ADVERTISEMENT

ಜಯಲಲಿತಾಗೆ ಷರತ್ತುಬದ್ಧ ಜಾಮೀನು

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2014, 11:13 IST
Last Updated 17 ಅಕ್ಟೋಬರ್ 2014, 11:13 IST

ನವದೆಹಲಿ (ಪಿಟಿಐ): ಅಕ್ರಮ ಆಸ್ತಿ ಸಂಪಾದನೆ ಪ್ರಕರಣದಲ್ಲಿ ನಾಲ್ಕು ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿರುವ ತಮಿಳುನಾಡು ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರಿಗೆ ಸುಪ್ರೀಂಕೋರ್ಟ್ ಶುಕ್ರವಾರ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.

ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು ಅವರ ನೇತೃತ್ವದ ನ್ಯಾಯಪೀಠ ಜಯಲಲಿತಾ ಅವರಿಗೆ ಹಾಗೂ ವಿಭಾಗೀಯ ಪೀಠ ಉಳಿದ ಮೂರು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಪುರಸ್ಕರಿಸಿ, ಷರತ್ತುಬದ್ಧ ಜಾಮೀನು ನೀಡಿದೆ.

ಪ್ರಕರಣ ಸಂಬಂಧ ಕರ್ನಾಟಕ ಹೈಕೋರ್ಟ್‌ಗೆ ಎರಡು ತಿಂಗಳೊಳಗೆ ‘ಪೇಪರ್‌ ಬುಕ್‌’ ಸಲ್ಲಿಸುವಂತೆ ಜಯಲಲಿತಾ ಪರ ವಕೀಲರಿಗೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಿದೆ. ಪೇಪರ್‌ ಬುಕ್‌ ಸಲ್ಲಿಸಲು ಎರಡು ತಿಂಗಳಿಗಿಂತ ಒಂದು ದಿನವೂ ಹೆಚ್ಚಿನ ಕಾಲಾವಕಾಶ ನೀಡುವುದಿಲ್ಲ ಎಂದೂ ನ್ಯಾಯಮೂರ್ತಿಗಳು ತಿಳಿಸಿದ್ದಾರೆ.

ADVERTISEMENT

ಇದಲ್ಲದೆ ಮೂರು ತಿಂಗಳಲ್ಲಿ ಈ ಪ್ರಕರಣವನ್ನು ಇತ್ಯರ್ಥಗೊಳಿಸಬೇಕೆಂದು ಕರ್ನಾಟಕ ಹೈಕೋರ್ಟ್‌ಗೆ ಸುಪ್ರೀಂ ನಿರ್ದೇಶನ ನೀಡಿದೆ. ಸುಮಾರು ಒಂದು ಗಂಟೆ ಕಾಲ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳು ಜಯಲಲಿತಾ ಮತ್ತು ಇತರೆ ಮೂರು ಮಂದಿಗೆ ಜಾಮೀನು ಮಂಜೂರು ಮಾಡಿದರು.

ಜಯಲಲಿತಾ ಪರ ವಾದ ಮಂಡಿಸಿದ ಹಿರಿಯ ವಕೀಲ ಫಾಲಿ ಎಸ್‌. ನಾರಿಮನ್‌ ಅವರು, ‘ಹೈಕೋರ್ಟ್‌ಗೆ ಪೇಪರ್‌ ಬುಕ್‌ ಸಲ್ಲಿಸಲು ವಿಳಂಬ ಮಾಡುವುದಿಲ್ಲ. ಈ ವಿಚಾರದಲ್ಲಿ ವಿಳಂಬಕ್ಕೆ ಆಸ್ಪದವೇ ಇಲ್ಲ’ ಎಂದು ನ್ಯಾಯಮೂರ್ತಿಗಳಿಗೆ ತಿಳಿಸಿದರು.

ಸುಪ್ರೀಂಕೋರ್ಟ್‌ನ ವಿಭಾಗೀಯ ಪೀಠವು ಜಯಲಲಿತಾ ಅವರ ದತ್ತು ಪುತ್ರ ವಿ.ಎನ್‌.ಸುಧಾಕರ್‌ ಹಾಗೂ ಜಯಲಲಿತಾ ಆಪ್ತರಾದ ಶಶಿಕಲಾ ಮತ್ತು ಇಳವರಸಿ ಅವರಿಗೆ ಜಾಮೀನು ಮಂಜೂರು ಮಾಡಿತು.

ಸಂಜೆ ವೇಳೆಗೆ ಬಿಡುಗಡೆ?
ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಜಯಲಲಿತಾ ಅವರ ಬಿಡುಗಡೆಗೆ ಸಂಬಂಧಿಸಿದ ಶಿಷ್ಟಾಚಾರಗಳು ಸಂಜೆ ವೇಳೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ನಿಯಮಗಳನ್ನು ಪೂರೈಸಿದ ಬಳಿಕ ಕಾರಾಗೃಹ ಅಧಿಕಾರಿಗಳು ಜಯಲಲಿತಾ ಅವರನ್ನು ಬಿಡುಗಡೆಗೊಳಿಸುವ ಸಾಧ್ಯತೆ ಇದೆ.

‘ಜಯಲಲಿತಾ ಅವರ ಬಿಡುಗಡೆಗೆ ಸಂಬಂಧಿಸಿದಂತೆ ಪಾಲಿಸಬೇಕಾಗಿರುವ ನಿಯಮಾವಳಿಗಳನ್ನು ಪೂರ್ಣಗೊಳಿಸಿದ ಬಳಿಕ ಅವರನ್ನು ಬಿಡುಗಡೆಗೊಳಿಸಲಾಗುವುದು’ ಎಂದು ಕಾರಾಗೃಹಗಳ ಡಿಐಜಿ ಪಿ.ಎಂ.ಜೈಸಿಂಹ ತಿಳಿಸಿದ್ದಾರೆ.

‘ಜಯಲಲಿತಾ ಅವರಿಗೆ ಜಾಮೀನು ಮಂಜೂರಾದ ಸುದ್ದಿ ತಿಳಿದ ಸಾವಿರಾರು ಮಂದಿ ಅಭಿಮಾನಿಗಳು ಪರಪ್ಪನ ಅಗ್ರಹಾರದ ಸುತ್ತಮುತ್ತ ಜಮಾಯಿಸಿದ್ದಾರೆ. ಹೀಗಾಗಿ ಭದ್ರತಾ ವೈಫಲ್ಯವಾಗದಂತೆ ಜಯಲಲಿತಾ ಅವರನ್ನು ತಮಿಳುನಾಡಿಗೆ ಕಳಿಸುವುದು ಸವಾಲಾಗಿದೆ. ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡ ಬಳಿಕ ಜಯಲಲಿತಾ ಅವರನ್ನು ಬಿಡುಗಡೆಗೊಳಿಸಲಾಗುವುದು’ ಎಂದು ಅವರು ಹೇಳಿದ್ದಾರೆ.

ಪರಪ್ಪನ ಅಗ್ರಹಾರ ಕಾರಾಗೃಹದ ಸಮೀಪ ಸಾವಿರಾರು ಸಂಖ್ಯೆಯಲ್ಲಿ ಜಯಲಲಿತಾ ಅಭಿಮಾನಿಗಳು ಹಾಗೂ ಎಐಎಡಿಎಂಕೆ ಪಕ್ಷದ ಕಾರ್ಯಕರ್ತರು ಜಮಾಯಿಸಿದ್ದಾರೆ. ಕಾರಾಗೃಹದಿಂದ ಸುಮಾರು 20 ಕಿ.ಮೀ ದೂರದಲ್ಲಿ ಕರ್ನಾಟಕ ಹಾಗೂ ತಮಿಳುನಾಡು ಗಡಿಯಿದೆ. ಜಯಲಲಿತಾ ಅವರು ರಾಜ್ಯದ ಗಡಿ ದಾಟುವವರೆಗೆ ಅವರ ಭದ್ರತೆಗೆ ಕಟ್ಟೆಚ್ಚರ ವಹಿಸಬೇಕಾದ್ದು ಅಗತ್ಯ ಎಂದು ಹಿರಿಯ ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.