ADVERTISEMENT

ಗೆಳೆತನ: ಮೋದಿ ಹೇಳಿಕೆ ಶುದ್ಧ ಸುಳ್ಳು- ಅಹಮದ್ ಪಟೇಲ್

'ಎಂಬತ್ತರ ದಶಕದಲ್ಲಿ ಜೊತೆಯೂಟ ನಿಜ'

​ಪ್ರಜಾವಾಣಿ ವಾರ್ತೆ
Published 2 ಮೇ 2014, 10:54 IST
Last Updated 2 ಮೇ 2014, 10:54 IST

ನವದೆಹಲಿ (ಪಿಟಿಐ): ಬಿಜೆಪಿಯ ಪ್ರಧಾನ ಮಂತ್ರಿ ಅಭ್ಯರ್ಥಿ  ಜೊತೆಗಿನ ತನ್ನ 'ಸ್ನೇಹ' ಕುರಿತು ಸ್ವತಃ ನರೇಂದ್ರ ಮೋದಿ ಅವರು ನೀಡಿದ್ದ ಹೇಳಿಕೆಯನ್ನು 'ಬುಡರಹಿತ ಮತ್ತು ಸಂಪೂರ್ಣ ಸುಳ್ಳು' ಎಂಬುದಾಗಿ ಹೇಳುವ ಮೂಲಕ ಸೋನಿಯಾ ಗಾಂಧಿ ಅವರ ರಾಜಕೀಯ ಸಹಾಯಕ ಅಹಮದ್ ಪಟೇಲ್ ಅವರು ದೂರದರ್ಶನದಲ್ಲಿ ಪ್ರಸಾರವಾದ ನರೇಂದ್ರ ಮೋದಿ ಸಂದರ್ಶನ ಕುರಿತ ವಿವಾದಕ್ಕೆ ಶುಕ್ರವಾರ ಇನ್ಷಷ್ಟು ತುಪ್ಪ ಸುರಿದರು.

ತಮ್ಮ ಭೇಟಿ ಮತ್ತು ಸ್ನೇಹ ಬಾಂಧವ್ಯ ಕುರಿತ ಮೋದಿ ಅವರ 'ಅಸಂಬದ್ಧ' ಪ್ರತಿಪಾದನೆಯು ಚುನಾವಣೆಯ ಮಧ್ಯದಲ್ಲಿ ಜನರನ್ನು ಗೊಂದಲಕ್ಕೀಡುಮಾಡುವ  ಒಂದು 'ರಾಜಕೀಯ ಸಾಹಸ'ವಾಗಿದ್ದು, ಗುಜರಾತ್ ಮುಖ್ಯಮಂತ್ರಿಯಿಂದ ತಾವು ಏನಾದರೂ ಲಾಭ ಪಡೆದುಕೊಂಡ ಸಾಕ್ಷ್ಯಾಧಾರವಿದ್ದರೆ ಸಾರ್ವಜನಿಕ ಬದುಕಿನಿಂದಲೇ ನಿವೃತ್ತನಾಗುವೆ ಎಂದು ಅಹಮದ್ ಪಟೇಲ್ ಹೇಳಿದರು.

'ಚುನಾವಣೆಯ ಮಧ್ಯೆ ಜನರಲ್ಲಿ ಗೊಂದಲ ಹುಟ್ಟು ಹಾಕಲು ನಡೆಸಿರುವ 'ರಾಜಕೀಯ ಸಾಹಸ' ಇದು. ಮೋದಿ ಅವರಿಗೆ ತಮ್ಮ ಪಕ್ಷದೊಳಗೇ ಸ್ನೇಹ ಹಸ್ತ ಚಾಚಿಕೊಳ್ಳಲು ಸಾಧ್ಯವಾಗದೇ ಇರುವಾಗ ನನ್ನ ಜೊತೆಗೆ ಸ್ನೇಹ ಸಂಪಾದನೆ ಹೇಗೆ ಸಾಧ್ಯ? ಎಂದು ಅವರು ಪ್ರಶ್ನಿಸಿದರು.

ಮೋದಿ ಅವರನ್ನು ಅವರ ಕಚೇರಿಯಲ್ಲಾಗಲೀ, ಮನೆಯಲ್ಲಾಗಲೀ ನಾನು ಭೇಟಿ ಮಾಡಿದ್ದೇ ಇಲ್ಲ, ಅಥವಾ ಗುಜರಾತ್ ಮುಖ್ಯಮಂತ್ರಿ ಯಾವುದೇ ಅನುಕೂಲ ಪಡೆದುಕೊಂಡಿರುವುದೂ ಇಲ್ಲ ಎಂದು ಹೇಳಿದ ಪಟೇಲ್ ಎಂಬತ್ತರ ದಶಕದಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಮೋದಿಯವರು ತಮ್ಮ ಬಳಿಗೆ ಊಟಕ್ಕಾಗಿ ಬರುತ್ತಿದ್ದುದು ಹೌದು ಎಂದು ಹೇಳಿದರು.

'ಇದರ ಹೊರತಾಗಿ, ಬೇರಾವುದೇ ಕಾಲದಲ್ಲಿಯೂ ಅದರಲ್ಲೂ 2002ರ ಗುಜರಾತ್ ಕೋಮು ಗಲಭೆಗಳ ಬಳಿಕ ನಮ್ಮಿಬ್ಬರ ಮಧ್ಯೆ ಮುಖಾಮುಖಿ ಭೇಟಿ ನಡೆದದ್ದೇ ಇಲ್ಲ' ಎಂದು ಸೋನಿಯಾ ಆಪ್ತ ಸ್ಪಷ್ಟ ಪಡಿಸಿದರು.

ದೂರದರ್ಶನಕ್ಕೆ ನೀಡಿದ್ದ ಸಂದರ್ಶನವೊಂದರಲ್ಲಿ ಬಿಜೆಪಿಯ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಅವರು 'ಅಹಮದ್ ಭಾಯಿ ಅವರು ಕಾಂಗ್ರೆಸ್ಸಿನಲ್ಲಿರುವ ನನ್ನ ಅತ್ಯುತ್ತಮ ಗೆಳೆಯರಲ್ಲಿ ಒಬ್ಬರು. ಆದರೆ ಈಗ ಅವರು ಹಾಗಿಲ್ಲ. ಬಹುಶಃ ಅವರಿಗೆ ಏನೋ ತೊಂದರೆ ಇದೆ. ಅವರು ನನ್ನಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ದೂರವಾಣಿ  ಕರೆಗಳನ್ನೂ ಸ್ವೀಕರಿಸುವುದಿಲ್ಲ. ನಾನು ಅವರ ಮನೆಗೇ ಊಟ ಮಾಡಲು ಹೋಗುತ್ತಿದ್ದೆ. ಅದೊಂದು ಒಳ್ಳೆಯ ಗೆಳೆತನವಾಗಿತ್ತು. ಆ ವೈಯಕ್ತಿಕ ಗೆಳೆತನ ಉಳಿಯುವುದು ಎಂದು ನಾನು ನಂಬುವೆ' ಎಂದು ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.