ADVERTISEMENT

ಕಾಂಗ್ರೆಸ್‌ ಶಾಸಕರ ನಿಷ್ಠೆ ಪ್ರಮಾಣಪತ್ರ: ಲೇವಡಿ

​ಪ್ರಜಾವಾಣಿ ವಾರ್ತೆ
Published 25 ಮೇ 2016, 19:32 IST
Last Updated 25 ಮೇ 2016, 19:32 IST

ನವದೆಹಲಿ: ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ಉಪಾಧ್ಯಕ್ಷ ರಾಹುಲ್‌ ಗಾಂಧಿ ಅವರಿಗೆ ‘ಸಂಪೂರ್ಣ ನಿಷ್ಠೆಯಿಂದ ಇರುತ್ತೇವೆ’ ಎಂದು ಪಶ್ಚಿಮ ಬಂಗಾಳ ವಿಧಾನಸಭೆಗೆ ಆಯ್ಕೆಯಾಗಿರುವ ಶಾಸಕರಿಂದ ಪ್ರಮಾಣಪತ್ರ ಬರೆಸಿಕೊಂಡಿರುವುದನ್ನು ಕಾಂಗ್ರೆಸ್‌ ಸಮರ್ಥಿಸಿಕೊಂಡಿದೆ. ನಿಷ್ಠೆಯ ಪ್ರಮಾಣಪತ್ರ ಬರೆಸಿಕೊಂಡಿರುವುದು ಹಾಸ್ಯಾಸ್ಪದ ಎಂದು ಕಾಂಗ್ರೆಸ್‌ ವಿರೋಧಿ ಪಕ್ಷಗಳು ಹೇಳಿವೆ.

ಆದರೆ ‘ಈ ಪ್ರಮಾಣಪತ್ರಗಳನ್ನು ಪಕ್ಷದ ಶಾಸಕರು ಸ್ವಯಂ ಪ್ರೇರಣೆಯಿಂದ ಬರೆದುಕೊಟ್ಟಿದ್ದಾರೆ’ ಎಂದು ಕಾಂಗ್ರೆಸ್‌ನ ಮುಖ್ಯ ವಕ್ತಾರ ರಣದೀಪ್‌ ಸುರ್ಜೆವಾಲಾ ಹೇಳಿದ್ದಾರೆ.

ಕಾಂಗ್ರೆಸ್‌ ಶಾಸಕರನ್ನು ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ ಖರೀದಿಸಲು ಮುಂದಾಗಿರುವ ಕಾರಣ ಶಾಸಕರು ಇಂತಹ ಕ್ರಮ ಕೈಗೊಂಡಿದ್ದಾರೆ ಎಂದು ಸುರ್ಜೆವಾಲಾ ಸಮರ್ಥಿಸಿಕೊಂಡಿದ್ದಾರೆ. ₹ 100 ಮುಖ ಬೆಲೆಯ ಮುದ್ರಾಂಕ  ಪತ್ರದಲ್ಲಿ ಶಾಸಕರು ‘ಪಕ್ಷ ವಿರೋಧಿ ಚಟುವಟಿಕೆಗಳಲ್ಲಿ ತೊಡಗುವುದಿಲ್ಲ’ ಎಂದೂ ಬರೆದುಕೊಟ್ಟಿದ್ದಾರೆ.

‘ನಿಷ್ಠೆ ಪ್ರದರ್ಶನದ’ದ ಪ್ರಮಾಣ ಪತ್ರ ರಾಜಕೀಯ ವಲಯದಲ್ಲಿ ಲೇವಡಿಗೆ ಕಾರಣವಾದ ನಂತರ ಕಾಂಗ್ರೆಸ್‌ ಮುಖಂಡರು ಮುಜುಗರಕ್ಕೆ ಒಳ
ಗಾದರು. ಹಾಗಾಗಿ, ಕಾಂಗ್ರೆಸ್‌ ಹೈಕಮಾಂಡ್‌ನಿಂದಾಗಲಿ, ಪಕ್ಷದ ಪಶ್ಚಿಮ ಬಂಗಾಳ ಘಟಕದಿಂದಾಗಲಿ ಪ್ರಮಾಣ ಪತ್ರ ನೀಡುವಂತೆ ಸೂಚನೆ ನೀಡಿರಲಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಜತೆಗೆ, ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡದಲ್ಲಿ ಇತ್ತೀಚೆಗೆ ನಡೆದ ಬೆಳವಣಿಗೆಗಳನ್ನು ಅವರು ಉಲ್ಲೇಖಿಸಿದ್ದಾರೆ. ಇಲ್ಲಿ ಅಧಿಕಾರದಲ್ಲಿದ್ದ ಕಾಂಗ್ರೆಸ್‌ ಸರ್ಕಾರಗಳನ್ನು ಬುಡಮೇಲು ಗೊಳಿಸಲು ಶಾಸಕರಿಗೆ ಆಮಿಷ ಒಡ್ಡಿ ಬಿಜೆಪಿ ತನ್ನತ್ತ ಸೆಳೆದುಕೊಂಡಿರುವುದನ್ನು ಅವರು ಪ್ರಸ್ತಾಪಿಸಿದ್ದಾರೆ.

‘ಇಂತಹ ಜೀತ ಪದ್ಧತಿ ಕಾಂಗ್ರೆಸ್‌ನಲ್ಲಿ ಮಾತ್ರ ಇರಲು ಸಾಧ್ಯ’ ಎಂದು ಪ್ರಮಾಣಪತ್ರ ಬರೆಸಿಕೊಂಡಿರುವುದನ್ನು ಬಿಜೆಪಿ ಗೇಲಿ ಮಾಡಿದೆ. ಆದರೆ ಪಶ್ಚಿಮ ಬಂಗಾಳ ಕಾಂಗ್ರೆಸ್‌ ಅಧ್ಯಕ್ಷ ಅಧಿರ್‌ ರಂಜನ್‌ ಚೌಧರಿ ಪಕ್ಷದ ಶಾಸಕರ ಕ್ರಮವನ್ನು ಸಮರ್ಥನೆ ಮಾಡಿಕೊಂಡಿದ್ದಾರೆ.

ಸೋನಿಯಾ ಮತ್ತು ರಾಹುಲ್‌  ಪಕ್ಷದ ಪ್ರಶ್ನಾತೀತ ನಾಯಕರು. ಅದನ್ನು ಶಾಸಕರು ಬರೆದು ಕೊಟ್ಟರೆ ಅದರಲ್ಲಿ ತಪ್ಪೇನು ಎಂದು ಅವರು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT