ADVERTISEMENT

ಗೂಗಲ್‌ ವಿರುದ್ಧ ತನಿಖೆ

ಕಾನೂನು ಉಲ್ಲಂಘಿಸಿ ನಕ್ಷೆ ರಚನೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 7:51 IST
Last Updated 28 ಜುಲೈ 2014, 7:51 IST

ನವದೆಹಲಿ (ಪಿಟಿಐ): ಅಮೆರಿಕ ಮೂಲದ ಅಗ್ರಮಾನ್ಯ ಅಂತರ್ಜಾಲ ಕಂಪೆನಿ ‘ಗೂಗಲ್‌’ ಕಂಪೆನಿಯು ಏರ್ಪಡಿಸಿದ್ದ ‘ಮ್ಯಾಪಥಾನ್‌ 2013’ ಸ್ಪರ್ಧೆಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ಸಂಸ್ಥೆಯು (ಸಿಬಿಐ) ಪ್ರಾಥಮಿಕ ತನಿಖೆಗೆ ಚಾಲನೆ ನೀಡಿದೆ.

ಸೂಕ್ಷ್ಮ ರಕ್ಷಣಾ ನೆಲೆಗಳು ಸೇರಿದಂತೆ ಆಯಕಟ್ಟಿನ ತಾಣಗಳನ್ನು ಕಾನೂನು ಉಲ್ಲಂಘಿಸಿ ನಕ್ಷೆಯಲ್ಲಿ ಬಿಂಬಿಸಿರುವ ಆರೋಪವನ್ನು ಕಂಪೆನಿ ಮೇಲೆ ಹೊರಿಸಲಾಗಿದೆ.

ಕಂಪೆನಿಯು 2013ರ ಫೆಬ್ರುವರಿ– ಮಾರ್ಚ್‌ನಲ್ಲಿ ನಕ್ಷೆ ರಚಿಸುವ ಸ್ಪರ್ಧೆ ಏರ್ಪಡಿಸಿತ್ತು. ಹೀಗೆ ಸ್ಪರ್ಧೆ ಏರ್ಪಡಿ­ಸುವ ಮುನ್ನ ಅದು ರಾಷ್ಟ್ರದ ಅಧಿಕೃತ ಭೂಪಟ  ರಚನಾ ಸಂಸ್ಥೆ­ಯಾದ ‘ಭಾರತೀಯ ಸರ್ವೇಕ್ಷಣಾ ಸಂಸ್ಥೆ’ಯ ಅನುಮತಿ ಪಡೆ­ದಿ­ರಲಿಲ್ಲ. ಗೂಗಲ್‌ ಸಂಸ್ಥೆಯು ಸ್ಪರ್ಧೆಯ ಭಾಗವಾಗಿ, ನಾಗ­ರಿಕರಿಗೆ ತಮ್ಮ ನೆರೆಹೊರೆಯ ತಾಣಗಳನ್ನು ನಕ್ಷೆಯಲ್ಲಿ ದಾಖ­ಲಿ­­ಸುವಂತೆ ಕೋರಿತ್ತು. ವಿಶೇಷವಾಗಿ, ಆಸ್ಪತ್ರೆಗಳು ಮತ್ತು ರೆಸ್ಟೋರೆಂಟ್‌­ಗಳನ್ನು ಆದ್ಯತೆಯ ಮೇಲೆ ದಾಖಲಿಸು­ವಂತೆಯೂ ಅದು ಕೋರಿತ್ತು.

ಈ ಸ್ಪರ್ಧೆಯಡಿ ಚಿತ್ರಿಸಲಾದ ನಕ್ಷೆಗಳಲ್ಲಿ ಆಯಕಟ್ಟಿನ ರಕ್ಷಣಾ ತಾಣಗಳ ಬಗ್ಗೆ ವಿವರಗಳಿರುವುದು ಕೇಂದ್ರ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯಡಿ ಕಾರ್ಯ­ನಿರ್ವಹಿ­ಸುವ ಸರ್ವೆ ಸಂಸ್ಥೆಯ ಗಮನಕ್ಕೆ ಬಂತು. ನಂತರ ಸರ್ವೆ ಸಂಸ್ಥೆು ಗೂಗಲ್‌ ಕಂಪೆನಿಯನ್ನು ಸಂಪರ್ಕಿಸಿ, ‘ಸಾರ್ವಜನಿಕ ಮುಕ್ತ ಮಾಹಿತಿ’ಗೆ ಹೊರತಾದ ಇಂತಹ ಸೂಕ್ಷ್ಮ ಅಂಶಗಳು ಹೇಗೆ ಸಿಕ್ಕವು ಎಂಬ ಬಗ್ಗೆ .ಮಾಹಿತಿ ಹಂಚಿಕೊಳ್ಳಲು ಕೋರಿತ್ತು.

ಸರ್ವೆ ಸಂಸ್ಥೆಯು ಇದನ್ನು ಈಗಾ­ಗಲೇ ಗೃಹ ಸಚಿವಾಲಯದ ಗಮನಕ್ಕೂ ತಂದಿದೆ. ಕಾನೂನಿನ ಅನ್ವಯ, ‘ನಿಯಂತ್ರಿತ ಪಟ್ಟಿ’ಯಡಿ ಬರುವ ಸೂಕ್ಷ್ಮ ತಾಣಗಳ ಸರ್ವೆ ಹಾಗೂ ಅವನ್ನು ನಕ್ಷೆಯಲ್ಲಿ ಬಿಂಬಿಸುವ ಅಧಿಕಾರ ಇರುವುದು ತನಗೆ ಮಾತ್ರ.  ಸರ್ಕಾರದ ಬೇರ್‍ಯಾವುದೇ ಸಂಸ್ಥೆಗಾಗಲೀ ಅಥವಾ ಖಾಸಗಿ ಸಂಸ್ಥೆಗಾಗಲೀ ಅಥವಾ ನಾಗರಿಕರಿಗಾಗಲೀ ನಕ್ಷೆ ಬಿಡಿಸುವ ಅಧಿಕಾರ ಇಲ್ಲ’ ಎಂದು ಅದು ಒತ್ತಿ ಹೇಳಿದೆ.

ರಾಷ್ಟ್ರೀಯ ನಕ್ಷೆ ನೀತಿ– 2005ರ ಪ್ರಕಾರ, ‘ಇಡೀ ದೇಶದ ಭೂಪ್ರದೇಶ ನಕ್ಷೆ ಸಿದ್ಧಪಡಿಸುವುದು, ನಿರ್ವಹಣೆ  ಮಾಡು­ವುದು ಮತ್ತು  ಅದನ್ನು ಪ್ರಚುರ­ಪಡಿಸುವುದು ಸರ್ವೆ ಸಂಸ್ಥೆಯ ಜವಾ­ಬ್ದಾರಿ­ಯಾಗಿದೆ’ ಎಂದೂ ಅದು ಸಮರ್ಥಿಸಿಕೊಂಡಿದೆ.

ಈ ಬಗ್ಗೆ ಪ್ರತಿಕ್ರಿಯಿಸಿದ ಗೂಗಲ್‌ ಇಂಡಿಯಾ ಸಂಸ್ಥೆಯು, ‘ನಾವು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಂಪರ್ಕದಲ್ಲಿ­ದ್ದೇವೆ. ರಾಷ್ಟ್ರೀಯ ಕಟ್ಟುಪಾಡು ಮತ್ತು ಭದ್ರತೆಯ ವಿಷಯವನ್ನು ಬಲು ಗಂಭೀರವಾಗಿ ತೆಗೆದುಕೊಳ್ಳಲಾಗು­ವುದು.  ಗೋಪ್ಯತೆಗೆ ಸಂಬಂಧಿಸಿದ ಸಂಗತಿಗಳ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ಈ ಸಂದರ್ಭದಲ್ಲಿ ನಾವು ಹೇಳಬಹುದಾ­ದದ್ದು ಬೇರೇನೂ ಇಲ್ಲ’ ಎಂದು ಹೇಳಿದೆ.

ಮೊದಲಿಗೆ ಈ ಪ್ರಕರಣದ ಬಗ್ಗೆ ದೆಹಲಿ  ಪೊಲೀಸರು ತನಿಖೆ ನಡೆಸಿದ್ದರು. ಆದರೆ ಗೂಗಲ್‌ ಸಂಸ್ಥೆಯು ಅಮೆರಿಕ ಮೂಲದ ಕಂಪೆನಿಯಾಗಿದ್ದು ತನಿಖಾ ಪ್ರಕ್ರಿಯೆಯಲ್ಲಿ ಅಲ್ಲಿನ ಎಫ್‌ಬಿಐ ನೆರವು ಪಡೆಯಬೇಕಾಗಿ ಬರುವ ಸಾಧ್ಯತೆಯನ್ನು ಗಣನೆಗೆ ತೆಗೆದುಕೊಂಡು, ಹೆಚ್ಚಿನ ತನಿಖೆಯನ್ನು ಸಿಬಿಐಗೆ ವರ್ಗಾಯಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.