ADVERTISEMENT

ಕೇರಳದ ಆರ್‍ಎಸ್‍ಎಸ್-ಬಿಜೆಪಿ 'ಲವ್ ಜಿಹಾದ್ ಹೆಲ್ಪ್ ಡೆಸ್ಕ್' ರಹಸ್ಯ ಚಾಟ್ ಸೋರಿಕೆ!

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 17:16 IST
Last Updated 18 ಫೆಬ್ರುವರಿ 2017, 17:16 IST
ಕೇರಳದ ಆರ್‍ಎಸ್‍ಎಸ್-ಬಿಜೆಪಿ 'ಲವ್ ಜಿಹಾದ್ ಹೆಲ್ಪ್ ಡೆಸ್ಕ್' ರಹಸ್ಯ ಚಾಟ್ ಸೋರಿಕೆ!
ಕೇರಳದ ಆರ್‍ಎಸ್‍ಎಸ್-ಬಿಜೆಪಿ 'ಲವ್ ಜಿಹಾದ್ ಹೆಲ್ಪ್ ಡೆಸ್ಕ್' ರಹಸ್ಯ ಚಾಟ್ ಸೋರಿಕೆ!   

ತಿರುವನಂತಪುರಂ: 'ಲವ್ ಜಿಹಾದ್ ಹೆಲ್ಪ್ ಡೆಸ್ಕ್ 'ಎಂಬ ಆರ್‍ಎಸ್‍ಎಸ್‍ನ ರಹಸ್ಯ ಗುಂಪೊಂದರಲ್ಲಿ ನಡೆದ ಚಾಟ್ ಸೋರಿಕೆಯಾಗುವ ಮೂಲಕ ಕೇರಳದ ಆರ್‍ಎಸ್‍ಎಸ್-ಬಿಜೆಪಿ ಭಾರೀ ಮುಜುಗರಕ್ಕೊಳಗಾಗಿದೆ.

ಮೂರು ದಿನಗಳ ಹಿಂದೆ ಈ ರಹಸ್ಯ ಚಾಟ್ ಆನ್‍ಲೈನ್‍ನಲ್ಲಿ ಸೋರಿಕೆಯಾಗಿರುವುದಾಗಿ ಆಲ್ಟ್ ನ್ಯೂಸ್ ಇನ್ ನ್ಯೂಸ್ ಪೋರ್ಟಲ್  ಸುದ್ದಿ ಪ್ರಕಟಿಸಿದೆ.
ಆರ್‍ಎಸ್‍ಎಸ್‍ನ ಫೇಸ್‍ಬುಕ್ ಗ್ರೂಪ್‍ನಲ್ಲಿ ಸಂಘದ ಸದಸ್ಯರಲ್ಲದ ಇಬ್ಬರನ್ನು ಸೇರಿಸಿದ್ದೇ ಈ ಎಲ್ಲ ಎಡವಟ್ಟುಗಳಿಗೆ ಕಾರಣ ಎಂದು ಹೇಳಲಾಗುತ್ತಿದ್ದು, ಗ್ರೂಪ್ ನಲ್ಲಿ ನಡೆದ ಮಾತುಕತೆಯ ಸ್ಕ್ರೀನ್‍ಶಾಟ್‍ಗಳು ಬಹಿರಂಗವಾಗಿವೆ.

ಪ್ರಸ್ತುತ ಗ್ರೂಪ್‍ನಲ್ಲಿ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕಮ್ಮನಂ ರಾಜಶೇಖರ್ ಅವರಿಂದ ಹಿಡಿದು ರಾಹುಲ್ ಈಶ್ವರ್, ದಲಿತ ಕಾರ್ಯಕರ್ತೆ ಧನ್ಯಾ ರಾಮನ್,ಆನ್‍ಲೈನ್‍ನಲ್ಲಿ  ಸಕ್ರಿಯರಾಗಿರುವ ಆರ್‍ಎಸ್‍ಎಸ್ ಕಾರ್ಯಕರ್ತೆ ಲಕ್ಷ್ಮಿ ಕನಾತ್ ಮತ್ತು ಸಂಗೀತಗಾರ ಜೇರಲತ್ ಹರಿಗೋವಿಂದನ್ ಮೊದಲಾದವರು ಇದ್ದಾರೆ.

ADVERTISEMENT

ಕೇರಳದಲ್ಲಿ ನಡೆಯುತ್ತಿರುವ ಲವ್ ಜಿಹಾದ್ (ಅಂತರ್ ಧರ್ಮೀಯ ವಿವಾಹ)ಗಳನ್ನು ತಡೆಯುವುದಕ್ಕಾಗಿ ಈ ರಹಸ್ಯ ಗ್ರೂಪ್‍ನಲ್ಲಿ  ಕಾರ್ಯತಂತ್ರಗಳನ್ನು ರೂಪಿಸಲಾಗುತ್ತದೆ.

ಸೋರಿಕೆಯಾದ ಸಂದೇಶಗಳಲ್ಲಿ ಏನಿದೆ?
ಇಬ್ಬರು ಮುಸ್ಲಿಂ ಯುವಕರು ಸುಂದರಿಯಾದ ಹಿಂದೂ ಯುವತಿಯೊಂದಿಗೆ ತಲಶ್ಶೇರಿಯಿಂದ ರಾತ್ರಿ 9.30ರ ಬಸ್ಸು ಹತ್ತಿ ಬೆಂಗಳೂರಿಗೆ ಪ್ರಯಾಣ ಬೆಳೆಸಿದ್ದಾರೆ. ಅವರ ರಕ್ಷಣೆಗಾಗಿ ಗಡ್ಡಧಾರಿ ಯುವಕರು ಕಾವಲಿದ್ದರು. ಆದರೆ ಕೈಯಲ್ಲಿ ರಾಖಿ ಇರುವ ರಾಷ್ಟ್ರೀಯ ಸ್ವಯಂ ಸೇವಕರನ್ನು ಕಂಡಾಗ ಅವರು ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ ಎಂಬ ಸಂದೇಶ ಜನವರಿ 8ರಂದು ಆ ಗ್ರೂಪ್‍ನಲ್ಲಿ ಚರ್ಚೆಗೊಳಗಾಗಿದೆ. ಅದೇ ವೇಳೆ ಆ ಯುವಕ ಯುವತಿಯವರು ಪ್ರಯಾಣಿಸುತ್ತಿದ್ದ ಬಸ್ಸಿನ ಸಂಖ್ಯೆ, ಬಸ್ಸಿನ ಬಣ್ಣ, ಹೆಸರು ಎಲ್ಲವನ್ನೂ ಗ್ರೂಪ್‍ನಲ್ಲಿ ಶೇರ್  ಮಾಡಲಾಗಿದೆ. ಅಷ್ಟೇ ಅಲ್ಲದೆ ಆ ಯುವಕ-ಯುವತಿಯರ ವಿರುದ್ಧ ಕ್ರಮ ಕೈಗೊಳ್ಳುವಂತೆ ಬೆಂಗಳೂರಿನಲ್ಲಿರುವ ಸ್ವಯಂ ಸೇವಕರಿಗೆ ಆದೇಶಿಸಲಾಗಿದೆ.

ಈ ಚಾಟ್‍ಗೆ ದಲಿತ ಕಾರ್ಯಕರ್ತೆ ಧನ್ಯಾ ರಾಮನ್ ಥಮ್ಸ್ ಅಪ್ ನೀಡಿದ್ದು, ಈ ಗ್ರೂಪ್‍ನಲ್ಲಿ ಲವ್ ಜಿಹಾದ್ ಬಗ್ಗೆ ಮಾತ್ರ ಚರ್ಚೆ ಮಾಡಬೇಕೆಂದು ಹೇಳಿರುವ ಚಾಟ್ ಸಂದೇಶವಿದೆ.

ನರೇಂದ್ರ ಮೋದಿ ಉದ್ಯಮಿಗಳಾದ ಅಂಬಾನಿ ಮತ್ತು ಅದಾನಿಯವರ ಪರ ಇದ್ದಾರೆ ಎಂದು ಜಯಕಾಂತನ್ ಎಂಬವರು ಫೇಸ್‍ಬುಕ್‍ನಲ್ಲಿ ಹಾಕಿದ ಪೋಸ್ಟ್ ಬಗ್ಗೆಯೂ ಈ ಗ್ರೂಪ್‍ನಲ್ಲಿ ಚರ್ಚೆಯಾಗಿದೆ. ಏತನ್ಮಧ್ಯೆ, ಆರ್‍ಎಸ್‍ಎಸ್‍ನಲ್ಲಿರುವ ಸದಸ್ಯರೇ ಯಾವ ರೀತಿ ತಮ್ಮ ಘನತೆಗೆ ಧಕ್ಕೆ ತರುತ್ತಿದ್ದಾರೆ ಎಂಬುದರ ಬಗ್ಗೆಯೂ ಇಲ್ಲಿ ಚರ್ಚೆ ನಡೆದಿದೆ.

ಧನ್ಯಾ ಫೇಸ್‍ಬುಕ್ ಪೋಸ್ಟ್ 

ಲವ್ ಜಿಹಾದ್ ಹೆಲ್ಪ್ ಡೆಸ್ಕ್ ಬಗ್ಗೆಯಾಗಲೀ, ಸೋರಿಕೆಯಾದ ಚಾಟ್ ಬಗ್ಗೆಯಾಗಲೀ ಉಲ್ಲೇಖಿಸದ ಧನ್ಯಾ ರಾಮನ್, ತಮ್ಮ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಪ್ರಯತ್ನ ನಡೆಯುತ್ತಿದೆ. ತನಗೆ ಜೀವ ಬೆದರಿಕೆ ಇದೆ ಎಂದು  ಐಜಿ ಅವರಿಗೆ ದೂರು ನೀಡಿ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ್ದಾರೆ.

ಈಕೆ ಫೇಸ್‍ಬುಕ್‍ನಲ್ಲಿ ಪೋಸ್ಟ್ ಹಾಕಿದ ಕೂಡಲೇ ಆ ಪೋಸ್ಟ್ ಗೆ ಬಂದ ಕಾಮೆಂಟುಗಳಲ್ಲಿ ರಹಸ್ಯ ಗುಂಪಿನಲ್ಲಿ ಧನ್ಯಾ ಭಾಗಿಯಾಗಿರುವ ಬಗ್ಗೆ ನೆಟಿಜನ್‍ಗಳು ತರಾಟೆಗೆ ತೆಗೆದುಕೊಂಡಿದ್ದಾರೆ. ಆ  ಗ್ರೂಪ್‍ನಲ್ಲಿರುವ ಧನ್ಯಾ ಅವರ ಫೇಕ್ ಖಾತೆ ಏನೂ ಅಲ್ಲ ಎಂಬುದನ್ನೂ ನೆಟಿಜನ್‍ಗಳು ಸಾಕ್ಷ್ಯ ಸಮೇತ ಸಾಬೀತು ಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.