ADVERTISEMENT

ಕ್ರಿಸ್‌ಮಸ್‌ ದಿನ ಶಾಲೆ: ಕೇಂದ್ರ ಸರ್ಕಾರ ತರಾಟೆಗೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2014, 19:30 IST
Last Updated 17 ಡಿಸೆಂಬರ್ 2014, 19:30 IST

ನವದೆಹಲಿ (ಪಿಟಿಐ): ಕ್ರೈಸ್ತರ ಪವಿತ್ರ ಹಬ್ಬ ಕ್ರಿಸ್‌ಮಸ್‌ ದಿನದಂದು ಶಾಲೆ­ಗಳು ಯಥಾರೀತಿ ಕಾರ್ಯ­ನಿರ್ವಹಿಸು­ವಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಬುಧವಾರ ಲೋಕಸಭೆ­ಯಲ್ಲಿ ಭಾರಿ ಗದ್ದಲಕ್ಕೆ ಕಾರಣವಾಯಿತು. ಸರ್ಕಾರ ಸಂಘ ಪರಿವಾರದ ಗುಪ್ತ ಕಾರ್ಯಸೂಚಿಯನ್ನು ಅನುಷ್ಠಾನ­ಗೊಳಿ­ಸಲು ಹೊರಟಿದೆ ಎಂದು ವಿರೋಧ ಪಕ್ಷಗಳು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡವು.

ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಜನ್ಮ­ದಿನವಾದ ಡಿಸೆಂ­ಬರ್‌ 25ರಂದು  ಸರ್ಕಾರ ‘ಉತ್ತಮ ಆಡಳಿತ ದಿವಸ’ ಆಚರಣೆಗೆ ನಿರ್ಧ­ರಿಸಿದೆ. ಇದರಿಂದ  ಕ್ರಿಸ್‌ಮಸ್‌ ರಜೆಗೆ ತೊಂದರೆಯಾಗದು ಎಂದು ಸರ್ಕಾರ  ಸಮಜಾಯಿಷಿ ನೀಡಿತು.

ಇದರಿಂದ ತೃಪ್ತರಾಗದ ಕಾಂಗ್ರೆಸ್‌, ಟಿಎಂಸಿ, ಎನ್‌ಸಿಪಿ ಸೇರಿದಂತೆ ವಿರೋಧ ಪಕ್ಷಗಳು ಕಲಾಪ ಬಹಿಷ್ಕರಿಸಿ ಹೊರ ನಡೆದವು.
ವಾಜಪೇಯಿ ಜನ್ಮದಿನದ ಪ್ರಯುಕ್ತ ‘ಉತ್ತಮ ಆಡಳಿತ ದಿವಸ’ ಆಚರಿಸಲು ಎಲ್ಲ ಶಾಲೆ, ಕಾಲೇಜು, ವಿಶ್ವವಿದ್ಯಾಲ­ಯ­ಗಳು ಡಿಸೆಂಬರ್‌ 25ರಂದು ರಜೆ ನೀಡದೆ, ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವಂತೆ ಸರ್ಕಾರ  ಸುತ್ತೋಲೆ ಹೊರಡಿಸಿದೆ.

ವಾಜಪೇಯಿ ಜನ್ಮದಿನ ಆಚರಣೆ ತಪ್ಪೇನು?
ವಾಜಪೇಯಿ ಕ್ರಿಸ್‌ಮಸ್‌ ದಿನವೇ ಹುಟ್ಟಿ­ದರೆ ನಾನೇನು ಮಾಡಲು ಆಗುತ್ತದೆ. ಅಕ್ಟೋಬರ್‌ 2ರಂದು ಗಾಂಧಿ ಜಯಂತಿ ಪ್ರಯುಕ್ತ ಕಾರ್ಯಕ್ರಮ-ಗಳನ್ನು ಹಮ್ಮಿಕೊಳ್ಳುವು­ದಿಲ್ಲವೇ. ಅದೇ ರೀತಿ ವಾಜ­ಪೇಯಿ ಜನ್ಮದಿನದಂದು ಕಾರ್ಯಕ್ರಮ ಆಯೋಜಿಸಿದರೆ ತಪ್ಪೇನಿದೆ?
ವೆಂಕಯ್ಯ ನಾಯ್ಡು ಸಂಸದೀಯ ವ್ಯವಹಾರಗಳ ಸಚಿವ

ಕಾರ್ಯಕ್ರಮ ಆಯೋಜಿಸಿದಕ್ಕೆ  ಸಾಕ್ಷ್ಯ­ವಾಗಿ ಛಾಯಾಚಿತ್ರ ಹಾಗೂ ವಿಡಿಯೊ­ಗಳನ್ನು ಕಳಿಸು ವಂತೆ ಸರ್ಕಾರ ಸೂಚಿಸಿದೆ ಎಂದು ಕಾಂಗ್ರೆಸ್‌ ಸಂಸದ ಕೆ.ಸಿ.ವೇಣು­ಗೋಪಾಲ್‌ ಸದನದ ಗಮನಕ್ಕೆ ತಂದರು. ಸರ್ಕಾರದ ಪರ ಉತ್ತರ ನೀಡಿದ ಸಂಸ­ದೀಯ ವ್ಯವಹಾರಗಳ ಸಚಿವ ವೆಂಕಯ್ಯ ನಾಯ್ಡು, ವಿರೋಧ ಪಕ್ಷಗಳು  ದೇಶ­ವನ್ನು ದಾರಿ ತಪ್ಪಿಸುತ್ತಿವೆ ಎಂದು ಹರಿ­ಹಾಯ್ದರು.

ಇದೇ ವೇಳೆ ಗಾಂಧಿ ಕುಟುಂಬದ ವಿರುದ್ಧ ತೀಕ್ಷ್ಣ ವಾಗ್ದಾಳಿ ನಡೆಸಿದ ನಾಯ್ಡು, ‘ಕುಟುಂಬದ ಜತೆ ದೇಶದ ವಿನಾಶ, ಕಾಂಗ್ರೆಸ್‌ ವಿನಾಶ’ ಎಂದು ಛೇಡಿಸಿದರು. ಇದು ಕಾಂಗ್ರೆಸ್ಸಿಗರನ್ನು ತೀವ್ರವಾಗಿ ಕೆರಳಿ­ಸಿತು. ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತ ಅವರು ಹೊರ ನಡೆದರು.

ಗೊಂದಲ ಪರಿಹಾರಕ್ಕೆ ಈ ಕುರಿತು  ಮಾನವ ಸಂಪನ್ಮೂಲ ಸಚಿವಾಲಯ­ದಿಂದ ಹೆಚ್ಚಿನ ಮಾಹಿತಿ ಕೋರಿದ್ದೇನೆ ಎಂದು ಸ್ಪೀಕರ್‌ ಸುಮಿತ್ರಾ ಮಹಾಜನ್ ತಿಳಿಸಿದರು. ಡಿ.25ರಂದು ಶಾಲೆ, ಕಾಲೇಜು ಹಾಗೂ ವಿಶ್ವವಿದ್ಯಾಲಯ­ಗಳಿಗೆ  ರಜೆ ನೀಡಲಾಗಿದೆ ಎಂದು ಮಾನವ ಸಂಪನ್ಮೂಲ ಸಚಿವೆ ಸ್ಮೃತಿ ಇರಾನಿ ಸ್ಪಷ್ಟಪಡಿಸಿದರು.

ADVERTISEMENT

ಸುತ್ತೋಲೆಯಲ್ಲಿ ಏನಿದೆ?
ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಹಾಗೂ ಹಿಂದೂ ಮಹಾಸಭಾ ನಾಯಕ ಮದನ್ ಮೋಹನ್‌ ಮಾಳವೀಯ ಜನ್ಮದಿನದ ಪ್ರಯುಕ್ತ ಡಿಸೆಂಬರ್‌ 25ರಂದು ‘ಉತ್ತಮ ಆಡಳಿತ ದಿನ’ ಆಚರಿಸಲು ಸರ್ಕಾರ ನಿರ್ಧರಿಸಿದೆ.

ಅಂದು ಕೇಂದ್ರೀಯ ಹಾಗೂ ನವೋದಯ ಹಾಗೂ ಸಿಬಿಎಸ್‌ಇ ಶಾಲೆಗಳು  ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆ, ರಸಪ್ರಶ್ನೆ ಸ್ಪರ್ಧೆ ಹಾಗೂ ಸರ್ಕಾರದ  ಉತ್ತಮ ಆಡಳಿತ ಕುರಿತು ಕಿರುಚಿತ್ರ ಪ್ರದರ್ಶನ ಏರ್ಪಡಿಸುವಂತೆ  ಕೇಂದ್ರ ಮಾನವ ಸಂಪನ್ಮೂಲ ಸಚಿ­ವಾಲಯ ಸುತ್ತೋಲೆ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.