ADVERTISEMENT

ಕೇಜ್ರಿವಾಲ್‌ಗೆ ಕೋರ್ಟ್ ಛೀಮಾರಿ

ಜೂನ್‌ 6ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 23 ಮೇ 2014, 19:30 IST
Last Updated 23 ಮೇ 2014, 19:30 IST

ನವದೆಹಲಿ (ಪಿಟಿಐ): ಮಾನನಷ್ಟ ಮೊಕ­­ದ್ದಮೆ ಪ್ರಕರಣ ಸಂಬಂಧ ಜಾಮೀನು ಪಡೆಯಲು ವೈಯಕ್ತಿಕ ಬಾಂಡ್‌ ನೀಡದ ಆಮ್‌ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥ ಅರ­ವಿಂದ ಕೇಜ್ರಿ­ವಾಲ್‌ ಅವರ ನ್ಯಾಯಾಂಗ ಬಂಧನ ಅವಧಿಯನ್ನು ಜೂನ್‌ 6ರ­ವರೆಗೆ ವಿಸ್ತ­ರಿಸಿರುವ ಕೋರ್ಟ್‌, ಕೇಜ್ರಿ­ವಾಲ್ ಅವ­ರನ್ನು ‘ಕಾನೂನು ಪರಿಜ್ಞಾ­ನ­ವಿಲ್ಲದ­ವರು’ ಎಂದು ಛೀಮಾರಿ ಹಾಕಿದೆ.

ಜಾಮೀನು ಮಂಜೂರು ಮಾಡಲು ವಿಧಿಸಿದ್ದ ₨10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಸಲ್ಲಿಸುವ ಷರತ್ತನ್ನು (ಮೇ 21ರ ಆದೇಶ) ಮರುಪರಿಶೀಲಿಸಲಾಗದು ಎಂದ ದೆಹಲಿ ಮೆಟ್ರೊಪಾಲಿಟನ್‌ ಕೋರ್ಟ್‌, ಈ ವಿಷಯ­ದದಲ್ಲಿ ಆರೋಪಿ (ಕೇಜ್ರಿ­ವಾಲ್‌) ವಿವೇಚನೆಯಿಂದ ವರ್ತಿಸು­ವುದು ಒಳಿತು ಎಂದು ಶುಕ್ರವಾರ ಹೇಳಿದೆ.

‘ಬುಧವಾರ ನೀಡಿದ್ದ ಆದೇಶದಲ್ಲಿ ಬದಲಾವಣೆ ಮಾಡಲಾರೆ. ನೀವು (ಕೇಜ್ರಿವಾಲ್‌ ಪರ ವಕೀಲರು) ಬೇಕಿದ್ದರೆ ಈ ಆದೇಶವನ್ನು ಮೇಲಿನ ನ್ಯಾಯಾ­ಲ­ಯ­ದಲ್ಲಿ ಪ್ರಶ್ನಿಸಬಹುದು’ ಎಂದು ನ್ಯಾಯಾ­ಧೀಶ­ರಾದ ಗೋಮತಿ ಮನೋಚಾ  ಅಭಿಪ್ರಾಯ­ಪಟ್ಟರು. ‘ದೇಶದಲ್ಲಿ ಕಾನೂನು ಪರಿಜ್ಞಾನ ಇಲ್ಲ­ದವರ ಸಂಖ್ಯೆ ಬಹಳಷ್ಟಿದೆ. ವಿದ್ಯಾ­ವಂತ­­ರಿಗೂ ಕಾನೂನು ಪ್ರಕ್ರಿಯೆ­ಗಳು ಗೊತ್ತಿಲ್ಲ. ಜಾಮೀನು ಮತ್ತು ವೈಯ­ಕ್ತಿಕ ಬಾಂಡ್‌­ಗಳ ಬಗ್ಗೆ ಅವರಿಗೆ ತಿಳಿದಿಲ್ಲ. ಸಾಂವಿ­ಧಾನಿಕ ಹುದ್ದೆ­ಯಲ್ಲಿದ್ದ ನೀವು (ಕೇಜ್ರಿ­ವಾಲ್‌) ವಿವೇಚನೆ­ಯಿಂದ ವರ್ತಿಸುತ್ತೀ­ರೆಂದು ಎಣಿಸಿದ್ದೆ’ ಎಂದರು.

‘ನಿಮ್ಮ ಪಕ್ಷದವರೇ ವೈಯಕ್ತಿಕ ಬಾಂಡ್‌ ನೀಡಿ ಜಾಮೀನು ಪಡೆದಿರುವಾಗ  ನಿಮಗೇನಡ್ಡಿ’ ಎಂದೂ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಕೇಜ್ರಿವಾಲ್‌, ‘ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಗಳು ಹೆಚ್ಚು ದಾಖಲಾಗಲು ಕಾರಣವೇನು ಮತ್ತು ನನ್ನಿಂದ ಆಗಿರುವ ತಪ್ಪಾದರೂ ಏನು ಎಂಬುದನ್ನು ಅರ್ಥ ಮಾಡಿ­ಕೊಳ್ಳಲು ಪ್ರಯತ್ನಿಸುತ್ತಿದ್ದೇನೆ.  ಇಂತಹ ಪ್ರಕರಣಗಳ ವಿಚಾರಣೆಗೆ ಹಾಜರಾಗು­ವು­ದಾಗಿ ಈ ಹಿಂದೆ ಮುಚ್ಚಳಿಕೆ ನೀಡಿದ್ದೆ. ಆಗ ನನ್ನನ್ನು ಬಂಧಿಸಿರಲಿಲ್ಲ’ ಎಂದರು.

‘ಸಮನ್ಸ್‌ ಜಾರಿಯಾಗಿರುವುದು ನೀವು ಆರೋಪಿ ಎಂದೇ ಹೊರತು, ತಪ್ಪಿತಸ್ಥ­ರೆಂದಲ್ಲ. ನೀವು ವಿಚಾರಣೆ ಎದುರಿಸ­ಬೇಕು... ಅದನ್ನು ಬಿಟ್ಟು ನಾನು ಮುಗ್ಧ, ನನ್ನನ್ನು ಬಿಟ್ಟುಬಿಡಿ ಎಂದು ಹೇಳ­ಲಾಗದು. ಜಾಮೀನು ಬೇಕಿದ್ದರೆ ಷರತ್ತು ಪೂರೈಸಬೇಕು. ಅದೇ ರಿವಾಜು’ ಎಂದು ನ್ಯಾಯಾಧೀಶರು ತಿಳಿಹೇಳಿದರು.

ಇದಕ್ಕೂ ಮೊದಲು, ಮಾನನಷ್ಟ ಮೊಕದ್ದಮೆ ಪ್ರಕರಣಗಳಲ್ಲಿ ಆರೋಪಿ­ಯನ್ನು ಬಂಧಿಸುವ ಅಗತ್ಯ ಇಲ್ಲ. ಜೊತೆಗೆ, ಜಾಮೀನು ಪಡೆಯಲು ವೈಯಕ್ತಿಕ ಬಾಂಡ್‌ ಸಲ್ಲಿಕೆಯೂ ಬೇಕಿಲ್ಲ’ ಎಂದು ಕೇಜ್ರಿ­ವಾಲ್‌ ಪರ ವಕೀಲ ಶಾಂತಿ ಭೂಷಣ್‌ ಹೇಳಿದರು. ಇದಕ್ಕೆ ಪ್ರತಿವಾದ ಮಂಡಿಸಿದ ಗಡ್ಕರಿ ಪರ ವಕೀಲರಾದ ಪಿಂಕಿ ಆನಂದ್‌, ಕ್ರಿಮಿನಲ್‌ ಸ್ವರೂಪದ ಪ್ರಕರಣಗಳ ವಿಚಾರಣೆ ನಡೆಸುವ ನ್ಯಾಯಾಲಯ­ಗಳು ಆದೇಶವನ್ನು ಮರುಪರಿಶೀಲಿ­ಸಲು ಆಗದು’ ಎಂದರು. ಈ ಮಧ್ಯೆ, ಕೇಜ್ರಿವಾಲ್‌ ಅವರ ಧೋರಣೆ­ಯನ್ನು ಟೀಕಿಸಿರುವ ಬಿಜೆಪಿ ಮತ್ತು ಕಾಂಗ್ರೆಸ್‌, ‘ಇದೊಂದು ರಾಜ­ಕೀಯ ನಾಟಕ’ ಎಂದಿವೆ.

ಹಿನ್ನೆಲೆ: ಆಮ್‌ ಆದ್ಮಿ ಪಕ್ಷವು ಬಿಡುಗಡೆ ಮಾಡಿದ ‘ದೇಶದ ಕಡು ಭ್ರಷ್ಟರ’ ಪಟ್ಟಿಯಲ್ಲಿ ಬಿಜೆಪಿ ಮುಖಂಡ ನಿತಿನ್‌ ಗಡ್ಕರಿ ಅವರನ್ನು ಹೆಸರಿಸಿತ್ತು. ಆದ್ದರಿಂದ ಗಡ್ಕರಿ ಅವರು ಎಎಪಿ ಮುಖ್ಯಸ್ಥ ಕೇಜ್ರಿವಾಲ್‌ ಮತ್ತಿತರರ ವಿರುದ್ಧ ಭಾರತೀಯ ದಂಡ ಸಂಹಿತೆ (ಐಪಿಸಿ) 500ನೇ ಕಲಂ ಅನ್ವಯ ಮಾನನಷ್ಟ ಮೊಕದ್ದಮೆ ಹೂಡಿದ್ದಾರೆ.

ಮೇ 21ರಂದು ಈ ನಡೆದ ಪ್ರಕರಣದ   ವಿಚಾರಣೆ­ಯಲ್ಲಿ ₨10 ಸಾವಿರ ಮೊತ್ತದ ವೈಯಕ್ತಿಕ ಬಾಂಡ್‌ ಸಲ್ಲಿಸಿ ಜಾಮೀನು ಪಡೆಯಲು ಕೋರ್ಟ್‌ ಸೂಚಿಸಿತ್ತು. ಆದರೆ, ವೈಯಕ್ತಿಕ ಬಾಂಡ್‌ ಸಲ್ಲಿಸುವುದು ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದುದು. ಪ್ರಕರಣದ ವಿಚಾರಣೆಗೆ ಖುದ್ದು ಹಾಜರಾಗುವುದಾಗಿ ಮುಚ್ಚಳಿಕೆ ನೀಡು­ವುದಾಗಿ ಕೇಜ್ರಿವಾಲ್ ನ್ಯಾಯಾ­ಲಯಕ್ಕೆ ವಿನಂತಿ­ಸಿಕೊಂಡಿದ್ದರು.

ಆದರೆ ಇದನ್ನು ಮಾನ್ಯ ಮಾಡದ ನ್ಯಾಯಾ­ಲಯ,‘ಕಾನೂನು ಪ್ರಕ್ರಿಯೆ­ಗ-ಳನ್ನು ಗಾಳಿಗೆ ತೂರಲಾಗದು ಮತ್ತು ಉದ್ದೇಶ ಪೂರ್ವಕ­ವಾಗಿಯೇ ಇದನ್ನು ಉಲ್ಲಂಘಿ­ಸುತ್ತಿದ್ದರೂ ನ್ಯಾಯಾ­ಲಯ ಮೌನ ಪ್ರೇಕ್ಷಕನಂತಿರಲು ಸಾಧ್ಯ­ವಿಲ್ಲ’ ಎಂದು ಹೇಳಿತ್ತು. ಕೇಜ್ರಿವಾಲ್‌ ಅವರನ್ನು ಮೇ 23ರವರೆಗೆ ಬಂಧನದಲ್ಲಿರಿ­ಸುವಂತೆ ಸೂಚಿಸಿತ್ತು.

ಮೆಟ್ರೊಪಾಲಿಟನ್‌ ನ್ಯಾಯಾಲಯದ ಆದೇಶದಲ್ಲಿ ಬದಲಾವಣೆ ಆಗದಿದ್ದರೆ ಉನ್ನತ ನ್ಯಾಯಾಲಯಕ್ಕೆ ಮೊರೆ ಹೋಗು­ವುದಾಗಿ ಕೇಜ್ರಿವಾಲ್‌ ಪರ ವಕೀಲರು ಗುರುವಾರ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT