ADVERTISEMENT

ಗೋರಕ್ಷಣೆಯನ್ನು ಬೆಂಬಲಿಸುತ್ತೇವೆ, ಆದರೆ ಇದರ ಹೆಸರಲ್ಲಿ ನಡೆಯುವ ಹಿಂಸಾಚಾರಗಳನ್ನು ಬೆಂಬಲಿಸುವುದಿಲ್ಲ

​ಪ್ರಜಾವಾಣಿ ವಾರ್ತೆ
Published 21 ಮೇ 2017, 11:10 IST
Last Updated 21 ಮೇ 2017, 11:10 IST
ನಿತಿನ್ ಗಡ್ಕರಿ
ನಿತಿನ್ ಗಡ್ಕರಿ   

ನವದೆಹಲಿ: ಗೋವುಗಳ ರಕ್ಷಣೆ ಮಾಡುವ ಕಾರ್ಯವನ್ನು ಬಿಜೆಪಿ ಮತ್ತು ಆರ್‍ಎಸ್‍ಎಸ್ ಬೆಂಬಲಿಸುತ್ತದೆ. ಆದರೆ ಅದರ ಹೆಸರಿನಲ್ಲಿ ನಡೆಯುವ ಯಾವುದೇ ಹಿಂಸಾಚಾರವನ್ನು ನಾವು ಬೆಂಬಲಿಸುವುದಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಗೋವುಗಳನ್ನು ರಕ್ಷಿಸುವ ಕಾರ್ಯಗಳನ್ನು ನಾವು ಬೆಂಬಲಿಸುತ್ತೇವೆ. ಗೋಹತ್ಯೆ ಮಾಡಬಾರದು. ಆದರೆ ಗೋವುಗಳ ರಕ್ಷಣೆ ಹೆಸರಿನಲ್ಲಿ ಹಿಂಸಾಚಾರ ನಡೆದರೆ ಅದನ್ನು ನಮ್ಮ ಪಕ್ಷ, ಸಚಿವರು ಮತ್ತು ಸರ್ಕಾರ ಬೆಂಬಲಿಸುವುದಿಲ್ಲ ಎಂದಿದ್ದಾರೆ ಗಡ್ಕರಿ.

ಕಾನೂನನ್ನು ಕೈಗೆ ತೆಗೆದುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಈ ರೀತಿ ಹಿಂಸಾಚಾರ ಮಾಡುವವರ ವಿರುದ್ಧ  ಕ್ರಮ ಕೈಗೊಳ್ಳಬೇಕು. ಗೋರಕ್ಷಣೆ ಹೆಸರಲ್ಲಿ ಹಿಂಸಾಚಾರ ಮಾಡಿದ ಕೆಲವರು ತಾವು ಬಿಜೆಪಿಯವರು ಎಂದು ಹೇಳಿಕೊಳ್ಳುತ್ತಿರುವುದನ್ನು ನಾನು ಟೀವಿಯಲ್ಲಿ ನೋಡಿದ್ದೇನೆ. ಆದರೆ ಆ ವ್ಯಕ್ತಿಗೆ ಬಿಜೆಪಿಯೊಂದಿಗೆ ಸಂಬಂಧವಿರುವುದಿಲ್ಲ, ನಮಗೂ ಆತನೊಂದಿಗೆ ಸಂಬಂಧವಿರಲ್ಲ. ಆದರೂ ಎಲ್ಲ ತಪ್ಪುಗಳನ್ನು ನಮ್ಮ ಮೇಲೆಯೇ ಹೊರಿಸಲಾಗುತ್ತದೆ.

ADVERTISEMENT

ಇತ್ತೀಚೆಗೆ ನಡೆದ ಘಟನೆಯೊಂದರಲ್ಲಿ ಗೋರಕ್ಷಕರು ಕೇಸರಿ ಬಣ್ಣದ ಬಟ್ಟೆ ತೊಟ್ಟುಕೊಂಡು ಬಂದಿದ್ದಲ್ಲದೆ, ಹಿರಿಯ ನಾಯಕರೊಂದಿಗೆ ಅವರಿಗೆ ನಂಟು ಇದೆ ಎಂದು ಹೇಳಿದ್ದರು. ಆದರೆ ನಾವು ಯಾವುದೇ ರೀತಿಯ ಹಿಂಸಾಚಾರವನ್ನು ಬೆಂಬಲಿಸುವುದಿಲ್ಲ ಎಂದು ಗಡ್ಕರಿ ಪುನರುಚ್ಛರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.