ADVERTISEMENT

ಜಮ್ಮು ಕಾಶ್ಮೀರ ಪ್ರವಾಹ: 107 ಸಾವು

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2014, 16:03 IST
Last Updated 6 ಸೆಪ್ಟೆಂಬರ್ 2014, 16:03 IST

ಜಮ್ಮು, ಶ್ರೀನಗರ(ಪಿಟಿಐ): ಜಮ್ಮು ಮತ್ತು ಕಾಶ್ಮೀರದಲ್ಲಿ ಶನಿವಾರ ಪ್ರವಾಹ ಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದು, ಈ ವರೆಗೆ ಮೃತರಾದವರ ಸಂಖ್ಯೆ 107ಕ್ಕೆ ಏರಿದೆ. 3000 ಹಳ್ಳಿಗಳು ತೊಂದರೆಗೊಳಗಾಗಿವೆ. ರಕ್ಷಣಾ ಕಾರ್ಯಾಚರಣೆಯ ದೋಣಿ ಮುಗುಚಿ ಅಪಾಯದಲ್ಲಿ ಸಿಲುಕಿದ್ದ ಏಳು ಮಂದಿ ಸೇನಾ ಸಿಬ್ಬಂದಿಯನ್ನು ರಕ್ಷಿಸಲಾಗಿದೆ. ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ.

ಗೃಹ ಸಚಿವ ರಾಜನಾಥ್ ಸಿಂಗ್ ಅವರು ಮುಖ್ಯಮಂತ್ರಿ ಓಮರ್ ಅಬ್ದುಲ್ಲಾ ಅವರಿಂದ ಪ್ರವಾಹ ಸ್ಥಿತಿಯ ಕುರಿತು ಮಾಹಿತಿ ಪಡೆದರು. ಪ್ರತಿಕೂಲ ಹವಾಮಾನ ಇದ್ದುದರಿಂದ ಹಾನಿಗೊಳಗಾಗಿರುವ ಸ್ಥಳಗಳ ವೈಮಾನಿಕ ಸಮೀಕ್ಷೆ ನಡೆಸಲು ಸಾಧ್ಯವಾಗಲಿಲ್ಲ.

ಉದಾಮಪುರದಲ್ಲಿ ಎರಡು ಮನೆ ಕುಸಿದು ಮೃತರಾದ ಏಳು ಮಂದಿ ಸೇರಿದಂತೆ ಜಮ್ಮುವಿನಲ್ಲಿ 11 ಜನ ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಗುರುವಾರ ಮದುವೆ ದಿಬ್ಬಣದ ಬಸ್ ನದಿಗೆ ಉರುಳಿ ಕೊಚ್ಚಿಹೋಗಿದ್ದ 63 ಮಂದಿ ಪೈಕಿ 29 ಜನರ ಮೃತ ದೇಹಗಳು ಪತ್ತೆಯಾಗಿವೆ.

ADVERTISEMENT

ಪುಲ್ವಾಮ ಜಿಲ್ಲೆಯಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದ ಒಂಬತ್ತು ಜನ ಸೇನಾ ಸಿಬ್ಬಂದಿ ಇದ್ದ ದೋಣಿಯೊಂದು ಮುಗುಚಿ ಅಪಾಯದಲ್ಲಿ ಸಿಲುಕಿದ್ದರು. ಶನಿವಾರ ನಡೆಸಿದ ರಕ್ಷಣಾ ಕಾರ್ಯಾಚರಣೆ ವೇಳೆ ಏಳು ಮಂದಿ ಸೇನಾ ಸಿಬ್ಬಂದಿಯನ್ನು ರಕ್ಷಿಸಲಾಗಿದ್ದು. ಉಳಿದ ಇಬ್ಬರ ರಕ್ಷಣೆಗೆ ಸಿಬ್ಬಂದಿ ಉಡುಕಾಟ ನಡೆಸಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

‘ಮಳೆಯಿಂದ ಉಂಟಾದ ಪ್ರವಾದಲ್ಲಿ ಅಪಾಯಕ್ಕೆ ಸಿಲುಕಿ ಈವರೆಗೆ 100 ಜನ ಮೃತಪಟ್ಟಿದ್ದಾರೆ. ಜಮ್ಮು ಪ್ರದೇಶ ವ್ಯಾಪ್ತಿಯಲ್ಲಿ 89 ಜನ, ಕಾಶ್ಮೀರ ಕಣಿವೆ ಪ್ರದೇಶದಲ್ಲಿ 11 ಜನ ಮೃತರಾಗಿದ್ದಾರೆ. ಸಾವಿರಾರು ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಮ್ಮು ನಗರಕ್ಕೆ ಸಂಪರ್ಕ ಕಲ್ಪಿಸುವ ನಾಲ್ಕು ಸೇತುವೆಗಳು ಜಲಾವೃತವಾಗಿದ್ದು, ಸಂಪರ್ಕ ತೀವ್ರ ಕಠಿಣವಾಗಿದೆ. ನದಿಗಳು ಅಪಾಯಮಟ್ಟದಲ್ಲಿ ಹರಿಯುತ್ತಿದ್ದು, ಸಾರ್ವಜನಿಕರಿಗೆ ಎಚ್ಚರಿಕೆ ನೀಡಲಾಗಿದೆ. ಮಳೆ ಬಿಡುವು ಕೊಡದೆ ನಿರಂತರವಾಗಿ ಸುರಿಯುತ್ತಿದೆ. ಹೀಗಾಗಿ, ಪರಿಸ್ಥಿತಿ ಅತ್ಯಂತ ಕೆಟ್ಟದಾಗಿದ್ದು, ಸಂಕಷ್ಟದ ಸ್ಥಿತಿ ಎದುರಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ವಾಯು ಸೇನಾ ಪಡೆಯ ಸಿಬ್ಬಂದಿ ಹೆಲಿಕಾಪ್ಟರ್ ಗಳ ಮೂಲಕ ವಿವಿಧ ಸ್ಥಳಗಳಲ್ಲಿ ಸಿಲುಕಿರುವ ಏಳು ಸಾವಿರ ಜನರನ್ನು ಸುರಕ್ಷಿತ ಸ್ಥಳಕ್ಕೆ ಸಾಗಿಸಿದ್ದಾರೆ. ನಿರಾಶ್ರಿತರಿಗೆ ತಾತ್ಕಾಲಿಕ ಟೆಂಟ್ ಗಳನ್ನು ತೆರೆದು ರಕ್ಷಣಾ ಕಾರ್ಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.