡಾಗೆ ₹25 ಲಕ್ಷ ಮತ್ತು ಗುಪ್ತಾಗೆ ₹1 ಲಕ್ಷ ದಂಡ ವಿಧಿಸಲಾಗಿದೆ. ಅಕ್ರಮವಾಗಿ ಕಲ್ಲಿದ್ದಲು ನಿಕ್ಷೇಪ ಗುತ್ತಿಗೆ ಪಡೆದ ವೀನಿ ಐರನ್ ಅಂಡ್ ಸ್ಟೀಲ್ ಉದ್ಯೋಗ್‌ ಲಿಮಿಟೆಡ್‌ಗೆ (ವಿಎಸ್‌ಯುಎಲ್‌) ₹50 ಲಕ್ಷ ದಂಡ ವಿಧಿಸಲಾಗಿದೆ.

ADVERTISEMENT

ನಾಲ್ವರಿಗೂ 60 ದಿನಗಳ ಶಾಸನಬದ್ಧ ಜಾಮೀನು (statutory bail) ನೀಡಲಾಗಿದ್ದು, ಈ ಅವಧಿಯಲ್ಲಿ ಅವರ ಬಂಧನಕ್ಕೆ ಅವಕಾಶವಿರುವುದಿಲ್ಲ. ಅಲ್ಲದೆ ನ್ಯಾಯಾಲಯದ ತೀರ್ಪು ಮತ್ತು ಶಿಕ್ಷೆಯ ವಿರುದ್ಧ ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶವಿರುತ್ತದೆ. ಮಧು ಕೋಡಾ, ಗುಪ್ತಾ ಹಾಗೂ ಇತರ ಇಬ್ಬರನ್ನು ದೋಷಿಗಳೆಂದು ನ್ಯಾಯಾಲಯವು ಬುಧವಾರ ತೀರ್ಪು ನೀಡಿತ್ತು.

ಕಲ್ಲಿದ್ದಲು ಮಸಿಯಿಂದ ಸೆರೆಮನೆಗೆ!
ಪಶ್ಚಿಮ ಬಂಗಾಳದ ವಿಎಸ್‌ಯುಎಲ್‌ಗೆ ಕಲ್ಲಿದ್ದಲು ನಿಕ್ಷೇಪ ಹಂಚಿಕೆ ಮಾಡದಂತೆ ಕಲ್ಲಿದ್ದಲು ಸಚಿವಾಲಯ ಮಾಡಿದ್ದ ಶಿಫಾರಸನ್ನು ಮರೆಮಾಚಿ, ಅದೇ ಸಂಸ್ಥೆಗೆ ನಿಕ್ಷೇಪ ಹಂಚಿಕೆ ಮಾಡುವಂತೆ ಕಲ್ಲಿದ್ದಲು ಕಾರ್ಯದರ್ಶಿ ಎಚ್‌.ಸಿ.ಗುಪ್ತಾ ನೇತೃತ್ವದ ಪರಿಶೀಲನಾ ಸಮಿತಿ ಶಿಫಾರಸು ಮಾಡಿತ್ತು. ಹೀಗೆ ಅಕ್ರಮವಾಗಿ ನಿಕ್ಷೇಪ ಹಂಚಿಕೆ ಮಾಡುವಲ್ಲಿ ಮಧು ಕೋಡಾ ಮತ್ತು ಸರ್ಕಾರದ ಅಧಿಕಾರಿಗಳು ಸಂಚು ರೂಪಿಸಿದ್ದರು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.