ADVERTISEMENT

ಕಾಪ್ಟರ್ ಹಗರಣ: ವಿದೇಶದಿಂದ ಮಾಹಿತಿ ಕೋರಲಿರುವ ಇ.ಡಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2014, 9:42 IST
Last Updated 6 ಜುಲೈ 2014, 9:42 IST

ನವದೆಹಲಿ (ಪಿಟಿಐ): 3600 ಕೋಟಿ ರೂಪಾಯಿ ಮೊತ್ತದ ವಿವಿಐಪಿ ಹೆಲಿಕಾಪ್ಟರ್‌ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಹಣ ಲೇವಾದೇವಿ  ಆರೋಪಗಳ ಬಗ್ಗೆ ಮತ್ತಷ್ಟು ವಿಸ್ತೃತ ತನಿಖೆ ನಡೆಸಲು ಜಾರಿ ನಿರ್ದೇಶನಾಲಯ(ಇ.ಡಿ) ಮುಂದಾಗಿದೆ.

ಒಪ್ಪಂದದ ವೇಳೆ ಕಿಕ್‌ಬ್ಯಾಕ್‌ ಪಡೆದಿರುವ ಆರೋಪಗಳ ಸತ್ಯಾಸತ್ಯತೆ ಪರಿಶೀಲನೆಗಾಗಿ ಬ್ಯಾಂಕ್ ಖಾತೆ ಹಾಗೂ ವ್ಯವಹಾರಗಳ ಬಗ್ಗೆ ಮಾಹಿತಿ ನೀಡುವಂತೆ  ಕೋರಿ ಸುಮಾರು ಆರು ರಾಷ್ಟ್ರಗಳಿಗೆ ಜಾರಿ ನಿರ್ದೇಶನಾಲಯ  ನ್ಯಾಯಾಂಗೀಯ ಮನವಿ ಪತ್ರಗಳನ್ನು ಕಳುಹಿಸುವ ಸಾಧ್ಯತೆಗಳಿವೆ.

ಹಗರಣ ಸಂಬಂಧ ಎರಡು ದಿನಗಳ ಹಿಂದಷ್ಟೇ ಹಣ ಲೇವಾದೇವಿ ತಡೆ ಕಾಯ್ದೆ (ಪಿಎಂಎಲ್ಎ) ಅಡಿಯಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿರುವ ತನಿಖಾ ಸಂಸ್ಥೆಯು, ಭಾರತ ಹಾಗೂ ವಿದೇಶಿ ಕಂಪೆನಿಗಳ ನಡುವೆ ಅಕ್ರಮ ಹಣವನ್ನು ವರ್ಗಾಯಿಸಲು 170 ‘ನಕಲಿ ಕಂಪೆನಿಗಳನ್ನು’ ಹುಟ್ಟುಹಾಕಲಾಗಿತ್ತು ಎಂಬುದನ್ನು ಪತ್ತೆ ಮಾಡಿದೆ.

ADVERTISEMENT

ಇಟಲಿ, ಮಾರಿಷಸ್‌, ಇಂಗ್ಲೆಂಡ್‌, ಟ್ಯುನಿಷಿಯಾ, ದುಬೈ ಹಾಗೂ ಯುರೋಪಿನ ಇತರ ರಾಷ್ಟ್ರಗಳಿಗೆ ತನಿಖಾ ಸಂಸ್ಥೆಯು ಮನವಿ ಪತ್ರಗಳನ್ನು  ಕಳುಹಿಸಲಿದೆ ಎಂದು ಮೂಲಗಳು ಹೇಳಿವೆ.

ಕ್ರಿಮಿನಲ್‌ ವಿಷಯಗಳಿಗೆ ಸಂಬಂಧಿಸಿದಂತೆ ಭಾರತ ಹಾಗೂ ಮೇಲ್ಕಂಡ ರಾಷ್ಟ್ರಗಳ ನಡುವೆ ಪ್ರಸಕ್ತ ಇರುವ ನಿಯಮಾವಳಿಗಳು ಹಾಗೂ ತೆರಿಗೆ ಮಾಹಿತಿ ವಿನಿಮಯ ಒಪ್ಪಂದದ ಅಡಿಯಲ್ಲಿಯೇ ಇ.ಡಿ ಈ ಮನವಿಗಳನ್ನು ಮಾಡಲಿದೆ ಎಂದೂ ಮೂಲಗಳು ತಿಳಿಸಿವೆ.

ಅತಿಗಣ್ಯರ ಬಳಕೆಗಾಗಿ ಖರೀದಿಸಿಲು ಉದ್ದೇಶಿಸಿದ್ದ ಹೆಲಿಕಾಪ್ಟರ್ ಖರೀದಿಯಲ್ಲಿ ಲಂಚದ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಕಳೆದ ವರ್ಷ ಸರ್ಕಾರ ಒಪ್ಪಂದವನ್ನು ರದ್ದುಗೊಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.