ADVERTISEMENT

ಜಮ್ಮು ಕಣಿವೆಗೆ ಬಸ್ಸು: 17 ಸಾವು, 34 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 20 ಮೇ 2014, 10:52 IST
Last Updated 20 ಮೇ 2014, 10:52 IST

ಬನಿಹಾಲ್ (ರಾಮ್ ಬನ್) (ಪಿಟಿಐ): ರಾಮ್ ಬನ್ ಜಿಲ್ಲೆಯ ಜಮ್ಮು- ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಂಗಳವಾರ ನಸುಕಿನ ವೇಳೆಯಲ್ಲಿ ಬಸ್ಸೊಂದು 400 ಅಡಿ ಆಳದ ಕಣಿವೆಗೆ ಉರುಳಿದ ಪರಿಣಾಮವಾಗಿ 17 ಜನ ಮೃತರಾಗಿ, ಇತರ 34 ಮಂದಿ ಗಾಯಗೊಂಡ ಘಟನೆ ಘಟಿಸಿದೆ.

ಜಮ್ಮುವಿನಿಂದ ಶ್ರೀನಗರದ ಕಡೆಗೆ ಸಾಗುತ್ತಿದ್ದ ಬಸ್ಸು ನಸುಕಿನ 2.30ರ ವೇಳೆಯಲ್ಲಿ ಚಾಲಕನ ನಿರ್ಲಕ್ಷ್ಯದ ಪರಿಣಾಮವಾಗಿ ದಿಗ್ಡೋಲ್ ಪ್ರದೇಶದಲ್ಲಿ ರಸ್ತೆಯಿಂದ ಜಾರಿ ಕಣಿವೆಗೆ ಉರುಳಿತು ಎಂದು ಪೊಲೀಸರು ತಿಳಿಸಿದ್ದಾರೆ.

ಆರು ಮಂದಿ ಮಹಿಳೆಯರು ಮತ್ತು ಒಂದು ಮಗು ಸೇರಿ 17 ಮಂದಿ ದುರ್ಘಟನೆಯಲ್ಲಿ ಅಸು ನೀಗಿದರು, ಇತರ 34 ಮಂದಿ ಗಂಭೀರವಾಗಿ ಗಾಯಗೊಂಡರು ಎಂದು ಅವರು ಹೇಳಿದರು.

ದುರ್ಘಟನೆ ಸಂಭವಿಸಿದ ಬೆನ್ನಲ್ಲೇ ಸೇನೆ, ಪೊಲೀಸರು , ಕ್ಷಿಪ್ರ ಕಾರ್ಯಾಚರಣಾ ತಂಡಗಳು ಹಾಗೂ ಸಿಆರ್ ಪಿ ಎಫ್ ಸಿಬ್ಬಂದಿ ತಂಡಗಳು ಜಿಲ್ಲಾ ಪೊಲೀಸ್ ಉಪ ವರಿಷ್ಠಾಧಿಕಾರಿ ಎಸ್. ಬಾಲಿ ನೇತೃತ್ವದಲ್ಲಿ ಶೋಧ ಹಾಗೂ ರಕ್ಷಣಾ ಕಾರ್ಯಾಚರಣೆ ಆರಂಭಿಸಿದವು.

ಗಾಯಾಳುಗಳನ್ನು ರಾಮ್ ಬನ್ ಜಿಲ್ಲಾ ಆಸ್ಪತ್ರೆಗೆ ಸ್ಥಳಾಂತರಿಸಲಾಗುತ್ತಿದೆ ಎಂದು ಪೊಲೀಸರು ನುಡಿದರು.

ಗಂಭೀರವಾಗಿ ಗಾಯಗೊಂಡಿರುವ 17 ಮಂದಿಯನ್ನುವಿಶೇಷ ಚಿಕಿತ್ಸೆಗಾಗಿ ವಿಮಾನದ ಮೂಲಕ ಜಮ್ಮುವಿನ ಜಿಎಂಸಿ ಆಸ್ಪತ್ರೆಗೆ ಒಯ್ಯಲಾಗುತ್ತಿದೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.