ADVERTISEMENT

ಗಮನ ಸೆಳೆದ ಚನ್ನಪಟ್ಟಣದ ಗೊಂಬೆಗಳು

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 10:38 IST
Last Updated 26 ಜನವರಿ 2015, 10:38 IST

ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಸೋಮವಾರ ನಡೆದ 66ನೇ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ ಕರ್ನಾಟಕದ ಚನ್ನಪಟ್ಟಣದ ಗೊಂಬೆಗಳ ಸ್ತಬ್ಧಚಿತ್ರ ಎಲ್ಲರ ಗಮನ ಸೆಳೆಯಿತು.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಬಡಗಿ ಕಲಾಕೃತಿಯ ಕೆತ್ತನೆ ಮಾಡುತ್ತಿರುವ ಹಾಗೂ ಆತನ ಪತ್ನಿ ಕಲಾಕೃತಿಗೆ ಬಣ್ಣ ಹಚ್ಚುತ್ತಿರುವ ಗೊಂಬೆಗಳು, ಹಿಂದೆ ಮರದ ಕುದುರೆಯ ಮೇಲೆ ಆಡುತ್ತಿರುವ ಪುಟಾಣಿಯ ಆಟದ ಪ್ರತಿಕೃತಿ, ಅದರ ಹಿಂದೆ ಸುತ್ತುವ ಗಿಲಕಿ ಮತ್ತು ಹಿಂದು– ಮುಂದು ತೂಗಾಡುವ ಕೀಲು ಕುದುರೆಗಳ ಗೊಂಬೆಗಳು ನೋಡುಗರನ್ನು ಬೆರಗುಗೊಳಿಸಿದವು.

ಸ್ತಬ್ಧಚಿತ್ರದ ಎಡ ಮತ್ತು ಬಲ ಭಾಗಗಳಲ್ಲಿ ಸಾಲಾಗಿ ನಿಂತಂತಿದ್ದ ಗೊಂಬೆಗಳು ನೆರದಿದ್ದವರ ಕಣ್ಸೆಳೆದರೆ, ಮುಂಭಾಗದಲ್ಲಿ ಜೋಡಿಸಿದ್ದ ಆಡಿಕೆಗಳ ಮಾದರಿಗಳು ಮಕ್ಕಳನ್ನು ಆಕರ್ಷಿಸಿದವು. ಸ್ತಬ್ಧಚಿತ್ರ ಗಣ್ಯರು ಕುಳಿತಿದ್ದ ವೇದಿಕೆಯ ಮುಂಭಾಗದಲ್ಲಿ ಸಾಗುತ್ತಿದ್ದ ವೇಳೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ತಮ್ಮ ಎಡಭಾಗದಲ್ಲಿ ಕುಳಿತಿದ್ದ ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರಿಗೆ ಸ್ತಬ್ಧಚಿತ್ರದ ಬಗ್ಗೆ ವಿವರಣೆ ನೀಡುತ್ತಿದ್ದುದು ವಿಶೇಷವಾಗಿತ್ತು.

ADVERTISEMENT

ಕರ್ನಾಟಕದ ಸ್ತಬ್ಧಚಿತ್ರಗಳ ಜತೆಗೆ ಆಂಧ್ರಪ್ರದೇಶ, ಗುಜರಾತ್‌, ಜಮ್ಮು– ಕಾಶ್ಮೀರ, ಉತ್ತರ ಪ್ರದೇಶ, ಮಹಾರಾಷ್ಟ್ರ ರಾಜ್ಯಗಳ ಸ್ತಬ್ಧಚಿತ್ರಗಳು ರಾಜಪಥದಲ್ಲಿ ಸಾಗಿ ತಮ್ಮ ರಾಜ್ಯಗಳ ಪ್ರಾತಿನಿಧಿತ್ವವನ್ನು ಮೆರೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.