ADVERTISEMENT

ಕಾಂಗ್ರೆಸ್‌ ಜತೆ ಮೈತ್ರಿ ಮುಗಿದ ಕಥೆ: ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಕಾಂಗ್ರೆಸ್‌ ಜತೆ ಮೈತ್ರಿ ಮುಗಿದ ಕಥೆ: ಎಸ್‌ಪಿ
ಕಾಂಗ್ರೆಸ್‌ ಜತೆ ಮೈತ್ರಿ ಮುಗಿದ ಕಥೆ: ಎಸ್‌ಪಿ   

ಲಖನೌ (ಪಿಟಿಐ): ‘ಉತ್ತರ  ಪ್ರದೇಶ ವಿಧಾನಸಭಾ ಚುನಾವಣೆ  ಎದುರಿಸಲು ಕಾಂಗ್ರೆಸ್‌ ಜತೆ ಮೈತ್ರಿ ಮಾಡಿಕೊಳ್ಳುವ ವಿಚಾರ ಈಗ ಬಹುತೇಕ ಮುಗಿದ ಕಥೆ’ ಎಂದು ಸಮಾಜವಾದಿ ಪಕ್ಷದ ಹಿರಿಯ ಮುಖಂಡ ನರೇಶ್ ಅಗರ್ವಾಲ್ ಹೇಳಿದ್ದಾರೆ.

‘ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್‌ 50 ಕ್ಷೇತ್ರಗಳಲ್ಲಷ್ಟೇ ಉತ್ತಮ ಸ್ಪರ್ಧೆ ನೀಡಿದೆ. ಅವುಗಳಲ್ಲಿ ಗೆದ್ದದ್ದು 28 ಸ್ಥಾನಗಳನ್ನು ಮಾತ್ರ. ಪರಿಸ್ಥಿತಿ ಹೀಗಿದ್ದೂ ಕಾಂಗ್ರೆಸ್‌ಗೆ 99 ಸ್ಥಾನಗಳನ್ನು ಬಿಟ್ಟುಕೊಡಲು ಪಕ್ಷದ ಮುಖ್ಯಸ್ಥರು ಒಪ್ಪಿದ್ದಾರೆ.  ಆದರೆ ಕಾಂಗ್ರೆಸ್‌ 120 ಸ್ಥಾನಗಳಿಗಾಗಿ ಪಟ್ಟು ಹಿಡಿದು ಕೂತಿದೆ’ ಎಂದು ಅವರು ಹೇಳಿದ್ದಾರೆ.
‘ನಮ್ಮ ಪಕ್ಷ 300ಕ್ಕಿಂತಲೂ ಕಡಿಮೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಸಾಧ್ಯವಿಲ್ಲ. ಕಾಂಗ್ರೆಸ್‌ಗೆ ಅದರ ಅರ್ಹತೆಗಿಂತಲೂ ಹೆಚ್ಚು ಸ್ಥಾನಗಳನ್ನು ನೀಡಲಾಗಿದೆ ಎಂಬುದು

ನಮ್ಮ ಮುಖ್ಯಸ್ಥರ ಪ್ರತಿಪಾದನೆ. ಕಾಂಗ್ರೆಸ್‌ ಇದಕ್ಕೆ ಒಪ್ಪುತ್ತಿಲ್ಲವಾದ್ದರಿಂದ ಮೈತ್ರಿ ಬಹುತೇಕ ಮುಗಿದಂತೆ’ ಎಂದು ಅವರು ಹೇಳಿದ್ದಾರೆ.
‘ಒಂದಿನಿತು ಹೊಂದಿಕೊಳ್ಳಲೂ ಎಸ್‌ಪಿ ತಯಾರಿಲ್ಲ. ಮೈತ್ರಿ ಮಾತುಕತೆ ಪೂರ್ಣವಾಗುವ ಮುನ್ನವೇ ಎಸ್‌ಪಿ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೂ ಮೊದಲ ಎರಡು ಹಂತದ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ. ಮೈತ್ರಿ ನಡೆಯದಿದ್ದರೆ, ಅದೇ ಪಟ್ಟಿ ಅಂತಿಮವಾಗುತ್ತದೆ’ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

‘ಶನಿವಾರ ಸಂಜೆ ನಡೆದ ಪಕ್ಷದ ಕೇಂದ್ರೀಯ ಚುನಾವಣಾ ಸಮಿತಿಗೆ  ಈ ಬಗ್ಗೆ ಮಾಹಿತಿ ನೀಡಿಲಾಯಿತು. ಎಸ್‌ಪಿ ಎದುರು ಬೇಡುವ ಅವಶ್ಯಕತೆ ಇಲ್ಲ.  ಪಕ್ಷದ ಘನತೆ ಮುಖ್ಯ ಎಂದು ಪಕ್ಷದ ಮುಖ್ಯಸ್ಥರು ಸೂಚನೆ ನೀಡಿದ್ದಾರೆ’ ಎಂದು ಕಾಂಗ್ರೆಸ್ ಮೂಲಗಳು ಹೇಳಿವೆ. ಆದರೆ ಮೈತ್ರಿ ಆಗುವ ಸಾಧ್ಯತೆ ಇನ್ನೂ ಇದೆ ಎಂಬ ಭರವಸೆ ನಮಗಿದೆ ಎಂದು ಮೂಲಗಳು ಹೇಳಿವೆ.

ಪಟ್ಟಿಯಲ್ಲಿ ಅಡ್ವಾಣಿ, ವರುಣ್ ಇಲ್ಲ: ಉತ್ತರಪ್ರದೇಶದಲ್ಲಿ ಚುನಾವಣಾ ಪ್ರಚಾರಕ್ಕಾಗಿ ಬಿಜೆಪಿ ಈಗಾಗಲೇ 40 ಪ್ರಮುಖ ನಾಯಕರ ಪಟ್ಟಿಯನ್ನು ಸಿದ್ಧಪಡಿಸಿದೆ. ಅದರಲ್ಲಿ ಹಿರಿಯ ನಾಯಕ ಅಡ್ವಾಣಿ, ರಾಜ್ಯದ ಸುಲ್ತಾನಪುರ ಲೋಕ ಸಭಾ ಕ್ಷೇತ್ರದ ಸಂಸದ ವರುಣ್ ಗಾಂಧಿ ಅವರನ್ನು ಪಟ್ಟಿಯಿಂದ ಹೊರಗಿರಿಸಿದೆ.

ಮುಲಾಯಂ ಆಪ್ತ ಬಿಜೆಪಿಗೆ
ಮುಲಾಯಂ ಸಿಂಗ್ ಯಾದವ್ ಆಪ್ತ ಅಂಬಿಕಾ ಚೌಧರಿ ಅವರು ಸಮಾಜವಾದಿ ಪಕ್ಷದ  (ಎಸ್‌ಪಿ) ತಮ್ಮ ಎಲ್ಲಾ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದಾರೆ. ಜತೆಗೆ ಮಾಯಾವತಿ ಸಮ್ಮುಖದಲ್ಲಿ ಶನಿವಾರ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಸೇರಿದ್ದಾರೆ.

ಅಖಿಲೇಶ್ ಅವರು ತಮ್ಮ ತಂದೆ ಮತ್ತು ಮುಲಾಯಂ ಅವರನ್ನು ನಡೆಸಿಕೊಂಡ ರೀತಿ ಸರಿ ಇಲ್ಲ. ಇದರಿಂದ ನೊಂದು ಪಕ್ಷದ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ನೀಡಿದ್ದೇನೆ. ಕೋಮುವಾದಿ ಬಿಜೆಪಿಗೆ ಎಸ್‌ಪಿಯಲ್ಲಿನ ಒಡಕಿನಿಂದ ಲಾಭವಾಗುತ್ತದೆ. ಇದನ್ನು ತಪ್ಪಿಸುವ ಸಲುವಾಗಿ ಬಿಎಸ್‌ಪಿ ಸೇರಿದ್ದೇನೆ ಎಂದು ಹೇಳಿದ್ದಾರೆ.

ಅಖಿಲೇಶ್‌ ಯಾದವ್ ಸಿದ್ಧಪಡಿಸಿರುವ ಅಭ್ಯರ್ಥಿಗಳ ಪಟ್ಟಿಯಲ್ಲಿ ಅಂಬಿಕಾ ಅವರಿಗೆ ಸ್ಥಾನ ದೊರೆತಿಲ್ಲ. ಹೀಗಾಗಿ ಅವರು ಪಕ್ಷ ತೊರೆದಿರುವ ಸಾಧ್ಯತೆ ಇದೆ ಎಂದು ಎಸ್‌ಪಿ ಮೂಲಗಳು ತಿಳಿಸಿವೆ. ಅಂಬಿಕಾ ಚೌಧರಿ ಅವರು 2012ರ ಚುನಾವಣೆಯಲ್ಲಿ ಬಲಿಯಾ ಕ್ಷೇತ್ರದಿಂದ ಸ್ಪರ್ಧಿಸಿ, ಸೋತಿದ್ದರು. ಬಿಎಸ್‌ಪಿ ಈಗ ಆ ಕ್ಷೇತ್ರದಿಂದಲೇ ಅವರಿಗೆ ಟಿಕೆಟ್ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.