ADVERTISEMENT

ಗಡಿಯಲ್ಲಿ ಗುಂಡಿನ ಚಕಮಕಿ: ಯೋಧ ಸಾವು

ಪಾಕಿಸ್ತಾನದಿಂದ ಮತ್ತೆ ಕದನ ವಿರಾಮ ಉಲ್ಲಂಘನೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2014, 19:30 IST
Last Updated 22 ಜುಲೈ 2014, 19:30 IST

ಜಮ್ಮು (ಪಿಟಿಐ/ಐಎಎನ್‌ಎಸ್‌): ಪಾಕಿಸ್ತಾನ ಸೇನಾಪಡೆಗಳು ಭಾರತದ ಗಡಿಯೊಳಗೆ ನುಸುಳುಕೋರರನ್ನು ನುಗ್ಗಿಸಲು ಮಂಗಳವಾರ ನಡೆಸಿದ ಎರಡು  ಯತಗಳನ್ನು   ಭದ್ರತಾ ಪಡೆಗಳು ವಿಫಲಗೊಳಿಸಿವೆ.

ಗಡಿಯಲ್ಲಿ  ಹಲವು ತಾಸು ನಿರಂತರವಾಗಿ ನಡೆದ ಗುಂಡಿನ ಕಾಳಗದಲ್ಲಿ ಒಬ್ಬ ನುಸುಳುಕೋರ ಹಾಗೂ  ಭಾರತೀಯ ಯೋಧ  ಸಾವ­ನ್ನಪ್ಪಿ­ದ್ದಾರೆ. ಮೂವರು ಯೋಧರು ಗುಂಡೇಟಿನಿಂದ ಗಾಯಗೊಂಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರ  ಅಖ್ನೂರ್‌ ವಲಯದ ಪಲ್ಲಾನವಾಲಾ ಪ್ರದೇಶದ ಗಡಿ ನಿಯಂತ್ರಣ ರೇಖೆಯಲ್ಲಿ   ಮಂಗಳವಾರ ಬೆಳಗಿನ ಜಾವ  ಈ ಘಟನೆ ನಡೆದಿದೆ. ಪಾಕಿಸ್ತಾನದ  ಅಪ್ರಚೋದಿತ ಗುಂಡಿನ ದಾಳಿಗೆ  ತಕ್ಕ ಪ್ರತ್ಯುತ್ತರ ನೀಡಿದ ರಕ್ಷಣಾ ಪಡೆಗಳು ನುಸುಳುಕೋರರನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿವೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

ಸದ್ಯ ಗುಂಡಿನ ಚಕಮಕಿ ನಿಂತಿದ್ದು ನುಸುಳುಕೋರರಿಗಾಗಿ ತೀವ್ರ ಶೋಧ  ಮುಂದುವರೆದಿದೆ. ಕಳೆದ ರಾತ್ರಿ ಗಡಿಯಲ್ಲಿ ನಡೆದ ಇನ್ನೂ ಎರಡು ಯತ್ನಗಳನ್ನು ಗಡಿಭದ್ರತಾ ಪಡೆಗಳು ವಿಫಲಗೊಳಿಸಿವೆ. 

19 ಬಾರಿ ಉಲ್ಲಂಘನೆ
ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಮೂರು ತಿಂಗಳಲ್ಲಿ ಪಾಕಿಸ್ತಾನ ಒಟ್ಟು 19 ಬಾರಿ ಕದನ ವಿರಾಮ ಉಲ್ಲಂಘಿ­ಸಿದೆ ಎಂದು ರಕ್ಷಣಾ ಸಚಿವ ಅರುಣ್‌ ಜೇಟ್ಲಿ ರಾಜ್ಯಸಭೆಗೆ ತಿಳಿಸಿದರು.

ಈ ಎಲ್ಲ ದಾಳಿಗಳನ್ನೂ ಸೇನಾಪಡೆ­ಗಳು ಸಮರ್ಥವಾಗಿ ಹಿಮ್ಮೆಟ್ಟಿಸಿವೆ ಎಂದರು. ‘ಪ್ರತಿ ಬಾರಿಯೂ  ಯುಪಿಎ ಸರ್ಕಾ­ರವನ್ನು ದುರ್ಬಲ ಎಂದು ಟೀಕಿಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಏಕೆ ಪಾಕಿಸ್ತಾನಕ್ಕೆ ತಲೆ ಬಾಗುತ್ತಿದ್ದಾರೆ?’ ಎಂದು ರಾಜ್ಯಸಭೆಯ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಜಾದ್‌ ಕೆಣಕಿದರು.

ಇದಕ್ಕೆ ತೀಕ್ಷ್ಣವಾಗಿ ಉತ್ತರಿಸಿದ ಜೇಟ್ಲಿ ‘ನಾವು ತಲೆ ತಗ್ಗಿಸಿಲ್ಲ. ಈ ಸರ್ಕಾರ ಯಾರನ್ನೂ ತಲೆ ತಗ್ಗಿಸಲು  ಬಿಡುವುದಿಲ್ಲ’ ಎಂದರು.

ಹತ್ತು ಪಾಕ್‌ ಯೋಧರನ್ನು ಕೊಲ್ಲಿ– ಶಿವಸೇನೆಪಾಕಿಸ್ತಾನದ ಜತೆಗಿನ ಎನ್‌ಡಿಎ ಸರ್ಕಾರದ ಶಾಲು ಮತ್ತು ಸೀರೆ ರಾಯಭಾರವನ್ನು  ಕಟುವಾಗಿ ಟೀಕಿಸಿರುವ ಬಿಜೆಪಿ ಮಿತ್ರ ಪಕ್ಷ ಶಿವಸೇನಾ , ಪಾಕ್‌ ಜತೆ ಮಾತುಕತೆ ನಡೆಸದಂತೆ ತಾಕೀತು ಮಾಡಿದೆ.


‘ನಮ್ಮ ಯೋಧರ ಹೆಣದ ಮೇಲೆ ಪಾಕ್‌ ಜತೆ ಮಾತುಕತೆ ನಡೆಸಬೇಕಾ? ಎಂದು ಸರ್ಕಾರದ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿರುವ ಅವರು,  ಪಾಕಿಸ್ತಾನ ನಮ್ಮ ಒಬ್ಬ ಯೋಧನನ್ನು ಕೊಂದರೆ ನಾವು ಅವರ ಹತ್ತು ಯೋಧರನ್ನು ಕೊಲ್ಲಬೇಕು’ ಎಂದು ಶಿವಸೇನೆಯ ಸಂಸದ ಸಂಜಯ್‌ ರಾವುತ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಿರುವ ಪಾಕಿಸ್ತಾನದ  ವಿರುದ್ಧ ಪ್ರತೀಕಾರ ತೆಗೆದುಕೊಳ್ಳುವುದನ್ನು ಬಿಟ್ಟು,  ಅದೆಂಥ ಶಾಲು, ಸೀರೆ ರಾಜಕೀಯ.  ಹಿಂದಿನ ಸರ್ಕಾರ ಮತ್ತು ಎನ್‌ಡಿಎ ಸರ್ಕಾರಕ್ಕೂ ಇರುವ ವ್ಯತ್ಯಾಸ ಏನು’ ಎಂದು ರಾವುತ್‌ ಬಹಿರಂಗವಾಗಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT