ADVERTISEMENT

ಕೇರಳದ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ

ಚಿತ್ರತಂಡದವರಿಂದಲೇ ಕೃತ್ಯ; ನಟಿಯ ದೂರು

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2017, 10:34 IST
Last Updated 19 ಫೆಬ್ರುವರಿ 2017, 10:34 IST
ಕೇರಳದ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ
ಕೇರಳದ ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ   
ತಿರುವನಂತಪುರ: ಕನ್ನಡ ಚಿತ್ರಗಳಲ್ಲಿ ನಟಿಸಿದ್ದ ಕೇರಳದ ಬಹುಭಾಷಾ ನಟಿ ಭಾವನಾ ಮೆನನ್‌ ಮೇಲೆ ಶುಕ್ರವಾರ ರಾತ್ರಿ ಚಲಿಸುತ್ತಿದ್ದ ಕಾರ್‌ನಲ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ.
 
‘ತ್ರಿಶೂರ್‌ನಲ್ಲಿ ಚಿತ್ರೀಕರಣ ಮುಗಿಸಿ ಕೊಚ್ಚಿಗೆ ವಾಪಸ್‌ ಆಗುವಾಗ ಘಟನೆ ನಡೆದಿದೆ. ಚಿತ್ರ ತಂಡದವರೇ ಕೃತ್ಯ ಎಸಗಿದ್ದಾರೆ’ ಎಂದು ಭಾವನಾ ದೂರು ನೀಡಿದ್ದಾರೆ.
 
‘ಶುಕ್ರವಾರ ಚಿತ್ರದ ಚಿತ್ರೀಕರಣ ಮುಗಿಸಿದ ನಟಿ, ಚಿತ್ರ ತಂಡ ಒದಗಿಸಿದ್ದ ಕಾರ್‌ನಲ್ಲಿ ಕೊಚ್ಚಿಗೆ ಹೊರಟಿದ್ದಾರೆ. ಆ ಕಾರ್‌ ಅನ್ನು ಮಾರ್ಟಿನ್ ಎಂಬಾತ ಚಲಾಯಿಸುತ್ತಿದ್ದ. ಆದರೆ ರಾತ್ರಿ 9ರ ಸಮಯದಲ್ಲಿ ದಾರಿ ಮಧ್ಯೆ ಅಪಘಾತ ನಡೆದು, ನಿಂತಿದ್ದ ಬೇರೊಂದು ಕಾರ್‌ನಿಂದ ನಾಲ್ವರನ್ನು ಮಾರ್ಟಿನ್ ತನ್ನ ಕಾರಿಗೆ ಹತ್ತಿಸಿಕೊಂಡಿದ್ದಾನೆ. ಆ ನಾಲ್ವರೂ ಚಿತ್ರ ತಂಡದವರು’ ಎಂದು ಮೂಲಗಳು ತಿಳಿಸಿವೆ.
 
‘ಅದಾಗಿ ಕೆಲವೇ ಸಮಯದಲ್ಲಿ ನಟಿಯ ಮೇಲೆ ಆ ನಾಲ್ವರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ. ನಂತರ ಅವರು ಪಳರಿವಟ್ಟಂ ಎಂಬಲ್ಲಿ ಇಳಿದುಕೊಂಡಿದ್ದಾರೆ. ನಂತರ ಮಾರ್ಟಿನ್, ನಟಿಯನ್ನು ಅವರ ಮನೆಯ ಬಳಿ ಬಿಟ್ಟಿದ್ದಾನೆ. ಆ ನಂತರ ಭಾವನಾ ಪೊಲೀಸರಿಗೆ ದೂರು ನೀಡಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
 
‘ಪೊಲೀಸರು ಈಗಾಗಲೇ ಚಾಲಕ ಮಾರ್ಟಿನ್ ಅನ್ನು ಬಂಧಿಸಿದ್ದಾರೆ. ಆತ ಕೃತ್ಯದಲ್ಲಿ ತಾನೂ ಭಾಗಿಯಾಗಿರುವುದಾಗಿ  ಒಪ್ಪಿಕೊಂಡಿದ್ದಾನೆ’ ಎಂದು ಮೂಲಗಳು ತಿಳಿಸಿವೆ.
 
**
ಫೋಟೊ ಬಹಿರಂಗದ ಬೆದರಿಕೆ
‘ದುಷ್ಕರ್ಮಿಗಳು ತಾವು ನಟಿಯ ಮೇಲೆ ದೌರ್ಜನ್ಯ ನಡೆಸುತ್ತಿರುವುದರ ಚಿತ್ರಗಳನ್ನು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಕೃತ್ಯ ಬಹಿರಂಗಪಡಿಸಿದರೆ ಆ ಚಿತ್ರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಕೃತ್ಯ ಎಸಗುವ ಉದ್ದೇಶದಿಂದಲೇ ನಟಿ ಇದ್ದ ಕಾರಿನ ಚಾಲಕನೂ ಸೇರಿ ಆರೋಪಿಗಳು ಸಂಚು ರೂಪಿಸಿದ್ದಾರೆ. ಆ ಸಂಚಿನಂತೆ ರಸ್ತೆಯಲ್ಲಿ ಅಪಘಾತ ನಡೆಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.
 
ಆದರೆ ಇವೆಲ್ಲವನ್ನೂ ಕೊಚ್ಚಿ ಪೊಲೀಸರು ನಿರಾಕರಿಸಿದ್ದಾರೆ. ‘ತನ್ನ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂದಷ್ಟೇ ನಟಿ ದೂರು ನೀಡಿದ್ದಾರೆ. ಚಿತ್ರ ತೆಗೆದಿರುವ ಮತ್ತು ಬೆದರಿಕೆ ಹಾಕಿರುವ ಬಗ್ಗೆ ಅವರು ದೂರಿನಲ್ಲಿ ಉಲ್ಲೇಖಿಸಿಲ್ಲ’ ಎಂದು ಮಾಹಿತಿ ನೀಡಿದ್ದಾರೆ. ಉಳಿದಂತೆ  ಬಂಧಿತ ಆರೋಪಿ ಮತ್ತು ಪ್ರಕರಣದ ತನಿಖೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದ್ದಾರೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.