ADVERTISEMENT

ಕೊಳವೆ ಬಾವಿಗೆ ಬಿದ್ದ ಬಾಲಕಿ ಸಾವು

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2014, 19:30 IST
Last Updated 6 ಏಪ್ರಿಲ್ 2014, 19:30 IST

ವಿಲ್ಲುಪುರಂ, ತಮಿಳುನಾಡು (ಪಿಟಿಐ): ಪಲ್ಲಗಸೇರಿ ಗ್ರಾಮದಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಮೂರು ವರ್ಷದ ಬಾಲಕಿಯನ್ನು 19 ತಾಸುಗಳ ಕಾಲ ಹರ ಸಾಹಸ ಮಾಡಿ ರಕ್ಷಿಸಲಾಯಿತು. ಆದರೆ ಬಾಲಕಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಳು.

ಸುಮಾರು ಐದು ನೂರು ಅಡಿ ಆಳದ ಕೊಳವೆ ಬಾವಿಯಲ್ಲಿ  28ರಿಂದ 30 ಅಡಿಗಳ ಆಳದಲ್ಲಿ ಆರ್‌. ಮಧುಮತಿ ಎಂಬ ಬಾಲಕಿ ಸಿಕ್ಕಿ ಹಾಕಿಕೊಂಡಿದ್ದಳು. ಸತತ 19 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಳಗಿನ ಜಾವ ಮೂರು ಗಂಟೆ ಸುಮಾರಿಗೆ ಬಾಲಕಿಯನ್ನು ಹೊರಗೆ ತೆಗೆದು ಕಲ್ಲಕುರಿಚಿ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಬಾಲಕಿಯನ್ನು ಉಳಿಸಲು ವೈದ್ಯರು ಸುಮಾರು ಒಂದು ಗಂಟೆ ಕಾಲ ನಡೆಸಿದ ಪ್ರಯತ್ನ ವ್ಯರ್ಥವಾಯಿತು. ನಂತರ ಬಾಲಕಿ ಸತ್ತಿದ್ದಾಳೆ ಎಂದು ವೈದ್ಯರು ಪ್ರಕಟಿಸಿದರು. ಕೊಳವೆ ಬಾವಿಯಲ್ಲಿ ಅನೇಕ ಗಂಟೆಗಳ ಕಾಲ ಸಿಕ್ಕಿ ಹಾಕಿಕೊಂಡಿದ್ದರಿಂದ ಆಮ್ಲಜನಕದ ಕೊರತೆಯಿಂದ ಬಾಲಕಿ ತೀವ್ರ ಅಸ್ವಸ್ಥಳಾಗಿ ಕೋಮಾ ಸ್ಥಿತಿಗೆ ತಲುಪಿದ್ದಳು ಎಂದು ಆಸ್ಪತ್ರೆಯ ಅಧೀಕ್ಷಕ ಡಾ. ಉದಯ್ ಕುಮಾರ್‌ ತಿಳಿಸಿದ್ದಾರೆ.

ಶನಿವಾರ ಬೆಳಿಗ್ಗೆ 8 ಗಂಟೆ ಸುಮಾರಿಗೆ ತಂದೆಯ ಹೊಲದಲ್ಲಿ ಆಟವಾಡುತ್ತಿದ್ದ ಮಧುಮತಿ ಕೊಳವೆ ಬಾವಿಯ ಮೇಲೆ ಸುತ್ತಿದ್ದ ಪಾಲಿಥಿನ್‌ ಚೀಲದ ಮೇಲೆ ಕಾಲಿಟ್ಟ ಕೂಡಲೇ ಅದು ಹರಿದಿದ್ದರಿಂದ ಬಾವಿಯೊಳಗೆ ಬಿದ್ದಳು.

ವಿಷಯ ತಿಳಿದು ಕೂಡಲೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ, ಪೊಲೀಸರು ಕೊಳವೆ ಬಾವಿಯ ಒಳಗೆ ಆಮ್ಲಜನಕ ಪೂರೈಸಿ ರಕ್ಷಣೆ ಕಾರ್ಯಾಚರಣೆ ನಡೆಸಿದರು.ಮದುರೆಯ ಟಿವಿಎಸ್‌ ಕಮ್ಯೂನಿಟಿ ಕಾಲೇಜಿನ ತಂಡವು ಸಹ ಸ್ಥಳಕ್ಕೆ ಧಾವಿಸಿ ರೊಬೋಟ್‌ ಕೈ ಬಳಸಿ ಬಾಲಕಿಯನ್ನು ರಕ್ಷಿಸಲು ಪ್ರಯತ್ನಿಸಿತು.

ಸುಪ್ರೀಂಕೋರ್ಟ್ ನಿರ್ದೇಶನ ಉಲ್ಲಂಘನೆ:ಹೆಚ್ಚುತ್ತಿರುವ ಕೊಳವೆ ಬಾವಿ ದುರಂತದ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್‌ 2010ರಲ್ಲಿ ಕೊಳವೆ ಬಾವಿ ತೋಡುವಾಗ ಅನುಸರಿಸಬೇಕಾದ ಸುರಕ್ಷಾ ಕ್ರಮಗಳ ಬಗ್ಗೆ ಹೊರಡಿಸಿದ್ದ ಮಾರ್ಗದರ್ಶಿ ಸೂತ್ರಗಳನ್ನು ಗಾಳಿಗೆ ತೂರಲಾಗಿದೆ ಎಂಬುದಕ್ಕೆ  ಪಲ್ಲಗಸೇರಿ ಗ್ರಾಮದ ಘಟನೆಯ ಸಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.