ADVERTISEMENT

ಕೆರಳಿದ ಪ್ರಯಾಣಿಕನಿಂದ ‘ಬಾಂಬ್‌’ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2016, 19:51 IST
Last Updated 3 ಫೆಬ್ರುವರಿ 2016, 19:51 IST

ನವದೆಹಲಿ (ಪಿಟಿಐ): ಭದ್ರತಾ ಸಿಬ್ಬಂದಿ ಪದೇ ಪದೇ ತಪಾಸಣೆ ನಡೆಸಿದ್ದಕ್ಕೆ ಕೆರಳಿದ ಪ್ರಯಾಣಿಕರೊಬ್ಬರು ‘ಬಾಂಬ್‌’ ಬೆದರಿಕೆ ಮೂಲಕ ಆತಂಕ ಸೃಷ್ಟಿಸಿದ ಘಟನೆ ಇಲ್ಲಿನ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸೋಮವಾರ ಬೆಳಿಗ್ಗೆ ನಡೆದಿದೆ.

ಈ ಗದ್ದಲದಿಂದಾಗಿ ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಪುತ್ರಿ ಪ್ರಿಯಾಂಕಾ ವಾದ್ರಾ ಇನ್ನೊಂದು ವಿಮಾನದಲ್ಲಿ ಪ್ರಯಾಣ ಬೆಳೆಸಬೇಕಾಯಿತು. ಜೆಟ್‌ ಏರ್‌ವೇಸ್‌ ಸಂಸ್ಥೆಗೆ ಸೇರಿದ ವಿಮಾನ ಬೆಳಿಗ್ಗೆ 6.45ಕ್ಕೆ ನವದೆಹಲಿಯಿಂದ ಚೆನ್ನೈಗೆ ಹೊರಡಬೇಕಿತ್ತು. ಉದ್ಯಮಿಯೊಬ್ಬರು ಈ ವಿಮಾನದಲ್ಲಿ ಪ್ರಯಾಣಿಸಬೇಕಿತ್ತು.

ಉದ್ಯಮಿಯ ಬ್ಯಾಗ್‌ನಲ್ಲಿ ಲೋಹದ ಕೆಲವು ವಸ್ತುಗಳು ಇದ್ದ ಕಾರಣ ಭದ್ರತಾ ಸಿಬ್ಬಂದಿ ಎರಡು ಸಲ ತಪಾಸಣೆಗೆ ಗುರಿಪಡಿಸಿದ್ದಾರೆ. ವಿಮಾನ ಏರುವ ಮೊದಲು ಮತ್ತೊಮ್ಮೆ ಬ್ಯಾಗ್‌ ತೆರೆಯುವಂತೆ ಸೂಚಿಸಿದಾಗ ಕೆರಳಿ, ‘ನನ್ನಲ್ಲಿ ಬಾಂಬ್‌ ಇದೆ. ವಿಮಾನ ಸ್ಫೋಟಿಸುತ್ತೇನೆ’ ಎಂದು ಅವರು ಹೇಳಿದ್ದಾರೆ.

ಪ್ರಯಾಣಿಕ ಮತ್ತು ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)  ಸಿಬ್ಬಂದಿ ನಡುವಣ ಮಾತುಕತೆ ಪ್ರಿಯಾಂಕಾ ಅವರಿಗೆ ಭದ್ರತೆ ನೀಡುತ್ತಿದ್ದ  ವಿಶೇಷ ರಕ್ಷಣಾ ವ್ಯವಸ್ಥೆ (ಎಸ್‌ಪಿಜಿ) ಸಿಬ್ಬಂದಿ ಕಿವಿಗೆ ಬಿದ್ದಿದೆ. ಎಸ್‌ಪಿಜಿ ಮತ್ತು ವಿಮಾನ ಸಂಸ್ಥೆ ಸಿಬ್ಬಂದಿ ಈ ವಿಷಯವನ್ನು ನಿಯಂತ್ರಣ ಕೊಠಡಿಗೆ ತಿಳಿಸಿದ್ದಾರೆ. ವಿಮಾನ ತಡವಾಗಿ ಹೊರಡಲಿದೆ ಎಂಬುದನ್ನು ಅರಿತ ಕಾರಣ ಪ್ರಿಯಾಂಕಾ ಅವರಿಗೆ  7.35ರ ವಿಮಾನದಲ್ಲಿ ಚೆನ್ನೈಗೆ ಪ್ರಯಾಣಿಸಲು ವ್ಯವಸ್ಥೆ ಮಾಡಲಾಯಿತು.

‘ಪ್ರಯಾಣಿಕನ ಬೆದರಿಕೆಯನ್ನು ಸಿಐಎಸ್‌ಎಫ್‌ ಕಡೆಗಣಿಸಲಿಲ್ಲ. ಕೂಡಲೇ ಬಾಂಬ್‌ ಬೆದರಿಕೆ ಪರಿಶೀಲನಾ ಸಮಿತಿ (ಬಿಟಿಎಸಿ) ರಚಿಸಿ ವಿಮಾನದಲ್ಲಿ ಶೋಧ ನಡೆಸಲಾಯಿತು.ಸುಮಾರು 7.25ರ ವೇಳೆಗೆ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಡಿಸಲಾಯಿತು’ ಎಂದು ಮೂಲಗಳು ತಿಳಿಸಿವೆ.

‘ಬೆದರಿಕೆ ಒಡ್ಡಿದ ಪ್ರಯಾಣಿಕನನ್ನು ಪೊಲೀಸ್‌ ಠಾಣೆಗೆ ಕರೆದೊಯ್ದು ತನಿಖೆಗೆ ಒಳಪಡಿಸಲಾಯಿತು. ಆದರೆ ಅವರಿಂದ ಯಾವುದೇ ಅಪಾಯವಿಲ್ಲ ಎಂಬುದು ಖಚಿತವಾದ ಕಾರಣ ಸಂಜೆಯ ವೇಳೆ ಬಿಟ್ಟುಬಿಡಲಾಯಿತು’ ಎಂದು ಮೂಲಗಳು ಹೇಳಿವೆ.

ಪೈಲಟ್‌ ಅಲಭ್ಯ: ವಿಮಾನ ವಿಳಂಬ
ನವದೆಹಲಿ (ಪಿಟಿಐ):
ಹೆಚ್ಚುವರಿ ಪೈಲಟ್‌ ಲಭ್ಯವಿಲ್ಲದ ಕಾರಣ ಟೊರಾಂಟೊಗೆ ಪ್ರಯಾಣಿಸಬೇಕಿದ್ದ ವಿಮಾನ ಸುಮಾರು 9 ಗಂಟೆ ಇಲ್ಲಿನ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೇ ಉಳಿದ ಘಟನೆ ವರದಿಯಾಗಿದೆ.

ಜೆಟ್‌ ಏರ್‌ವೇಸ್‌ ಸಂಸ್ಥೆಯ 9ಡಬ್ಲ್ಯು–230 ವಿಮಾನ ಬೆಳಿಗ್ಗೆ 3 ಗಂಟೆಗೆ ಬ್ರಸೆಲ್ಸ್‌ ಮಾರ್ಗವಾಗಿ ಟೊರಾಂಟೊಗೆ ಪ್ರಯಾಣಿಸಬೇಕಿತ್ತು. ಆದರೆ ಈ ವಿಮಾನ ಮಧ್ಯಾಹ್ನ 12ರ ವೇಳೆಗೆ ಹೊರಟಿತು. ಮೂರನೇ ಪೈಲಟ್‌ ಲಭ್ಯವಿಲ್ಲದ್ದು ಇದಕ್ಕೆ ಕಾರಣ.

‘ಹೆಚ್ಚುವರಿ ಪೈಲಟ್‌ ಲಭ್ಯವಿಲ್ಲದ ಕಾರಣ ವಿಮಾನ ತಡವಾಗಿ ಪ್ರಯಾಣಿಸಲಿದೆ ಎಂಬ ಮಾಹಿತಿಯನ್ನು ವಿಮಾನದ ಸಿಬ್ಬಂದಿ ಪ್ರಯಾಣಿಕರಿಗೆ ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ನೀಡಿರುವ ಜೆಟ್‌ ಏರ್‌ವೇಸ್‌ ಅಧಿಕಾರಿ, ‘ಆರಂಭದಲ್ಲಿ ತಾಂತ್ರಿಕ ಸಮಸ್ಯೆಯ ಕಾರಣ ವಿಮಾನ ತಡವಾಯಿತು. ಆ ಬಳಿಕ  ಪೈಲಟ್‌ ಅಲಭ್ಯತೆ ಸಮಸ್ಯೆ ಎದುರಾಯಿತು’ ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.