ADVERTISEMENT

ಕಸಾಯಿಖಾನೆ ಬಂದ್: ಕಾನ್ಪುರ ಮೃಗಾಲಯದಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಕಂಗಾಲು!

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2017, 10:47 IST
Last Updated 24 ಮಾರ್ಚ್ 2017, 10:47 IST
ಕಸಾಯಿಖಾನೆ ಬಂದ್: ಕಾನ್ಪುರ ಮೃಗಾಲಯದಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಕಂಗಾಲು!
ಕಸಾಯಿಖಾನೆ ಬಂದ್: ಕಾನ್ಪುರ ಮೃಗಾಲಯದಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಕಂಗಾಲು!   

ಲಖನೌ: ಉತ್ತರಪ್ರದೇಶದ ಕಾನ್ಪುರ್ ಮುನಿಸಿಪಲ್ ಕಾರ್ಪರೇಷನ್ (ಕೆಎಂಸಿ) ವ್ಯಾಪ್ತಿಯಲ್ಲಿರುವ ನಾಲ್ಕು ಕಸಾಯಿಖಾನೆಗಳನ್ನು ಬಂದ್ ಮಾಡಿರುವುದರಿಂದ ಕಾನ್ಪುರ ಮೃಗಾಲಯದಲ್ಲಿರುವ ಮಾಂಸಾಹಾರಿ ಪ್ರಾಣಿಗಳು ಉಪವಾಸ ಬಿದ್ದಿವೆ.

ರಾಜ್ಯದಲ್ಲಿ ಕಸಾಯಿಖಾನೆಗಳು ಬಂದ್ ಆಗಿರುವುದರಿಂದ ಕಾನ್ಪುರದಲ್ಲಿರುವ ಮೃಗಾಲಯಕ್ಕೆ ಸಾಕಷ್ಟು ಪ್ರಮಾಣದಲ್ಲಿ ಮಾಂಸ ಪೂರೈಕೆ ಆಗುತ್ತಿಲ್ಲ. ಹಾಗಾಗಿ ಬುಧವಾರದಿಂದ ಮೃಗಾಲಯದಲ್ಲಿರುವ ಪ್ರಾಣಿಗಳು ಅರೆಹೊಟ್ಟೆಯಲ್ಲಿರಬೇಕಾದ ಪರಿಸ್ಥಿತಿ ಬಂದಿದೆ.

ಉತ್ತರಪ್ರದೇಶದಲ್ಲಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನಕ್ಕೇರಿದ ಕೂಡಲೇ ಅಕ್ರಮ ಕಸಾಯಿಖಾನೆಗಳ ವಿರುದ್ಧ ಕ್ರಮಕೊಂಡಿದ್ದು, ಇದರಿಂದಾಗಿ ಹಲವು ಕಸಾಯಿಖಾನೆಗಳು ಮುಚ್ಚಲ್ಪಟ್ಟಿವೆ.

ADVERTISEMENT

ಕಾನ್ಪುರದ ಈ ಮೃಗಾಲಯದಲ್ಲಿ ಸರಿ ಸುಮಾರು 70 ಮಾಂಸಾಹಾರಿ ಪ್ರಾಣಿಗಳಿವೆ. ಇಲ್ಲಿರುವ ಮಾಂಸಹಾರಿ ಪ್ರಾಣಿಗಳಲ್ಲಿ ಗಂಡು ಪ್ರಾಣಿಗಳಿಗೆ ದಿನಕ್ಕೆ 12 ಕೆಜಿ ಮತ್ತು ಹೆಣ್ಣು ಪ್ರಾಣಿಗಳಿಗೆ 10ಕೆಜಿ ಮಾಂಸಾಹಾರದ ಅಗತ್ಯವಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಪ್ರತಿದಿನ ಈ ಮೃಗಾಲಯಕ್ಕೆ 150 ಕೆಜಿ ಕೋಣನ ಮಾಂಸ ಅಗತ್ಯವಿದೆ. ಈ ಮಾಂಸವನ್ನು ಗುತ್ತಿಗೆದಾರರು ಪೂರೈಕೆ  ಮಾಡುತ್ತಾರೆ. ಮಂಗಳವಾರ ಮಾಂಸ ಪೂರೈಕೆಯಾಗಿದ್ದು, ಇವತ್ತು ಮಾಂಸ ಸಿಗಲಿಲ್ಲ. ಗರ್ಭಿಣಿಯಾಗಿರುವ ಪ್ರಾಣಿಗಳಿಗೆ ಕೋಳಿ ಮಾಂಸ ನೀಡಲಾಗಿದ್ದರೂ, ಆ ಪ್ರಾಣಿಗಳು ಅದನ್ನು ಮೂಸಿ ನೋಡಲಿಲ್ಲ. ಇಲ್ಲಿರುವ ಹೆಚ್ಚಿನ ಪ್ರಾಣಿಗಳು ಬೆಳಗ್ಗಿನಿಂದ ಯಾವುದೇ ಆಹಾರವನ್ನು ಸೇವಿಸಿಲ್ಲ ಎಂದು ಮೃಗಾಲಯದ ಅಧಿಕಾರಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.