ADVERTISEMENT

ಚುನಾವಣಾ ಪ್ರಕ್ರಿಯೆ ಮೇಲೆ ಪ್ರಭಾವ ಬೀರಿದರೆ ಕಠಿಣ ಕ್ರಮ: ಫೇಸ್‌ಬುಕ್‌ಗೆ ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ

ಏಜೆನ್ಸೀಸ್
Published 22 ಮಾರ್ಚ್ 2018, 14:38 IST
Last Updated 22 ಮಾರ್ಚ್ 2018, 14:38 IST
ರವಿಶಂಕರ್ ಪ್ರಸಾದ್ (ಸಂಗ್ರಹ ಚಿತ್ರ)
ರವಿಶಂಕರ್ ಪ್ರಸಾದ್ (ಸಂಗ್ರಹ ಚಿತ್ರ)   

ನವದೆಹಲಿ: ದೇಶದ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಿದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ಗೆ ಮಾಹಿತಿ ತಂತ್ರಜ್ಞಾನ (ಐಟಿ) ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್ ಬಳಕೆದಾರರ ವೈಯಕ್ತಿಕ ಮಾಹಿತಿ ಸೋರಿಕೆಯಾಗಿದೆ ಎಂಬ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವರು, ಭಾರತೀಯರ ಮಾಹಿತಿ ಸೋರಿಕೆಯಾಗಿದ್ದರೆ ಸಹಿಸಲಾಗದು ಎಂದು ಹೇಳಿದ್ದಾರೆ.

ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ‘ಪತ್ರಿಕಾ ಸ್ವಾತಂತ್ರ್ಯವನ್ನು ನಾವು ಸಂಪೂರ್ಣವಾಗಿ ಬೆಂಬಲಿಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಅಬಿಪ್ರಾಯ ಹಂಚಿಕೊಳ್ಳುವುದಕ್ಕೆ ನಮ್ಮ ಬೆಂಬಲವಿದೆ. ಆದರೆ, ಫೇಸ್‌ಬುಕ್ ಸೇರಿದಂತೆ ಯಾವುದೇ ಸಾಮಾಜಿಕ ಜಾಲತಾಣಗಳು ಭಾರತದ ಚುನಾವಣಾ ಪ್ರಕ್ರಿಯೆಯ ಮೇಲೆ ಪರಿಣಾಮ ಬೀರಲು ಯತ್ನಿಸಿದರೆ ಸಹಿಸಲಾಗದು’ ಎಂದು ಹೇಳಿದ್ದಾರೆ.

ADVERTISEMENT

20 ಕೋಟಿ ಭಾರತೀಯರು ಫೇಸ್‌ಬುಕ್‌ ಬಳಸುತ್ತಿರುವ ಬಗ್ಗೆ ಉಲ್ಲೇಖಿಸಿದ ರವಿಶಂಕರ್ ಪ್ರಸಾದ್, ‘ಕಂಪೆನಿಗೆ ಅತಿ ದೊಡ್ಡ ಮಾರುಕಟ್ಟೆ ಭಾರತವಾಗಿದೆ. ಫೇಸ್‌ಬುಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾರ್ಕ್ ಜುಕರ್‌ಬರ್ಗ್‌ ಸಹ ಐಟಿ ಕಾಯ್ದೆ ವ್ಯಾಪ್ತಿಗೆ ಒಳಪಡುತ್ತಾರೆ’ ಎಂದು ಎಚ್ಚರಿಕೆ ನೀಡಿದ್ದಾರೆ.

‘ಮಿಸ್ಟರ್ ಮಾರ್ಕ್‌ ಜುಕರ್‌ ಬರ್ಗ್‌ ಅವರೇ, ಭಾರತದಲ್ಲಿ ಐಟಿ ಸಚಿವರು ಇದ್ದಾರೆ ಎಂಬುದನ್ನು ನೀವು ತಿಳಿದುಕೊಳ್ಳುವುದು ಒಳ್ಳೆಯದು. ಒಂದು ವೇಳೆ, ನಮ್ಮ ದೇಶದವರ ಯಾವುದೇ ಮಾಹಿತಿ ಕದಿಯಲಾಗಿದ್ದರೆ ನಾವು ಸಹಿಸುವುದಿಲ್ಲ. ನಮ್ಮ ಐಟಿ ಕಾಯ್ದೆಯಲ್ಲಿ ಕಠಿಣವಾದ ನಿಯಮಗಳಿವೆ. ಅಗತ್ಯ ಬಿದ್ದಲ್ಲಿ ನಿಮಗೂ ಸಮನ್ಸ್ ನೀಡಿ ಇಲ್ಲಿಗೆ ಕರೆಸಬಹುದಾದ ಸಾಮರ್ಥ್ಯ ಇದೆ’ ರವಿಶಂಕರ್ ಪ್ರಸಾದ್ ಎಚ್ಚರಿಕೆ ನೀಡಿದ್ದಾರೆ.

ಫೇಸ್‌ಬುಕ್ ಮಾಹಿತಿ ಸೋರಿಕೆ ಕುರಿತು ಅಮೆರಿಕದ ತನಿಖಾ ಸಂಸ್ಥೆಯೊಂದು ವರದಿ ಮಾಡಿದ್ದು, ಇದರ ಹಿಂದೆ ಕೇಂಬ್ರಿಡ್ಜ್ ಅನಲಿಟಿಕಾ ಎಂಬ ಸಂಸ್ಥೆಯ ಕೈವಾಡವಿದೆ ಎಂದೂ ಆರೋಪಿಸಿತ್ತು.

ಕಾಂಗ್ರೆಸ್ ವಿರುದ್ಧ ಆರೋಪ: ಫೇಸ್‌ಬುಕ್‌ ಮಾಹಿತಿಯನ್ನು ಕೇಂಬ್ರಿಡ್ಜ್ ಅನಲಿಟಿಕಾ ಸೋರಿಕೆ ಮಾಡಿದ್ದು, 2016ರಲ್ಲಿ ನಡೆದಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲೂ ಪ್ರಭಾವ ಬೀರಿತ್ತು ಎಂಬ ಆರೋಪವಿದೆ. ಅಂತಹ ಸಂಸ್ಥೆ ಜತೆ ಈಗ ಕಾಂಗ್ರೆಸ್‌ ನಂಟು ಹೊಂದಿದೆ ಎಂದು ರವಿಶಂಕರ್ ಪ್ರಸಾದ್ ಆರೋಪಿಸಿದ್ದಾರೆ.

‘ಕಾಂಗ್ರೆಸ್ ದತ್ತಾಂಶ ತಿರುಚುವಿಕೆಯಲ್ಲಿ ತೊಡಗಿದ್ದು, ವೈಯಕ್ತಿಕ ಮಾಹಿತಿ ಕಳ್ಳತನದಲ್ಲಿ ತೊಡಗಿದೆ. 2019ರ ಲೋಕಸಭಾ ಚುನಾವಣೆ ಗೆಲ್ಲಲು ವಾಮಮಾರ್ಗ ಅನುಸರಿಸುತ್ತಿದೆ. ಹಣದ ಆಮಿಷ, ಲಂಚ ಮತ್ತು ವೇಶ್ಯೆಯರ ಮೂಲಕ ಫೇಸ್ ಬುಕ್ ದತ್ತಾಂಶ ಸೋರಿಕೆ ಮಾಡಲಾಗುತ್ತಿದೆ’ ಎಂದು ಸಚಿವರು ಆರೋಪಿಸಿದ್ದಾರೆ.

‘ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿಯವರ ಸಾಮಾಜಿಕ ಜಾಲತಾಣ ಪ್ರೊಫೈಲ್‌ನಲ್ಲಿ ಕೇಂಬ್ರಿಡ್ಜ್ ಅನಲಿಟಿಕಾದ ಪಾತ್ರವೇನು?’ ಎಂದು ಅವರು ಪ್ರಶ್ನಿಸಿದ್ದಾರೆ.

ಮುಂಬರುವ ಕರ್ನಾಟಕ ವಿಧಾನಸಭಾ ಚುನಾವಣೆ, ಗುಜರಾತ್‌ ಮತ್ತು ಈಶಾನ್ಯ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಚುನಾವಣೆಗಳಿಗೆ ಕೇಂಬ್ರಿಡ್ಜ್‌ ಅನಲಿಟಿಕಾದಿಂದ ಎಷ್ಟು ಮಾಹಿತಿ ಪಡೆಯಲಾಗಿದೆ ಎಂಬುದನ್ನು ಕಾಂಗ್ರೆಸ್ ಬಹಿರಂಗಪಡಿಸಲಿ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.