ADVERTISEMENT

ಗುಂಡಿನ ಕಾಳಗ: ಯೋಧರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2014, 7:20 IST
Last Updated 9 ಅಕ್ಟೋಬರ್ 2014, 7:20 IST

ಜಮ್ಮು(ಪಿಟಿಐ): ಗಡಿಯಲ್ಲಿ ಭಾರತ-ಪಾಕಿಸ್ತಾನದ ಸೇನೆಗಳ ನಡುವೆ ಬುಧವಾರ ಇಡೀ ರಾತ್ರಿ ನಡೆದ ಭಾರಿ ಗುಂಡಿನ ಕಾಳಗದಲ್ಲಿ ಜಮ್ಮು, ಸಾಂಬಾ ಹಾಗೂ ಕಥುವಾ ಜಿಲ್ಲೆ ವ್ಯಾಪ್ತಿಯಲ್ಲಿ ಮೂವರು ಗಡಿ ಭದ್ರತಾ ಪಡೆ (ಬಿಎಸ್ ಎಫ್) ಯೋಧರು ಸೇರಿದಂತೆ ಎಂಟು ಮಂದಿ ಗಾಯಗೊಂಡಿದ್ದಾರೆ.

ಗುರುವಾರವೂ ಗುಂಡಿನ ಕಾಳಗ ಮುಂದುವರಿದಿದೆ. ಪಾಕ್ ಸೇನೆಯ ಗುಂಡಿನ ಮೊರೆತವನ್ನು ಅಡಗಿಸಲು ಭಾರತೀಯ ಸೇನೆ ಪ್ರತಿ ದಾಳಿ ನಡೆಸುತ್ತಿದೆ. 

ಅಪ್ರಚೋದಿತ ದಾಳಿ ಮುಂದುವರಿಸಿರುವ ಪಾಕಿಸ್ತಾನದ ಸೇನೆ, ಭಾರತದ ಸೇನಾ ಠಾಣೆಗಳನ್ನು ಗುರಿಯಾಗಿರಿಸಿ ರಾತ್ರಿ 2.45ರ ಸುಮಾರಿಗೆ ಸಣ್ಣ ಪ್ರಮಾಣದ ಪಿರಂಗಿ, ಷೆಲ್ ಹಾಗೂ ಭಾರಿ ಪ್ರಮಾಣದ ಸ್ವಯಂ ಚಾಲಿತ ಶಸ್ತ್ರಾಸ್ತ್ರಗಳನ್ನು ಬಳಸಿ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆ ತಕ್ಕ ಉತ್ತರ ನೀಡುತ್ತಿದೆ ಎಂದು ಬಿಎಸ್ ಎಫ್ ನ ವಕ್ತಾರರು ಗುರುವಾರ ತಿಳಿಸಿದ್ದಾರೆ.

ಸಾಂಬಾ, ಹೀರಾನಗರ್, ರಾಮ್ ಗರ್, ಆರ್ ಎಸ್ ಪುರ ಮತ್ತಿತರ ಹಳ್ಳಿಗಳು ಹಾಗೂ 60 ಬಿಎಸ್ ಎಫ್ ಠಾಣೆಗಳು ದಾಳಿಗೆ ಒಳಗಾಗಿವೆ ಎಂದು ಅವರು ಹೇಳಿದ್ದಾರೆ.

ಪಾಕಿಸ್ತಾನದ ರೇಂಜರ್ ಗಳು 192 ಕಿ.ಮೀ. ಉದ್ದದ ಗಡಿಯಲ್ಲಿನ 90 ಹಳ್ಳಿಗಳು ಹಾಗೂ 60 ಸೇನಾ ಠಾಣೆಗಳನ್ನು ಗುರಿಯಾಗಿರಿಸಿಕೊಂಡು ದಾಳಿ ನಡೆಸುತ್ತಿವೆ. ಗಡಿ ಗ್ರಾಮಗಳ 30 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ. ಅ. 1 ರಿಂದ ಈ ವರೆಗೆ ಪಾಕಿಸ್ತಾನ ನಡೆಸಿರುವ ದಾಳಿಯಿಂದ ಭಾರತದ ಎಂಟು ಮಂದಿ ಸಾವಿಗೀಡಾಗಿದ್ದು, ಭದ್ರತಾ ಪಡೆಯ ಒಂಬತ್ತು ಸಿಬ್ಬಂದಿ ಸೇರಿದಂತೆ ಒಟ್ಟು 80 ಜನ ಗಾಯಗೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.