ADVERTISEMENT

ಗುಜರಾತ್‌ಗೆ ಮೋದಿ ಭಾವಪೂರ್ಣ ವಿದಾಯ

​ಪ್ರಜಾವಾಣಿ ವಾರ್ತೆ
Published 21 ಮೇ 2014, 19:30 IST
Last Updated 21 ಮೇ 2014, 19:30 IST

ಗಾಂಧಿನಗರ (ಪಿಟಿಐ):  ಅವು ಭಾವನೆ­ಗಳು ಏಕತ್ರಗೊಂಡ ಕ್ಷಣಗಳು! ವಿಧಾನಸಭೆಯಲ್ಲಿ ಪಕ್ಷಭೇದ­ವೆಂಬುದು ಮರೆತು ಹೋದ ಗಳಿಗೆಗಳು ಅವು! ಅಲ್ಲಿದ್ದುದು ಪರಸ್ಪರ ಮೆಚ್ಚುಗೆ, ಅಭಿನಂದನೆ, ರಾಜ್ಯ– ರಾಷ್ಟ್ರದ ಅಭ್ಯುದಯ ಕುರಿತ ಮಾತುಗಳೇ....

ದೇಶದ ಅಧಿಕಾರದ ನೊಗ ಹೊರಲು ಹೊರಟಿರುವ ತಮಗೆ ಬೀಳ್ಕೊಡುಗೆ ನೀಡಲು ಬುಧವಾರ ಕರೆಯಲಾಗಿದ್ದ ಗುಜರಾತ್‌ ವಿಧಾನಸಭಾ ವಿಶೇಷ ಅಧಿವೇಶನದಲ್ಲಿ ನರೇಂದ್ರ ಮೋದಿ ಅವರು ತುಂಬ ಭಾವುಕರಾಗಿ ಮಾತನಾಡಿದ ವಿಶೇಷ ಸನ್ನಿವೇಶ ಇದು.

12 ವರ್ಷ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಮೋದಿ ಅವರು ಮುಖ್ಯಮಂತ್ರಿ ಯಾಗಿ ಕಟ್ಟಕಡೆಯ ದಿನ ಮಾತನಾಡಿ, ‘ನನ್ನ ನಿರ್ಗಮನದ ನಂತರ ಕೂಡ ರಾಜ್ಯವು ಅಭಿವೃದ್ಧಿಯಲ್ಲಿ ಮುಂಚೂಣಿ­ಯಲ್ಲೇ ಇರಬೇಕು’ ಎಂದು ಆಶಿಸಿದರು.

‘ನಾನು ಈಗ ಇಲ್ಲಿಂದ ಹೊರಡು­ತ್ತಿದ್ದೇನೆ. ಯಾವಾಗ ಇಲ್ಲಿಗೆ ವಾಪಸ್‌ ಬರುತ್ತೇನೆಂಬುದು ಗೊತ್ತಿಲ್ಲ. ನಾನು ಕಾರ್ಯ ನಿರ್ವಹಿಸುವ ವೇಳೆ ನಿರೀಕ್ಷೆ­ಯಷ್ಟು ಕೆಲಸ ಮಾಡಿಲ್ಲದಿದ್ದರೆ ಅಥವಾ ಏನಾದರೂ ತಪ್ಪು ಎಸಗಿದ್ದರೆ ಅದನ್ನು ಮನ್ನಿಸಿ’ ಎಂದು  ಮನವಿ ಮಾಡಿದರು.

‘ಇವತ್ತಿನ ದಿನ ಎಲ್ಲವನ್ನೂ ಮನ್ನಿಸುವ ದಿನ. ನಾನು ನಿಮ್ಮೆಲ್ಲರನ್ನೂ ಹಾಗೂ ಸದನವನ್ನು ಗೌರವಿಸುತ್ತೇನೆ. ವಿಶೇಷ­ವಾಗಿ ಪ್ರತಿಪಕ್ಷವನ್ನು ಅಭಿನಂದಿಸುತ್ತೇನೆ’ ಎಂದು ಹೇಳುವಾಗ ಅವರ ಕಂಠ ಭಾವಪ್ರವಾಹದಿಂದ ಬಿಗಿದುಕೊಂಡಿತು.

‘ನೀವು ರಾಜ್ಯದ ಅಭಿವೃದ್ಧಿಯನ್ನು ಹೇಗೆ ಮುಂದುವರಿಸಿಕೊಂಡು ಹೋಗು­ತ್ತೀರಿ ಎಂಬುದರ ಮೇಲೆ ನನ್ನ ಯಶಸ್ಸು ಅವಲಂಬಿಸಿದೆ. ನಾನು ಪ್ರಧಾನಿಯಾದ ನಂತರ ಗುಜರಾತೀಯರು ನನ್ನ ಮೇಲೆ ಮೊದಲ ಹಕ್ಕು ಹೊಂದಿರುವುದು ಸಹಜ. ಆದರೆ, ಪ್ರಧಾನಿಯಾಗಿ ಹೊಸ ಜವಾಬ್ದಾರಿ­ಯೊಂದಿಗೆ, ಬೇರೆ ರಾಜ್ಯದವರಿಗೆ ತಾರತಮ್ಯವಾಗ­ದಂತೆಯೂ ನೋಡಿ­ಕೊಳ್ಳಬೇಕಿದೆ’ ಎಂದರು.

ಮಾತು ಮುಂದುವರಿಸಿದ ಅವರು, ‘ಪ್ರಧಾನಿ ಕಚೇರಿಯಲ್ಲಿ ಇನ್ನು ಮುಂದೆ ಗುಜರಾತಿ ನುಡಿ ಕೂಡ ಕೇಳಿಬರುತ್ತದೆ’ ಎಂದು ಲಘು ದಾಟಿಯಲ್ಲಿ ಹೇಳಿದರು. ‘ಯಾರೇ ಆಗಲಿ ಬೇರೆಡೆಗೆ ಹೋಗು­ವಾಗ ತನ್ನೊಂದಿಗೆ ಹಲವು ಸಂಗತಿಗಳನ್ನು ಹೊತ್ತು ಹೋಗುತ್ತಾರೆ. ಅದೇ ರೀತಿ, ಪ್ರಧಾನಿ ಕಚೇರಿಗೂ ಈಗ ಗುಜರಾತಿ ನುಡಿ ಹಾಗೂ ಗುಜರಾತಿ ಖಾದ್ಯ ತಲು­ಪುತ್ತದೆ’ ಎಂದರು.

ಪ್ರಧಾನಿ ಕಚೇರಿಯಲ್ಲಿ ಗುಜರಾತಿ­ಗಳಿಗೆ ವಿಶೇಷ ಟೇಬಲ್‌ ಕಲ್ಪಿಸುವಂತೆ ಪ್ರತಿಪಕ್ಷ ನಾಯಕ ಶಂಕರ್‌ಸಿಂಗ್‌ ವಘೇಲಾ ನೀಡಿದ ಸಲಹೆಗೆ ಪ್ರತಿಕ್ರಿಯಿ­ಸುತ್ತಾ ಮೋದಿ ಮತ್ತೊಮ್ಮೆ ಭಾವೋದ್ವೇಗಗೊಂಡರು.  

ಜಂಟಿ ಅಧಿವೇಶನ ಉದ್ದೇಶಿಸಿದ ನಂತರ ರಾಜಭವನಕ್ಕೆ ತೆರಳಿ ರಾಜ್ಯ­ಪಾಲರಾದ ಕಮಲಾ ಬೆನಿವಾಲ್‌ ಅವರಿಗೆ ರಾಜೀನಾಮೆ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.