ADVERTISEMENT

ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ ಸಿದ್ಧ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 19:29 IST
Last Updated 11 ಫೆಬ್ರುವರಿ 2017, 19:29 IST
ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ ಸಿದ್ಧ
ಕ್ಷಿಪಣಿ ನಿರೋಧಕ ವ್ಯವಸ್ಥೆ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ ಸಿದ್ಧ   

ಭುವನೇಶ್ವರ: ಭಾರತದತ್ತ ಶತ್ರು ದೇಶಗಳು ಹಾರಿಸುವ ಖಂಡಾಂತರ ಕ್ಷಿಪಣಿಯನ್ನು ಸುಮಾರು ಎರಡು ಸಾವಿರ ಕಿ.ಮೀ ದೂರದಲ್ಲೇ ಗುರುತಿಸಿ, ಧ್ವಂಸ ಮಾಡುವ ‘ಪೃಥ್ವಿ ಡಿಫೆನ್ಸ್ ವೆಹಿಕಲ್’ (ಪಿಡಿವಿ) ವ್ಯವಸ್ಥೆಯನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಶನಿವಾರ ಯಶಸ್ವಿಯಾಗಿ ಪರೀಕ್ಷಿಸಿದೆ.

‘ಬೆಳಿಗ್ಗೆ 7.45ಕ್ಕೆ ಬಂಗಾಳ ಕೊಲ್ಲಿಯ ಅಜ್ಞಾತ ದ್ವೀಪವೊಂದರ ಬಳಿ ಲಂಗರು ಹಾಕಿದ್ದ ಹಡಗಿನ ಮೂಲಕ ಒಂದು ಖಂಡಾಂತರ ಕ್ಷಿಪಣಿಯನ್ನು ಉಡಾವಣೆ ಮಾಡಲಾಯಿತು. ಅದನ್ನು ಗುರುತಿಸಿದ ಇನ್ಫ್ರಾರೆಡ್ ಉಪಗ್ರಹವು, ಸಂವಹನ ಉಪಗ್ರಹಕ್ಕೆ ಆ ಬಗ್ಗೆ ಸಂಕೇತ ರವಾನಿಸಿತು. ಸಂವಹನ ಉಪಗ್ರಹವು ಆ ಸಂಕೇತವನ್ನು ಪಿಡಿವಿಗೆ ರವಾನಿಸಿತು.

ತಕ್ಷಣವೇ ಕಾರ್ಯಪ್ರವೃತ್ತವಾದ ಪಿಡಿವಿ ಪೃಥ್ವಿ ಕ್ಷಿಪಣಿಯನ್ನು ಉಡಾವಣೆ ಮಾಡಿತು. ನಂತರ ಪೃಥ್ವಿ ಕ್ಷಿಪಣಿ ಗುರಿ ಕ್ಷಿಪಣಿಯನ್ನು ಆಗಸದಲ್ಲೇ ಧ್ವಂಸ ಮಾಡಿತು. ಈ ವ್ಯವಸ್ಥೆ ಸೇವೆಗೆ ನಿಯೋಜಿತವಾಗಲು ಸಿದ್ಧವಿದೆ’ ಎಂದು ಡಿಆರ್‌ಡಿಒ ತಿಳಿಸಿದೆ.



ಕ್ಷಿಪಣಿ ಲಾಂಚರ್‌: ಬೆಳಗಾವಿಯಲ್ಲಿ ತಯಾರಿ
ಬೆಳಗಾವಿ:
ಒಡಿಶಾದಲ್ಲಿ ಪರೀಕ್ಷಾರ್ಥವಾಗಿ ಶನಿವಾರ ಹಾರಾಟ ನಡೆಸಿದ ಕ್ಷಿಪಣಿಯ ಲಾಂಚರ್‌ ನಗರದ ಸರ್ವೊಕಂಟ್ರೊಲ್ಸ್‌ ಏರೊಸ್ಪೇಸ್‌ ಇಂಡಿಯಾ ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಲ್ಲಿ ತಯಾರಾಗಿದೆ.

‘ನಗರದ ಉದ್ಯಮಬಾಗ್‌ ಹಾಗೂ ಹತ್ತರಗಿ ಬಳಿ ಕಂಪೆನಿಯ ತಯಾರಿಕಾ ಘಟಕಗಳಿವೆ. ಹೈಡ್ರಾಲಿಕ್‌ ಎಲೆಕ್ಟ್ರಾನಿಕ್ಸ್‌ ತಂತ್ರಜ್ಞಾನದಿಂದ, ಕ್ಷಿಪಣಿ ನೆಗೆತಕ್ಕೆ ಅಗತ್ಯವಾದ ಲಾಂಚರ್‌ ಅನ್ನು ಆರು ತಿಂಗಳಲ್ಲಿ ಸಿದ್ಧಪಡಿಸಲಾಗಿದೆ’ ಎಂದು ಕಂಪೆನಿಯ ಅಧಿಕಾರಿ ಸತೀಶ ಪಾಟೀಲ ತಿಳಿಸಿದರು. 

‘ತಂತ್ರಜ್ಞ ವಿಜಯ ಪ್ರಭು ಮಾರ್ಗದರ್ಶನದಲ್ಲಿ ಜ್ಯೋತಿಬಾ ಸೊನುಲ್ಕರ್‌, ಪರಶುರಾಮ ಪೋತೆ, ಸಂತೋಷ ಗುರವ, ಇತರರು ಈ ತಂತ್ರಜ್ಞಾನ ಅಭಿವೃದ್ಧಿ ಪಡಿಸಿದ್ದರು’ ಎಂದು ದೂರವಾಣಿ ಮೂಲಕ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT