ADVERTISEMENT

ಜನತೆ ಆಶೀರ್ವಾದ ಅಪೇಕ್ಷಿಸಿದ ಉದ್ಧವ್‌

ಮುಖ್ಯಮಂತ್ರಿ ಆಗುವ ಬಯಕೆ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2014, 19:30 IST
Last Updated 13 ಸೆಪ್ಟೆಂಬರ್ 2014, 19:30 IST

ಮುಂಬೈ (ಪಿಟಿಐ): ಇದೇ ಮೊದಲ ಬಾರಿಗೆ ಮುಖ್ಯಮಂತ್ರಿಯಾಗುವ ಬಯ­ಕೆ­ಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಶಿವಸೇನೆ ಮುಖ್ಯಸ್ಥ ಉದ್ಧವ್‌ ಠಾಕ್ರೆ,   ಜನತೆಯ ಆಶೀರ್ವಾದ ಕೋರಿದರು. ‘ಜನರು ನಮ್ಮನ್ನು ಬೆಂಬಲಿಸಿದರೆ ದೂರುಗಳಿಗೆ ಅವಕಾಶ ಇಲ್ಲದ ಆಡಳಿತ ನೀಡುತ್ತೇವೆ’ ಎಂದು ಸುದ್ದಿ ವಾಹಿನಿ­ಯೊಂದು ಆಯೋಜಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಹೇಳಿದರು.

‘ರಾಜ್ಯದಲ್ಲಿ ಕೇಸರಿ ಬಾವುಟ ಹಾರಾಡಬೇಕಿದ್ದರೆ ಅದು ನಮ್ಮ ಪಕ್ಷದಿಂದ ಮಾತ್ರ ಸಾಧ್ಯ. ಅಧಿಕಾರ ದೊರೆತರೆ ಮುಖ್ಯಮಂತ್ರಿ ಹುದ್ದೆ ಶಿವಸೇನೆಗೆ’ ಎಂದು ದೃಢ ದನಿಯಲ್ಲಿ ಹೇಳಿದರು.

ಅವರ ನಾಯಕತ್ವ ಗುಣದ ಬಗ್ಗೆ ಎದ್ದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಉದ್ಧವ್‌, ‘ನಾನು ಬಾಳಾ ಸಾಹೇಬ್‌ (ಬಾಳಾ ಠಾಕ್ರೆ) ಅವರ ಮಗ ಜವಾಬ್ದಾರಿ ಹೊರಲು ಹಿಂಜರಿಯು­ವುದಿಲ್ಲ. ಇದೇ ವೇಳೆಗೆ ಮುಖ್ಯಮಂತ್ರಿ­ಯಾಗಲೇ ಬೇಕು ಎಂಬ ಕನವರಿಕೆಯೂ ನನಗಿಲ್ಲ’ ಎಂದರು.

ಕ್ಷೇತ್ರ ಹೊಂದಾಣಿಕೆ ಕುರಿತಂತೆ ಬಿಜೆಪಿ ಬಗ್ಗೆ ಅಸಮಾಧಾನ­ಗೊಂಡಿ­ರುವ ಉದ್ಧವ್‌, ‘ನಮ್ಮ ಪಕ್ಷದಿಂದ ಯಾವುದೇ ಸಮಸ್ಯೆ ಇಲ್ಲ. ಕ್ಷೇತ್ರ ಹೊಂದಾ­ಣಿಕೆ ಕುರಿತಂತೆ ಬಿಜೆಪಿ ಜೊತೆಗೆ ಮಾತುಕತೆ ಮುಂದುವರಿದಿದೆ. ನಮ್ಮ ಪಕ್ಷದ ಸ್ಪರ್ಧಿಸದ ಕ್ಷೇತ್ರಗಳು ಬಿಜೆಪಿಗೆ ದೊರೆಯಲಿವೆ’ ಎಂದರು.

‘ಪ್ರತಿಯೊಂದು ಪಕ್ಷವು ತನ್ನ ನೆಲೆಯನ್ನು ವಿಸ್ತರಿಸಲು ಬಯಸುತ್ತದೆ. ಆದರೆ, ವಾಸ್ತವ ಅರಿತು ನಿರ್ಧಾರ ಕೈಗೊಳ್ಳಬೇಕು. 25 ವರ್ಷಗಳಿಂದ ಶಿವಸೇನೆ ಮತ್ತು ಬಿಜೆಪಿ ಒಟ್ಟಿಗೆ ಇವೆ. ಆದರೆ, ಮುಖಂಡರು ಅವರವರ ಮಿತಿಯಲ್ಲಿದ್ದರೆ ಒಳಿತು’ ಎಂದರು.

ಶಿವಸೇನೆ ಮುಖವಾಣಿ ‘ಸಾಮ್ನಾ’­ದಲ್ಲಿ ಬಿಜೆಪಿ ಅತಿಯಾದ ಆಸೆ ತೋರಿ­ದಲ್ಲಿ ಮೈತ್ರಿಗೆ ಭಂಗ ಉಂಟಾಗ­ಬ­ಹುದು ಎಂಬ ಎಚ್ಚರಿಕೆಯನ್ನೂ ನೀಡಿದೆ. 2009ರ ಚುನಾವಣೆಯಲ್ಲಿ 160 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಶಿವಸೇನೆ 44ರಲ್ಲಿ ಜಯಗಳಿಸಿತ್ತು. 119 ಕ್ಷೇತ್ರ­ಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 46ರಲ್ಲಿ ಗೆಲುವು ಸಾಧಿಸಿತ್ತು. ಕಳೆದ ಲೋಕ­ಸಭಾ ಚುನಾವಣೆ­ಯಲ್ಲಿ ಬಿಜೆಪಿ 23 ರಲ್ಲೂ, ಶಿವಸೇನೆ 18 ಕ್ಷೇತ್ರಗ­ಳಲ್ಲೂ ಜಯಗಳಿಸಿವೆ.

ಕರ್ನಾಟಕ ಆಕ್ರಮಿತ ಮಹಾರಾಷ್ಟ್ರ
ಅಧಿಕಾರಕ್ಕೆ ಬಂದಲ್ಲಿ ತಮ್ಮ ಸರ್ಕಾರ ಕರ್ನಾಟಕ ಆಕ್ರಮಿತ ಮಹಾರಾಷ್ಟ್ರದ ಭಾಗವನ್ನು ಮತ್ತೆ ಮಹಾರಾಷ್ಟ್ರಕ್ಕೆ ಸೇರ್ಪಡೆ ಮಾಡಲಿದೆ. ಮಹಾರಾಷ್ಟ್ರ ಸರ್ಕಾರ ಇಲ್ಲಿ ನೆಲೆಸಿರುವ ಕನ್ನಡಿಗರಿಗೆ ಮರಾಠಿ ಕಲಿಯುವಂತೆ ಎಂದಿಗೂ ಒತ್ತಾಯಿಸಿಲ್ಲ.  ಎರಡೂ ರಾಜ್ಯಗಳ ನಡುವಿನ ಗಡಿ ತಗಾದೆ ಕಾರಣ, ಈ ಕುರಿತು ಸುಪ್ರೀಂಕೋರ್ಟ್‌ ಅಂತಿಮ ತೀರ್ಪು ನೀಡುವವರೆಗೆ ಕರ್ನಾಟಕದೊಳಗಿನ  ಮರಾಠಿ ಮಾತನಾಡುವ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶ ಎಂದು ಘೋಷಿಸಬೇಕು
–ಉದ್ಧವ್‌ ಠಾಕ್ರೆ, ಶಿವಸೇನೆ ಮುಖ್ಯಸ್ಥ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT