ADVERTISEMENT

ಖುರ್ಷಿದ್‌ ವಿರುದ್ಧ ಪ್ರಧಾನಿಗೆ ರೆಹಮಾನ್‌ ಖಾನ್‌ ದೂರು

ಸರ್ಕಾರಿ ಹಜ್‌ ಕೋಟಾ ಕಡಿತ

​ಪ್ರಜಾವಾಣಿ ವಾರ್ತೆ
Published 2 ಮೇ 2014, 19:42 IST
Last Updated 2 ಮೇ 2014, 19:42 IST

ನವದೆಹಲಿ: ಸರ್ಕಾರಿ ಹಜ್‌ ಕೋಟಾ ಕಡಿಮೆಗೊಳಿಸಿ ಖಾಸಗಿ ಟೂರ್‌ ಆಪರೇಟರ್‌ಗಳಿಗೆ ಹಂಚಿಕೆ ಮಾಡಿರುವ ವಿದೇಶಾಂಗ ಸಚಿವ ಸಲ್ಮಾನ್‌ ಖುರ್ಷಿದ್‌ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿ­ರುವ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಕೆ. ರೆಹಮಾನ್‌ ಖಾನ್‌ ಅವರು ಪ್ರಧಾನಿಯವರಿಗೆ ಈ ಕುರಿತು ದೂರು ಸಲ್ಲಿಸಿದ್ದಾರೆ.

ಹಜ್‌ ಕೋಟಾ ಕಡಿಮೆಗೊಳಿಸಿ­ರುವುದರಿಂದ ಬಡ ಮುಸ್ಲಿಮರಿಗೆ ಅನ್ಯಾಯವಾಗಲಿದೆ ಎಂದು ಹೇಳಿದ್ದಾರೆ.
ಬಹುತೇಕ ಬಡ ಮುಸ್ಲಿಮರು ಸರ್ಕಾರದ ಸಬ್ಸಿಡಿ ಮೇಲೆ ಹಜ್‌ಗೆ ತೆರಳುತ್ತಾರೆ. ಆದರೆ, ವಿದೇಶಾಂಗ ವ್ಯವಹಾ­ರಗಳ ಸಚಿವಾಲಯದ ಇತ್ತೀಚಿನ ತೀರ್ಮಾನದಿಂದ ಆ ವರ್ಗ­ದವರಿಗೆ ಅನ್ಯಾಯವಾಗುತ್ತದೆ ಮತ್ತು ಅವರಲ್ಲಿ ಅಸಮಾಧಾನಕ್ಕೆ ಕಾರಣ­ವಾಗುತ್ತದೆ ಎಂದೂ ಖಾನ್‌ ತಿಳಿಸಿದ್ದಾರೆ.

2013ನೇ ಸಾಲಿನಲ್ಲಿ ಭಾರತದ ಹಜ್‌ ಯಾತ್ರಿಕರ ಕೋಟಾ 1.44 ಲಕ್ಷ ಇತ್ತು. ವಿದೇಶಾಂಗ ಇಲಾಖೆಯು, ಅಖಿಲ ಭಾರತ ಹಜ್‌ ಸಮಿತಿಗೆ (ಎಐಎಚ್‌ಸಿ) 1.30 ಲಕ್ಷ ಯಾತ್ರಿಕರಿಗೆ ಕೋಟಾ ನಿಗದಿಪಡಿಸಿತ್ತು. ಉಳಿದ 14,000 ಖಾಸಗಿ ಟೂರ್‌ ಆಪರೇಟರ್‌­ಗಳಿಗೆ ಹಂಚಿಕೆ ಮಾಡಿತ್ತು. ಆದರೆ, ಈ ವರ್ಷ ಸರ್ಕಾರಿ ಕೋಟಾ ಕಡಿಮೆಗೊಳಿಸಿ ಖಾಸಗಿಯವರಿಗೆ 44,000 ನೀಡಲಾಗಿದೆ. ಇದರಿಂದ ಸುಮಾರು 30,000ಕ್ಕೂ ಅಧಿಕ ಬಡ ಮುಸ್ಲಿಮರಿಗೆ ಹಜ್‌ಗೆ ತೆರಳಲು ಸಾಧ್ಯವಾಗುವುದಿಲ್ಲ ಎಂದು ಪ್ರಧಾನಿಯವರಿಗೆ ಬರೆದ ಪತ್ರದಲ್ಲಿ ವಿವರಿಸಿದ್ದಾರೆ.

ಪ್ರಧಾನಿಯವರು ಕೂಡಲೇ ಮಧ್ಯ ಪ್ರವೇಶಿಸಿ ಕಳೆದ ವರ್ಷದ ನೀತಿಯನ್ನೆ ಮುಂದುವರಿಸಲು ವಿದೇಶಾಂಗ ಇಲಾಖೆಗೆ ಸೂಚಿಸಬೇಕು ಎಂದು ಕೋರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.