ADVERTISEMENT

ಗುಜರಾತ್,ಬಂಗಾಳದಲ್ಲಿ ಮಳೆ ಆರ್ಭಟ

​ಪ್ರಜಾವಾಣಿ ವಾರ್ತೆ
Published 29 ಜುಲೈ 2015, 20:55 IST
Last Updated 29 ಜುಲೈ 2015, 20:55 IST

ಅಹಮದಾಬಾದ್‌/ಕೋಲ್ಕತ್ತ (ಪಿಟಿಐ): ಭಾರಿ  ಮಳೆಯಿಂದಾಗಿ ಗುಜರಾತ್‌ನಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗಿದೆ.  ಪಶ್ಚಿಮಬಂಗಾಳದಲ್ಲಿ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.

ಮಳೆ ಸಂಬಂಧಿ ಘಟನೆಗೆ ಗುಜರಾತ್‌ನಲ್ಲಿ ಕನಿಷ್ಠ 22 ಮಂದಿ ಬಲಿಯಾಗಿದ್ದಾರೆ.  ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ  ಹಾಗೂ ವಾಯುಪಡೆ ಹೆಲಿಕಾಪ್ಟರ್‌ಗಳು ರಕ್ಷಣೆ ಮತ್ತು ಪರಿಹಾರ ಕಾರ್ಯದಲ್ಲಿ ತೊಡಗಿವೆ.

ವರುಣನ ಆರ್ಭಟಕ್ಕೆ ರಾಜ್ಯದ ಬನಸ್ಕಾಂತ ಜಿಲ್ಲೆಯ ಜನ ತತ್ತರಿಸಿಹೋಗಿದ್ದಾರೆ. ಪ್ರವಾಹ ಭೀತಿಯ ಕಾರಣ ಇಲ್ಲಿ 2,500 ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. 

ದಕ್ಷಿಣ ಗುಜರಾತ್‌ನ ಸೂರತ್‌ ಜಿಲ್ಲೆಯಲ್ಲಿ ಸುಮಾರು ನೂರಕ್ಕೂ ಹೆಚ್ಚು ಜನರನ್ನು ತೆರವುಗೊಳಿಸಲಾಗಿದೆ ಎಂದು ರಾಜ್ಯ ವಿಪತ್ತು ನಿಯಂತ್ರಣ ಕೊಠಡಿ ಅಧಿಕಾರಿ ಟಿ.ಬಿ.ಪಟೇಲ್‌ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ಬನಸ್ಕಾಂತ ಜಿಲ್ಲೆಯ ವಡಗಾಂವ್‌ನಲ್ಲಿ ಕಳೆದ 24 ತಾಸುಗಳಲ್ಲಿ 495 ಮಿ.ಮೀ ಮಳೆಮ ಆಗಿದೆ.  ದೀಸಾ– 410 ಮಿ.ಮೀ, ಪಾಲಂಪುರ–317 ಮಿ.ಮೀ, ಅಮೀರ್‌ಗಡ– 314 ಮಿ.ಮೀ  ಮಳೆ ಆಗಿದೆ.

ಕೋಲ್ಕತ್ತ ವರದಿ: ಪಶ್ಚಿಮಬಂಗಾಳದ  ಹೌರಾ,  ಉತ್ತರ 24 ಪರಗಣ ಹಾಗೂ ನಾಡಿಯಾ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಮಳೆಗೆ ನೂರಾರು ಮನೆಗಳು ಹಾಗೂ ಗುಡಿಸಲುಗಳಿಗೆ ಹಾನಿಯಾಗಿದೆ.

ಬಿರುಗಾಳಿಯಿಂದಾಗಿ ಹೌರಾ ಜಿಲ್ಲೆಯ  ಬಡಂತಲಾ ಗ್ರಾಮದಲ್ಲಿ ಮನೆಗಳು ನೆಲಮಸವಾಗಿದ್ದು, 200ಕ್ಕೂ ಹೆಚ್ಚು ಜನ ಬೀದಿಗೆ ಬಂದಿದ್ದಾರೆ. ಇವರೆಲ್ಲ ನಿರ್ಮಾಣ ಹಂತದ ಹಾಸ್ಟೆಲ್‌, ಸ್ಥಳೀಯ ಕಾರ್ಖಾನೆಗಳಲ್ಲಿ ಆಶ್ರಯ ಪಡೆದಿದ್ದಾರೆ. ಉತ್ತರ 24 ಪರಗಣ ಜಿಲ್ಲೆಯಲ್ಲಿ ನೂರಕ್ಕೂ ಹೆಚ್ಚು ಗುಡಿಸಲುಗಳು ನಾಶವಾಗಿವೆ.

ಒಡಿಶಾದಲ್ಲೂ ಪ್ರವಾಹ
ಭುವನೇಶ್ವರ: ಉತ್ತರ ಒಡಿಶಾ ಜಿಲ್ಲೆಗಳಲ್ಲಿ ಪ್ರವಾಹ ಉಲ್ಬಣಗೊಂಡಿದ್ದು, ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸುವಂತೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಆದೇಶ ನೀಡಿದ್ದಾರೆ. ಬುದ್ಧಬಾಲಂಗ್‌, ಬೈತರಿಣಿ,  ಸುವರ್ಣರೇಖಾ ನದಿಗಳಿಗೆ ಪ್ರವಾಹ ಬಂದಿದೆ. ಜನರನ್ನು ತೆರವುಗೊಳಿಸುವಂತೆ ಜಾಜ್‌ಪುರ, ಭದ್ರಕ್‌, ಬಾಲಸೋರ್‌ ಹಾಗೂ  ಮಯೂರ್‌ಭಂಜ್‌ ಜಿಲ್ಲಾಡಳಿತಕ್ಕೆ ಸೂಚನೆ ನೀಡಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT