ADVERTISEMENT

ಚಿದಂಬರಂ ಪಾತ್ರದ ತನಿಖೆ: ಸಿಬಿಐ

ಬಹುಕೋಟಿ ಏರ್‌ಸೆಲ್‌–ಮ್ಯಾಕ್ಸಿಸ್‌ ಒಪ್ಪಂದ ಹಗರಣ

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2014, 19:30 IST
Last Updated 22 ಸೆಪ್ಟೆಂಬರ್ 2014, 19:30 IST

ನವದೆಹಲಿ (ಪಿಟಿಐ): ಹತ್ತು ವರ್ಷಗಳ ಹಿಂದಿನ ಏರ್‌ಸೆಲ್‌–ಮ್ಯಾಕ್ಸಿಸ್‌ ಬಹು­ಕೋಟಿ ಒಪ್ಪಂದದ ಹಗರಣದಲ್ಲಿ  ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ   ಪಾತ್ರದ ಬಗ್ಗೆ ತನಿಖೆ ನಡೆ­ಸು­ತ್ತಿರುವುದಾಗಿ ಸಿಬಿಐ ಸೋಮವಾರ 2ಜಿ ತರಂಗಾಂತರ ಹಗರಣದ ತನಿಖೆ ನಡೆಸುತ್ತಿರುವ ವಿಶೇಷ ನ್ಯಾಯಾಲಯಕ್ಕೆ ತಿಳಿಸಿದೆ.

2006ರಲ್ಲಿ ನಡೆದ ಅಂದಾಜು ₨3,500 ಕೋಟಿ ಬಂಡವಾಳದ ಏರ್‌ಸೆಲ್‌–ಮ್ಯಾಕ್ಸಿಸ್‌ ಒಪ್ಪಂದಕ್ಕೆ  ಚಿದಂಬರಂ  ತಮ್ಮ ಅಧಿಕಾರ ವ್ಯಾಪ್ತಿ ಮೀರಿ ವಿದೇಶ ಹೂಡಿಕೆ ಉತ್ತೇಜನ ಮಂಡಳಿ (ಎಫ್‌ಐಪಿಬಿ )ಮೂಲಕ ಅನುಮತಿ ಕೊಟ್ಟಿರುವುದು ತಪ್ಪು ಎಂದು ಸಿಬಿಐ ತನಿಖಾಧಿಕಾರಿ ತಿಳಿಸಿದರು.

ಹಣಕಾಸು ಸಚಿವರಿಗೆ ಗರಿಷ್ಠ 600 ಕೋಟಿ ರೂಪಾಯಿ ಒಪ್ಪಂದಕ್ಕೆ ಮಾತ್ರ ಅನುಮತಿ ನೀಡುವ ಅಧಿಕಾರವಿರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತದ ಒಪ್ಪಂದಗಳಿಗೆ ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿಯ ಅನುಮತಿ ಕಡ್ಡಾಯ.

ಆರ್ಥಿಕ ವ್ಯವಹಾರಗಳ ಮೇಲಿನ ಸಂಪುಟ ಸಮಿತಿ ಗಮನಕ್ಕೆ ತರದೆ  ₨ 3,500 ಕೋಟಿ ರೂಪಾಯಿ  ಮೊತ್ತದ ಏರ್‌ಸೆಲ್‌–ಮ್ಯಾಕ್ಸಿಸ್‌ ಒಪ್ಪಂದಕ್ಕೆ ಚಿದಂಬರಂ ಹೇಗೆ ಎಫ್‌ಐಪಿಬಿಗೆ ಅನುಮತಿ ನೀಡಿದರು ಎಂಬ ಬಗ್ಗೆ ತನಿಖೆ  ನಡೆಯುತ್ತಿದ್ದು, ಇನ್ನೂ ಪೂರ್ಣಗೊಂಡಿಲ್ಲ ಎಂದು ಸಿಬಿಐ ವಕೀಲ ಕೆ.ಕೆ. ಗೊಯಲ್‌, ನ್ಯಾಯಾಲಯಕ್ಕೆ ತಿಳಿಸಿದರು.

3,500 ಕೋಟಿ ರೂಪಾಯಿ ಮೊತ್ತದ ಈ ಪ್ರಕರಣವನ್ನು ಸಂಪುಟ ಸಮಿತಿಗೆ ವಹಿಸಬೇಕಾಗಿತ್ತು. ವಿದೇಶ ಹೂಡಿಕೆ ಉತ್ತೇಜನ ಮಂಡಳಿಯ (ಎಫ್‌ಐಪಿಬಿ) ಅನುಮತಿ ಸಂಬಂಧಿಸಿದಂತೆ ಮಾತ್ರ ಸಿಬಿಐ ತನಿಖೆ ನಡೆಸುತ್ತಿದೆ ಎಂದರು.

ದೂರಸಂಪರ್ಕ ಮಾಜಿ ಸಚಿವ ಕಲಾನಿಧಿ ಮಾರನ್‌ ಅವರ ಪತ್ನಿ ಕಾವೇರಿ  ಮಾರನ್ ಅವರ ಪಾತ್ರದ ಬಗ್ಗೆ ನ್ಯಾಯಾಲಯ ಪ್ರಶ್ನಿಸಿತು. ಈ ಒಪ್ಪಂದದಲ್ಲಿ ಅವರ ನೇರ ಪಾತ್ರದ ಕುರಿತು ಯಾವುದೇ ದಾಖಲೆ ದೊರೆತಿಲ್ಲ. ಈ ಬಗ್ಗೆಯೂ ತನಿಖೆ ನಡೆಸುವುದಾಗಿ ಸಿಬಿಐ ಅಧಿಕಾರಿಗಳು ತಿಳಿಸಿದರು.
ಪ್ರಕರಣದ ಮುಂದಿನ ವಿಚಾರಣೆ ಅಕ್ಟೋಬರ್‌ 13ಕ್ಕೆ ನಡೆಯಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.