ADVERTISEMENT

ಕಾನೂನು ಹೋರಾಟ ಗೆದ್ದ ಬೆಂಗಳೂರು ಕುಟುಂಬ

ಪಿಟಿಐ
Published 25 ಮೇ 2017, 19:30 IST
Last Updated 25 ಮೇ 2017, 19:30 IST

ಲಂಡನ್ : ಇಲ್ಲಿನ ಹೋಟೆಲ್‌ನಲ್ಲಿ ಸ್ನಾನಕ್ಕೆ ಇಳಿದಾಗ, ಶವರ್‌ನಿಂದ ಕುದಿಯುವ ನೀರು ಸುರಿದ ಪರಿಣಾಮವಾಗಿ ಮೃತಪಟ್ಟಿದ್ದ ಬೆಂಗಳೂರಿನ ಕಲ್ಯಾಣಿ ಉತ್ತಮನ್ ಅವರ ಕುಟುಂಬಕ್ಕೆ, ಐದು ವರ್ಷಗಳ ಸುದೀರ್ಘ  ಕಾನೂನು ಹೋರಾಟದ ಬಳಿಕ ನ್ಯಾಯ ಸಿಕ್ಕಿದೆ.

2012ರ ಆಗಸ್ಟ್‌ನಲ್ಲಿ ರಜೆಗೆಂದು ಇಲ್ಲಿಗೆ ಬಂದಿದ್ದ ಕಲ್ಯಾಣಿ, ಸ್ಕಾಟ್ಲೆಂಡ್‌ನ ಪ್ರೀಮಿಯರ್‌ ಇನ್‌ ಹೋಟೆಲಿನಲ್ಲಿ ತಂಗಿದ್ದರು. ಆಗ ನಡೆದ ಈ ಅವಘಡದಲ್ಲಿ ಅವರ ಚರ್ಮ ತೀವ್ರವಾಗಿ ಸುಟ್ಟಿತ್ತು. ವಾರದ ನಂತರ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದಿದ್ದರು.

ಹೋಟೆಲ್ ಮಾಲೀಕರು  ಈ ಸಂಬಂಧ ನ್ಯಾಯಾಲಯದ ಮುಂದೆ ಕ್ಷಮೆ ಯಾಚಿಸಿದ್ದಾರೆ. ಆಸ್ಪತ್ರೆಯ ಶುಲ್ಕ ಮರು ಪಾವತಿಸುವಂತೆ ಹಾಗೂ ಕುಟುಂಬಕ್ಕೆ ಪರಿಹಾರ ನೀಡುವಂತೆ ಹೋಟೆಲ್‌ಗೆ ಸೂಚಿಸಲಾಗಿದೆ. ಆದರೆ ಪರಿಹಾರದ ಮೊತ್ತ ಬಹಿರಂಗವಾಗಿಲ್ಲ.

ADVERTISEMENT

‘ಹೋಟೆಲ್‌ನವರು ನೀರಿನ ಉಷ್ಣಾಂಶ ನಿಯಂತ್ರಣ ಸಾಧನವನ್ನು ಅಳವಡಿಸದೆ ಕರ್ತವ್ಯದಲ್ಲಿ ವಿಫಲರಾದ ಕಾರಣ ಈ ಘಟನೆ ನಡೆದಿದೆ’ ಎಂದು ಕಲ್ಯಾಣಿ ಅವರ ಕುಟುಂಬದ ಪರ ವಕೀಲರು ವಾದಿಸಿದ್ದರು. ಈ ವಾದವನ್ನು ಒಪ್ಪಿಕೊಂಡಿರುವ ಹೋಟೆಲ್, ಪರಿಹಾರದ ಒಪ್ಪಂದಕ್ಕೆ ಸಮ್ಮತಿ ಸೂಚಿಸಿದೆ.

‘ಈಗಲೂ ಸಿಟ್ಟಿದೆ...’
‘ಹೋಟೆಲ್‌ನವರು ಕ್ಷಮೆ ಯಾಚಿಸಿರುವುದರಿಂದ ಅವರು ತಮ್ಮ ತಪ್ಪನ್ನು ಒಪ್ಪಿಕೊಂಡಂತಾಗಿದೆ. ಆದರೂ ಹೋಟೆಲ್‌ನವರ ನಡವಳಿಕೆ ಬಗ್ಗೆ ನನಗೆ ಈಗಲೂ ಸಿಟ್ಟಿದೆ. ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುವವರೆಗೂ ಅವರು ತಮ್ಮದು ತಪ್ಪು ಎಂದು ಒಪ್ಪಿಕೊಳ್ಳಲಿಲ್ಲ. ಅವರ್‍ಯಾರೂ ನಮ್ಮೊಂದಿಗೆ ಮಾತನಾಡಲಿಲ್ಲ’ ಎಂದು ಬೆಂಗಳೂರಿನಿಂದ ಬಿಬಿಸಿ ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿರುವ ಕಲ್ಯಾಣಿ ಅವರ ಮಗ ಸುಂದರ್ ಉತ್ತಮನ್ ಹೇಳಿದ್ದಾರೆ. ‘ಭವಿಷ್ಯದಲ್ಲಿ ಇಂಥ ಘಟನೆಗಳು ಮರುಕಳಿಸಬಾರದು ಎಂಬುದು ನನ್ನ ಕಾಳಜಿ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.