ADVERTISEMENT

ಕಾಶ್ಮೀರಕ್ಕೆ ಸೆ. 4ರಂದು ಸರ್ವ ಪಕ್ಷ ನಿಯೋಗ

ಪಿಟಿಐ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST

ನವದೆಹಲಿ: ಗಲಭೆಪೀಡಿತ ಕಾಶ್ಮೀರದಲ್ಲಿ ಶಾಂತಿ ಸ್ಥಾಪನೆಯ ಉದ್ದೇಶದಿಂದ ಅಲ್ಲಿಗೆ ಸೆಪ್ಟೆಂಬರ್ ನಾಲ್ಕರಂದು ಭೇಟಿ ನೀಡಲಿರುವ ಗೃಹ ಸಚಿವ ರಾಜನಾಥ್ ಸಿಂಗ್ ನೇತೃತ್ವದ ಸರ್ವ ಪಕ್ಷ ನಿಯೋಗವು ಸಮಾಜದ ವಿವಿಧ ವರ್ಗಗಳ ಜತೆ ಸಂವಾದ ನಡೆಸಲಿದೆ.

ಹಿಜ್ಬುಲ್ ಮುಜಾಹಿದೀನ್‌ ಕಮಾಂಡರ್ ಬುರ್ಹಾನ್‌ ವಾನಿ ಹತ್ಯೆಯ ನಂತರ ನಡೆಯುತ್ತಿರುವ ಹಿಂಸಾಚಾರದಿಂದ ಜಮ್ಮು ಮತ್ತು ಕಾಶ್ಮೀರ ತತ್ತರಿಸಿದೆ.  ಇಲ್ಲಿನ ಸಂಘ ಸಂಸ್ಥೆಗಳು, ನಾಗರಿಕರ ಜತೆ ಗೃಹ ಸಚಿವರ ನೇತೃತ್ವದ ನಿಯೋಗವು ಮಾತುಕತೆ ನಡೆಸಲಿದೆ.

ರಾಜನಾಥ್ ಸಿಂಗ್ ಅವರು ಭಾನುವಾರ ಬಿಜೆಪಿ ಅಧ್ಯಕ್ಷ ಅಮಿತ್ ಷಾ, ಹಣಕಾಸು ಸಚಿವ ಅರುಣ್ ಜೇಟ್ಲಿ, ಪ್ರಧಾನಿ ಕಾರ್ಯಾಲಯದ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಜತೆ ಸಭೆ ನಡೆಸಿ ಕಾಶ್ಮೀರ ಪರಿಸ್ಥಿತಿಯ ಪರಾಮರ್ಶೆ ನಡೆಸಿದ್ದಾರೆ ಹಾಗೂ ಸರ್ವ ಪಕ್ಷಗಳ ನಿಯೋಗ ಭೇಟಿ ನೀಡುವ ದಿನಾಂಕ ನಿಗದಿಪಡಿಸಿದ್ದಾರೆ. ಕಾಶ್ಮೀರ ಪ್ರವಾಸದ ಸಂದರ್ಭದಲ್ಲಿ ಯಾವ ಯಾವ ಸಂಘಟನೆಗಳ ಪ್ರತಿನಿಧಿಗಳು, ವ್ಯಕ್ತಿಗಳ ಜತೆ  ಮಾತುಕತೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ನಡೆಸಲಾಗಿದೆ ಎಂದು ಗೃಹ ಸಚಿವಾಲಯದ ಮೂಲಗಳು ತಿಳಿಸಿವೆ.

ನಿಯೋಗದ ಸದಸ್ಯರ ಹೆಸರುಗಳನ್ನು ತಿಳಿಸುವಂತೆ ಸರ್ಕಾರ ಎಲ್ಲಾ ರಾಜಕೀಯ ಪಕ್ಷಗಳ ಅಧ್ಯಕ್ಷರಿಗೆ ಸೂಚಿಸಿದೆ.
‘ಮನದ ಮಾತು’ ತಿಂಗಳ ಬಾನುಲಿ ಕಾರ್ಯಕ್ರಮದಲ್ಲಿ ಪ್ರಧಾನಿ ಅವರು ಕಾಶ್ಮೀರ ಸಮಸ್ಯೆಯ ಬಗ್ಗೆ ಸುದೀರ್ಘವಾಗಿ  ಮಾತನಾಡಿದ್ದಾರೆ.
ಒಗ್ಗಟ್ಟು ಮತ್ತು ಪ್ರೀತಿಯ ಮಂತ್ರ  ಮಾತ್ರ ಕಾಶ್ಮೀರ ಸಮಸ್ಯೆಗಳನ್ನು ಬಗೆಹರಿಸುತ್ತದೆ ಎಂದು ಹೇಳಿದ್ದಾರೆ.

ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಸಹ ಶನಿವಾರ ಪ್ರಧಾನಿ ಅವರನ್ನು ಭೇಟಿ ಮಾಡಿ ಕಾಶ್ಮೀರ ಸಮಸ್ಯೆ ಬಗೆಹರಿಸಲು ಮಧ್ಯ ಪ್ರವೇಶ ಮಾಡಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.