ADVERTISEMENT

ಕುತೂಹಲದ ಘಟ್ಟಕ್ಕೆ ರಾಜ್ಯಸಭೆ ಚುನಾವಣೆ

ಕಾಂಗ್ರೆಸ್‌ ಶಾಸಕನ ಸಹೋದರ ಜೆಡಿಎಸ್‌ ಅಭ್ಯರ್ಥಿ: ಸಿ.ಎಂ ಅತೃಪ್ತಿ

​ಪ್ರಜಾವಾಣಿ ವಾರ್ತೆ
Published 31 ಮೇ 2016, 0:29 IST
Last Updated 31 ಮೇ 2016, 0:29 IST
ಸೋಮವಾರ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಾದ ಜೈರಾಂ ರಮೇಶ್‌, ಆಸ್ಕರ್‌ ಫರ್ನಾಂಡಿಸ್‌, ಕೆ.ಸಿ.ರಾಮಮೂರ್ತಿ ಅವರಿಗೆ ಕೆಪಿಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಸ್ತಲಾಘವ ಮಾಡಿದರು. ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅವರೂ ಇದ್ದಾರೆ –ಪ್ರಜಾವಾಣಿ ಚಿತ್ರ
ಸೋಮವಾರ ನಾಮಪತ್ರ ಸಲ್ಲಿಸಿದ ಕಾಂಗ್ರೆಸ್‌ ಪಕ್ಷದ ಅಭ್ಯರ್ಥಿಗಳಾದ ಜೈರಾಂ ರಮೇಶ್‌, ಆಸ್ಕರ್‌ ಫರ್ನಾಂಡಿಸ್‌, ಕೆ.ಸಿ.ರಾಮಮೂರ್ತಿ ಅವರಿಗೆ ಕೆಪಿಪಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್‌ ಹಸ್ತಲಾಘವ ಮಾಡಿದರು. ಬೃಹತ್‌ ಕೈಗಾರಿಕಾ ಸಚಿವ ಆರ್‌.ವಿ.ದೇಶಪಾಂಡೆ ಅವರೂ ಇದ್ದಾರೆ –ಪ್ರಜಾವಾಣಿ ಚಿತ್ರ   

ಬೆಂಗಳೂರು: ವಿಧಾನಸಭೆಯಿಂದ ರಾಜ್ಯಸಭೆಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್‌ ಶಾಸಕ ಬಿ.ಎ.ಮೊಹಿಯುದ್ದೀನ್‌ ಬಾವ ಅವರ ಸಹೋದರ  ಬಿ.ಎಂ.ಫಾರೂಕ್‌ ಅವರು ಜೆಡಿಎಸ್‌ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕಣ್ಣು ಕೆಂಪಗಾಗಿಸಿದೆ.

ಫಾರೂಕ್‌ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಬೇಕು ಎಂದು ಶಾಸಕ ಬಾವ ಮೇಲೆ ಮುಖ್ಯಮಂತ್ರಿ ಒತ್ತಡ ಹೇರಿದ್ದಾರೆ ಎಂದು ನಂಬಲರ್ಹ ಮೂಲಗಳು ತಿಳಿಸಿವೆ.

ಕುತೂಹಲದ ಘಟ್ಟಕ್ಕೆ: ಜೆಡಿಎಸ್‌ನಿಂದ ಬಿ.ಎಂ.ಫಾರೂಕ್‌  ಹಾಗೂ ಕಾಂಗ್ರೆಸ್‌ನಿಂದ ಮೂರನೇ ಅಭ್ಯರ್ಥಿಯಾಗಿ   ಕೆ.ಸಿ.ರಾಮಮೂರ್ತಿ  ನಾಮಪತ್ರ ಸಲ್ಲಿಸಿರುವುದರಿಂದ  ರಾಜ್ಯಸಭೆ  ಚುನಾವಣೆಯ ಕುತೂಹಲ ಹೆಚ್ಚಾಗಿದೆ. ಮೂರನೇ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯವಿರುವಷ್ಟು ಸದಸ್ಯರ ಬಲವನ್ನು ಕಾಂಗ್ರೆಸ್‌ ಹೊಂದಿಲ್ಲ. ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸುವಷ್ಟು ಸದಸ್ಯರು ಜೆಡಿಎಸ್‌ನಲ್ಲಿಲ್ಲ. ಎರಡೂ ಪಕ್ಷಗಳು  ಪಕ್ಷೇತರ ಹಾಗೂ ಇತರ ಸಣ್ಣ ಪಕ್ಷಗಳ ಸದಸ್ಯರ ಬೆಂಬಲ ಪಡೆಯುವುದು ಅನಿವಾರ್ಯ.

ಜೆಡಿಎಸ್‌ ಅಭ್ಯರ್ಥಿ ಫಾರೂಕ್‌ ಅವರ ನಾಮಪತ್ರಕ್ಕೆ ಈ ಮೊದಲು ಸೂಚಕರಾಗಿ ಸಹಿ ಮಾಡಿದ್ದ   ಕೆಜೆಪಿ, ಕರ್ನಾಟಕ ಮಕ್ಕಳ ಪಕ್ಷ,  ಬಿಎಸ್‌ಆರ್‌ ಕಾಂಗ್ರೆಸ್‌ ಹಾಗೂ ಪಕ್ಷೇತರ ಶಾಸಕರು ನಂತರ ನಿಲುವು ಬದಲಾಯಿಸಿದ್ದರು. ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಭಾಗವಹಿಸಿ ಕಾಂಗ್ರೆಸ್‌ ಅಭ್ಯರ್ಥಿ ರಾಮಮೂರ್ತಿ ಅವರಿಗೆ ಬೆಂಬಲ ಘೋಷಿಸಿದ್ದರು. 

‘2012ರಲ್ಲಿ ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್‌ ಅಹಮದ್‌ ಸರಡಗಿ ಅವರು ಸೋತಿದ್ದರು. ಈ ಬಾರಿ ಏನಾಗುತ್ತದೋ ಕಾದು ನೋಡೋಣ ಜೂನ್‌11ರವರೆಗೆ ಅವಕಾಶ ಇದೆ’ ಎನ್ನುವ ಮೂಲಕ ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಕುತೂಹಲವನ್ನು ಜೀವಂತವಾಗಿಟ್ಟಿದ್ದಾರೆ.

ಬಾವಗೆ ಎಚ್ಚರಿಕೆ:  ಸೋಮವಾರ ನಡೆದ ಪಕ್ಷದ ಶಾಸಕರ ಸಭೆಗೆ ಮುನ್ನ ಬಾವ ಅವರನ್ನು ಕರೆಸಿಕೊಂಡ ಮುಖ್ಯಮಂತ್ರಿ, ‘ಫಾರೂಕ್‌ ಸ್ಪರ್ಧೆಯಿಂದಾಗಿ   ಕಾಂಗ್ರೆಸ್‌ನ ಮೂರನೇ ಅಭ್ಯರ್ಥಿ  ಕೆ.ಸಿ.ರಾಮಮೂರ್ತಿ ಅವರ ಗೆಲುವಿಗೆ ಅಡ್ಡಿ ಉಂಟಾದರೆ ಅದರ ಹೊಣೆಯನ್ನೂ ನೀವೇ ಹೊರಬೇಕು’  ಎಂದು ಎಚ್ಚರಿಕೆ ನೀಡಿದರು ಎನ್ನಲಾಗಿದೆ. 

‘ಫಾರೂಕ್‌ ಸ್ವತಂತ್ರ ಉದ್ಯಮಿ. ಅವರು ನಾಮಪತ್ರ ಸಲ್ಲಿಸಿರುವುದಕ್ಕೂ ನನಗೂ ಸಂಬಂಧ ಇಲ್ಲ. ನಾಮಪತ್ರ ಸಲ್ಲಿಸುವುದು ಬೇಡ ಎಂದಿದ್ದೆ. ಅವರು ನನ್ನ ಮಾತು ಕೇಳಲಿಲ್ಲ’ ಎಂದು ಬಾವ  ಅಸಹಾಯಕತೆ ವ್ಯಕ್ತಪಡಿಸಿದರು.

‘ಈ ಹಿಂದೆ ಕೆಲವು ಕೆಲಸಗಳನ್ನು ಮಾಡಿಸಿಕೊಳ್ಳಲು ಫಾರೂಕ್‌ನನ್ನು ನನ್ನ ಬಳಿ ಕರೆದುಕೊಂಡು ಬಂದಿದ್ದೀಯ.  ಈಗ ಆತನಿಂದ ನಾಮಪತ್ರ ಹಿಂದಕ್ಕೆ ತೆಗೆಸಲು ಆಗುವುದಿಲ್ಲ ಎಂದರೆ ಹೇಗೆ?’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು ಎನ್ನಲಾಗಿದೆ. ಫಾರೂಕ್‌ ಅವರು ಫಿಜಾ ಬಳಗದ ಕಂಪೆನಿಗಳ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ. ಈ ಕಂಪೆನಿ 20 ವರ್ಷಗಳಿಂದ ನವೀಕರಿಸಬಲ್ಲ ಇಂಧನ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದೆ. ಪವನ ವಿದ್ಯುತ್‌ ಉತ್ಪಾದಿಸುವ ಗಾಳಿಯಂತ್ರಗಳನ್ನು ತಯಾರಿಸುವ ಉದ್ಯಮದಲ್ಲೂ ತೊಡಗಿಕೊಂಡಿರುವ ಈ ಕಂಪೆನಿ ಕರ್ನಾಟಕದಲ್ಲೂ ವ್ಯವಹಾರಗಳನ್ನು ಹೊಂದಿದೆ. 

‘ನಾಮಪತ್ರ ಹಿಂದಕ್ಕೆ ಪಡೆಯದಿದ್ದರೆ ಫಾರೂಕ್‌ ಅವರ ವ್ಯವಹಾರಗಳಿಗೂ ತೊಂದರೆ ಉಂಟಾದೀತು’ ಎಂದು ಕಾಂಗ್ರೆಸ್‌ ಮುಖಂಡರು ಬಾವ ಅವರ ಮೇಲೆ ಒತ್ತಡ ತಂದಿದ್ದಾರೆ ಎಂದು ಗೊತ್ತಾಗಿದೆ. ಈ ಬೆಳವಣಿಗೆ ಬಳಿಕ ಬಾವ ಅವರು  ಫಾರೂಕ್‌ ಅವರನ್ನು ಸಂಪರ್ಕಿಸಿ ಕಣದಿಂದ ಹಿಂದಕ್ಕೆ ಸರಿಯುವಂತೆ ಮನವಿ ಮಾಡಿದ್ದಾರೆ. ಆದರೆ, ಅವರು ಒಪ್ಪಿಲ್ಲ ಎಂದು ತಿಳಿದು ಬಂದಿದೆ.
*
ಜೆಡಿಎಸ್‌ನಿಂದ ಇಬ್ಬರು
ವಿಧಾನಸಭೆಯಿಂದ ವಿಧಾನ ಪರಿಷತ್ತಿಗೆ ನಡೆಯುವ ಚುನಾವಣೆಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಮೂಲಕ  ಜೆಡಿಎಸ್‌ ಅಚ್ಚರಿ ಮೂಡಿಸಿದೆ. ಜೆಡಿಎಸ್‌ನಿಂದ ಮೊದಲ ಅಭ್ಯರ್ಥಿಯಾಗಿ ಕೆ.ವಿ.ನಾರಾಯಣ ಸ್ವಾಮಿ ಹಾಗೂ ಎರಡನೇ ಅಭ್ಯರ್ಥಿಯಾಗಿ ವೆಂಕಟಪತಿ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.