ADVERTISEMENT

ಕಾಂಗ್ರೆಸ್‌ನಿಂದ ರಾಜಕೀಯ ಲಾಭಕ್ಕೆ ಯತ್ನ

ಸೇನಾ ಮುಖ್ಯಸ್ಥರ ಹೇಳಿಕೆ ವಿವಾದ: ಬಿಜೆಪಿ ಆರೋಪ

ಪಿಟಿಐ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ನವದೆಹಲಿ: ಸೇನಾ ಮುಖ್ಯಸ್ಥ ಬಿಪಿನ್‌ ರಾವತ್‌ ಅವರ ಹೇಳಿಕೆಯನ್ನು ಕಾಂಗ್ರೆಸ್‌ ಪಕ್ಷ ‘ರಾಜಕೀಯ ಲಾಭ’ಕ್ಕಾಗಿ ಬಳಸಿಕೊಳ್ಳುತ್ತಿದೆ ಎಂದು ಬಿಜೆಪಿ ಆರೋಪಿಸಿದೆ.
‘ಸೇನಾ ಮುಖ್ಯಸ್ಥರ ಹೇಳಿಕೆಯನ್ನು ತನ್ನ ಲಾಭಕ್ಕೆ ಬಳಸಿಕೊಳ್ಳುತ್ತಿರುವುದು ಕಳವಳದ ವಿಚಾರ. ಕಾಂಗ್ರೆಸ್‌ ಪ್ರತ್ಯೇಕತಾವಾದಿಗಳ ರೀತಿಯಲ್ಲಿ ವರ್ತಿಸುತ್ತಿದೆ’ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಟೀಕಿಸಿದರು.
 
ಉಗ್ರರ ವಿರುದ್ಧದ ಕಾರ್ಯಾಚರಣೆಗೆ ಅಡ್ಡಿಪಡಿಸುವವರನ್ನು ‘ದೇಶದ್ರೋಹಿ’ಗಳು ಎಂದು ಪರಿಗಣಿಸಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ರಾವತ್‌ ಹೇಳಿದ್ದರು. ಕಾಶ್ಮೀರದಲ್ಲಿ ಮಂಗಳವಾರ ನಡೆದ ಎನ್‌ಕೌಂಟರ್‌ ವೇಳೆ ಸ್ಥಳೀಯ ಯುವಕರು ಯೋಧರತ್ತ ಕಲ್ಲೆಸೆದಿದ್ದರು. ಈ ಘಟನೆಯ ಬೆನ್ನಲ್ಲೇ ಸೇನಾ ಮುಖ್ಯಸ್ಥರು ಹೇಳಿಕೆ ನೀಡಿದ್ದರು. 
 
ಈ ಹೇಳಿಕೆಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರಾವತ್‌ ಹೇಳಿಕೆಯನ್ನು ಸಮರ್ಥಿಸಿಕೊಂಡ ಸಿಂಗ್‌, ‘ಸೇನಾ ಮುಖ್ಯಸ್ಥರ ಹೇಳಿಕೆಯನ್ನು ಎಚ್ಚರಿಕೆಯ ರೀತಿಯಲ್ಲಿ ಪರಿಗಣಿಸಬಾರದು. ಅವರು ತಮ್ಮ ಕಳವಳ ವ್ಯಕ್ತಪಡಿಸಿದ್ದಾರೆ. ಉಗ್ರರು ಮತ್ತು ಭದ್ರತಾ ಪಡೆಗಳ ಮಧ್ಯೆ ಗುಂಡಿನ ಚಕಮಕಿ ನಡೆಯುವ ಸ್ಥಳಕ್ಕೆ ನಾಗರಿಕರು ಬಂದರೆ ಅವರ  ಪ್ರಾಣಕ್ಕೆ ಅಪಾಯವಿದೆ ಎಂದು ಎಚ್ಚರಿಸಿದ್ದಾರಷ್ಟೆ’ ಎಂದಿದ್ದಾರೆ. 
 
ಪಕ್ಷದ ಮುಖಂಡರು ನೀಡಿರುವ ಹೇಳಿಕೆಯ ಬಗ್ಗೆ ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದು ಸಿಂಗ್‌ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರನ್ನು ಒತ್ತಾಯಿಸಿದ್ದಾರೆ. 
 
ಕಾಂಗ್ರೆಸ್‌ ಮುಖಂಡರಾದ ಗುಲಾಂ ನಬಿ ಆಜಾದ್‌ ಮತ್ತು ಸಂದೀಪ್‌ ದೀಕ್ಷಿತ್‌ ಅವರು ರಾವತ್‌ ಹೇಳಿಕೆಯನ್ನು ಟೀಕಿಸಿದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.